ಬೆಂಗಳೂರು: 2019-20ನೇ ಸಾಲಿನ ಕೇಂದ್ರ ಬಜೆಟ್ ಸಂಪೂರ್ಣವಾಗಿ ರೈತರು, ಯುವಜನರು ಮತ್ತು ಗ್ರಾಮೀಣ ಭಾರತಕ್ಕೆ ಮಾರಕವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಮ್ಮಿಶ್ರ ಸರ್ಕಾರ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಸರಣಿ ಟ್ವೀಟ್ ಮೂಲಕ ಪ್ರಧಾನಿ ಮೋದಿ ಮತ್ತು ವಿತ್ತ ಸಚಿವೆ ನಿರ್ಮಾಲಾ ಸೀತಾರಾಮನ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇಂದು ಸಂಸತ್ತಿನಲ್ಲಿ ಮಂಡನೆಯಾದ ಕೇಂದ್ರ ಬಜೆಟ್ ಸೂರ್ಯನ ಕೆಳಗಿದ್ದರೂ, ಕೈಗೆಟುಕದಂತಿದೆ. ದೇಶದ ರೈತರು ಸರಿಯಾದ ಮಳೆ ಇಲ್ಲದೆ, ಬೆಳೆದ ಬೆಳೆಗೆ ಯೋಗ್ಯ ಬೆಲೆ ಇಲ್ಲದೆ ಕಂಗಾಲಾಗಿದ್ದಾರೆ. ಯುವಜನತೆ ನಿರುದ್ಯೋಗದಿಂದ ಬಳಲುತ್ತಿದ್ದಾರೆ. ಈ ಎರಡು ಮುಖ್ಯ ಸಮಸ್ಯೆಗಳನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.
ರೈತರ ಸಾಲಮನ್ನಾ ಪ್ರಸ್ತಾಪವೇ ಇಲ್ಲ
ಸಾಲ ಮನ್ನಾಕ್ಕಾಗಿ ದೇಶದ ರೈತರು ಒಕ್ಕೊರಲಿನಿಂದ ಮೊರೆ ಇಡುತ್ತಿದ್ದಾರೆ. ರಾಜ್ಯದ ಹಿಂದಿನ ಕಾಂಗ್ರೆಸ್ ಸರ್ಕಾರ ಮತ್ತು ಈಗಿನ ಮೈತ್ರಿ ಸರ್ಕಾರಗಳೆರಡೂ ರೈತರ ಮೊರೆಗೆ ಓಗೊಟ್ಟು ಸಾಲ ಮನ್ನಾ ಮಾಡುವ ದಿಟ್ಟ ನಿರ್ಧಾರ ಕೈಗೊಂಡಿದೆ. ಆದರೆ ನರೇಂದ್ರ ಮೋದಿ ಸರ್ಕಾರ ರೈತರ ಮೊರೆ ಕೇಳದೆ ಇರುವಷ್ಟು ಕಿವುಡಾಗಿದೆ.
ಕೃಷಿ ಕ್ಷೇತ್ರದ ನಿರ್ಲಕ್ಷ್ಯ
ಕೃಷಿ ಬೆಳವಣಿಗೆಗೆ ಪೂರಕವಾಗಿರುವ ನೀರಾವರಿ, ತೋಟಗಾರಿಕೆ, ಸಹಕಾರ ಕ್ಷೇತ್ರಗಳನ್ನು ನಿರ್ಲಕ್ಷಿಸಲಾಗಿದೆ. ನಿರುದ್ಯೋಗ ತಾಂಡವವಾಡುತ್ತಿರುವಾಗ ಅತ್ಯಂತ ಹೆಚ್ಚು ಉದ್ಯೋಗ ಸೃಷ್ಟಿಸುತ್ತಿರುವ ಕೃಷಿ ಕ್ಷೇತ್ರವನ್ನು ನಿರ್ಲಕ್ಷಿಸಿರುವುದರಿಂದ ನಿರುದ್ಯೋಗದ ಪ್ರಮಾಣ ಮಾತ್ರವಲ್ಲ,ವಲಸೆ ಪ್ರಮಾಣ ಕೂಡಾ ಹೆಚ್ಚಾಗಲಿದೆ.
ರೈತ ವಿರೋಧಿ ನೀತಿ
ರೈತರ ಆದಾಯವನ್ನು ದುಪ್ಪಟ್ಟುಗೊಳಿಸುತ್ತೇವೆ ಎಂದು 5 ವರ್ಷಗಳ ಹಿಂದೆ ಆಶ್ವಾಸನೆ ನೀಡಿದ್ದ ಮೋದಿ ಸರ್ಕಾರ ಈ ಆಯವ್ಯಯ ಪತ್ರದಲ್ಲಿಯೂ ಅದರ ಬಗ್ಗೆ ಉಲ್ಲೇಖ ಮಾಡಿಲ್ಲ. ಕಳೆದ ಐದು ವರ್ಷಗಳಲ್ಲಿ ಕೇವಲ 0.3 % ನಷ್ಟು ಮಾತ್ರ ಬಜೆಟ್ ಹಣವನ್ನು ಖರ್ಚು ಮಾಡಿರುವುದು ಸರ್ಕಾರದ ರೈತ ವಿರೋಧಿ ನೀತಿಗೆ ಸಾಕ್ಷಿ.
ಉದ್ಯೋಗ ಸೃಷ್ಟಿಯಲ್ಲಿ ನಿರ್ಲಕ್ಷ್ಯ
ಕಾಯಕವೇ ಕೈಲಾಸ ಎಂಬ ಬಸವಣ್ಣನವರ ವಚನವನ್ನು ಉಲ್ಲೇಖಿಸಿದ ಮಾತ್ರಕ್ಕೆ ಉದ್ಯೋಗ ಸೃಷ್ಟಿಯಾಗುವುದಿಲ್ಲ ಎನ್ನುವುದು ಹಣಕಾಸ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ತಿಳಿದಿರಲಿ. ತಂತ್ರ-ಮಂತ್ರದಿಂದ ಚುನಾವಣೆ ಗೆಲ್ಲಬಹುದೇನೋ, ಆದರೆ ಉದ್ಯೋಗವನ್ನು ಸೃಷ್ಟಿಸಲಾಗುವುದಿಲ್ಲ ಎಂದು ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.
ತೈಲ ಬೆಲೆಯಲ್ಲಿ ಏರಿಕೆ
ಜಾಗತಿಕವಾಗಿ ತೈಲಬೆಲೆ ಕಡಿಮೆಯಾಗುತ್ತಿದ್ದರೂ ಮೋದಿ ನೇತೃತ್ವದ ಸರ್ಕಾರ ಡೀಸೆಲ್ ಮತ್ತು ಪೆಟ್ರೋಲ್ ಬೆಲೆಯನ್ನು ಎರಡು ರೂಪಾಯಿಗಳಷ್ಟು ಏರಿಸಿದೆ. ಇದರಿಂದ ಸಹಜವಾಗಿಯೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಲಿದೆ, ಸಾರಿಗೆ ದುಬಾರಿಯಾಗಲಿದೆ. ಇದರಿಂದ ಸಾಮಾನ್ಯ ಜನರ ಕಷ್ಟಗಳು ಹೆಚ್ಚಾಗಲಿವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.