ಸಿದ್ದಗಂಗಾ ಸ್ವಾಮೀಜಿ ಆರೋಗ್ಯದಲ್ಲಿ ಚೇತರಿಕೆ: ಡಾ.ಪರಮೇಶ್

ಸ್ವಾಮೀಜಿ ಅವರ ರಕ್ತದಲ್ಲಿ ಎಂಡೋಟಾಕ್ಸಿನ್ ಮತ್ತು ಬ್ಯಾಕ್ಟೀರಿಯಾಗಳನ್ನು ಶುದ್ಧೀಕರಿಸಿ ರಕ್ತ ಚಲನೆಗೆ ಸಹಕಾರಿಯಾಗುವಂತಹ ನೂತನ ಚಿಕಿತ್ಸಾ ವಿಧಾನವನ್ನು ನಿನ್ನೆಯಿಂದ ಕೈಗೊಳ್ಳಲಾಗಿದೆ. ಅವರ ದೇಹದಲ್ಲಿ ಪ್ರೋಟೀನ್ ಅಂಶ ಕೂಡ‌ ಜಾಸ್ತಿಯಾಗಿದೆ ಎಂದು ಡಾ.ಪರಮೇಶ್ ಹೇಳಿದರು.  

Last Updated : Jan 7, 2019, 01:26 PM IST
ಸಿದ್ದಗಂಗಾ ಸ್ವಾಮೀಜಿ ಆರೋಗ್ಯದಲ್ಲಿ ಚೇತರಿಕೆ: ಡಾ.ಪರಮೇಶ್ title=
ಸಂಗ್ರಹ ಚಿತ್ರ

ತುಮಕೂರು: ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಸೋಂಕು ಕಡಿಮೆಯಾಗಿದೆ ಎಂದು ಸಿದ್ದಗಂಗಾ ಆಸ್ಪತ್ರೆಯ ಡಾ.ಪರಮೇಶ್ ತಿಳಿಸಿದ್ದಾರೆ.

ಆಸ್ಪತ್ರೆ ಆವರಣದಲ್ಲಿ ಸೋಮವಾರ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿ ಮಾತನಾಡಿದ ಅವರು, ಸ್ವಾಮೀಜಿ ಆರೋಗ್ಯದಲ್ಲಿ ನಿನ್ನೆಗಿಂತ ಇಂದು ಸಾಕಷ್ಟು ಚೇತರಿಕೆ ಕಂಡಿದೆ. ಆದರೂ ಮತ್ತಷ್ಟು ದಿನ ಚಿಕಿತ್ಸೆ ಮುಂದುವರೆಸುವ ಅಗತ್ಯವಿದೆ. ಚೆನ್ನೈಯ ಡಾ. ಮೊಹಮ್ಮದ್ ರೇಲಾ ಅವರ ಸಲಹೆ ಮೇರೆಗೆ ಚಿಕಿತ್ಸೆ ಮುಂದುವರಿಸಿದ್ದು, ಎಲ್ಲಾ ರೀತಿಯ ಚಿಕಿತ್ಸೆಯನ್ನು ಸ್ವಾಮೀಜಿಯವರಿಗೆ ನೀಡಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.

ಸ್ವಾಮೀಜಿಯವರಿಗೆ ಮಠಕ್ಕೆ ಹೋಗಬೇಕೆಂಬ ಅಪೇಕ್ಷೆ ಇದೆ. ಆದರೆ ಅದು ಸದ್ಯದ ಮಟ್ಟಿಗೆ ಸಾಧ್ಯವಿಲ್ಲ. ಹಾಗಾಗಿ ಆಸ್ಪತ್ರೆಯಲ್ಲಿಯೇ ಶಿವಕುಮಾರ ಸ್ವಾಮೀಜಿ ಚಿಕಿತ್ಸೆ ಪಡೆಯುತ್ತಿರುವ ಕೊಠಡಿಯಲ್ಲಿ ವೇದ-ಮಂತ್ರ, ವಚನಗಳನ್ನು ನಿರಂತರವಾಗಿ ಬಿತ್ತರಿಸಲಾಗುತ್ತಿದೆ. ಸ್ವಾಮೀಜಿ ಅವರ ರಕ್ತದಲ್ಲಿ ಎಂಡೋಟಾಕ್ಸಿನ್ ಮತ್ತು ಬ್ಯಾಕ್ಟೀರಿಯಾಗಳನ್ನು ಶುದ್ಧೀಕರಿಸಿ ರಕ್ತ ಚಲನೆಗೆ ಸಹಕಾರಿಯಾಗುವಂತಹ ನೂತನ ಚಿಕಿತ್ಸಾ ವಿಧಾನವನ್ನು ನಿನ್ನೆಯಿಂದ ಕೈಗೊಳ್ಳಲಾಗಿದೆ. ಅವರ ದೇಹದಲ್ಲಿ ಪ್ರೋಟೀನ್ ಅಂಶ ಕೂಡ‌ ಜಾಸ್ತಿಯಾಗಿದೆ. ನಿನ್ನೆ 3ರಷ್ಟಿದ್ದ ಪ್ರೋಟಿನ್, ಇಂದು 3.4 ರಷ್ಟು ಆಗಿದೆ ಎಂದು ಡಾ.ಪರಮೇಶ್ ಹೇಳಿದರು.

Trending News