ಮೈಸೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಚಾಮುಂಡೇಶ್ವರಿ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಇದೇ 23ರಂದು ನಾಮಪತ್ರ ಸಲ್ಲಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕಳೆದ ಎರದು ದಿನಗಳಿಂದ ಮೈಸೂರು ಜಿಲ್ಲೆಯಲ್ಲಿ ಪ್ರಚಾರ ಆರಂಭಿಸಿರುವ ಸಿದ್ದರಾಮಯ್ಯ ಅವರು ಇಂದು ಚಾಮುಂಡೇಶ್ವರಿ ವಿಧಾನಸಭೆ ಕ್ಷೇತ್ರದ ಹಾರೋಹಳ್ಳಿಯಲ್ಲಿ ಪ್ರಚಾರ ನಡೆಸಿದರು. ಈ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಚಾಮುಂಡೇಶ್ವರಿ ಕ್ಷೇತ್ರದಿಂದ ಏಳು ಬಾರಿ ಸ್ಪರ್ಧೆ ಮಾಡಿ ಐದು ಬಾರಿ ಗೆಲುವು ಸಾಧಿಸಿದ್ದೇನೆ. ಈ ಬಾರಿ ಮುಖ್ಯಮಂತ್ರಿಯಾಗಿ ಈ ಕ್ಷೇತ್ರದಿಂದ ಕಣಕ್ಕಿಳಿಯುತ್ತಿದ್ದೇನೆ. ಜನತೆ ಆಶೀರ್ವದಿಸಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಈಗಾಗಲೇ ಕೆಲವರು ನಾನು ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ, ಐದು ಬಾರಿ ಈ ಕ್ಷೇತ್ರದಿಂದಲೇ ಗೆದ್ದಿದ್ದೇನೆ. ಅಲ್ಲದೆ, ಈ ಚುನಾವಣೆ ನನ್ನ ಜೀವನದ ಕಡೆಯ ಚುನಾವಣೆ ಆಗಿರುವುದರಿಂದ ಇದೇ ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧರಿಸಿದ್ದೇನೆ. ಯಾವ ಸುಳ್ಳು ಪ್ರಚಾರಕ್ಕೂ ಜನತೆ ಕಿವಿಗೊಡಬಾರದು ಎಂದು ಸಿದ್ದರಾಮಯ್ಯ ಮನವಿ ಮಾಡಿದರು.
ಒಟ್ಟಿನಲ್ಲಿ ಇದುವರೆಗೂ ಸಿದ್ದರಾಮಯ್ಯ ಅವರ ಚುನಾವಣಾ ಕ್ಷೇತ್ರದ ಬಗ್ಗೆ ಹಬ್ಬಿದ್ದ ಎಲ್ಲಾ ವದಂತಿಗಳಿಗೆ ಉತ್ತರ ನೀಡುವ ಮೂಲಕ ಸಿದ್ದರಾಮಯ್ಯ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.