ಬೆಂಗಳೂರು: ಒಂದು ಕಾಲದ ಹೆಸರಾಂತ ವಾರ ಪತ್ರಿಕೆ 'ಹಾಯ್ ಬೆಂಗಳೂರು' ಸಂಪಾದಕ ಹಾಗೂ ಪತ್ರಕರ್ತ ರವಿಬೆಳಗೆರೆ ಮತ್ತು ಯಲಹಂಕ ವಾಯ್ಸ್ ಸಂಪಾದಕ ಅನಿಲ್ ರಾಜ್ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಗಳನ್ನು ವಿಧಾನ ಸಭೆಯ ಹಕ್ಕು ಭಾದ್ಯತೆ ಸಮಿತಿ ತಿರಸ್ಕರಿಸಿ, ಇಬ್ಬರು ಪತ್ರಕರ್ತರಿಗೂ ಜೈಲು ಶಿಕ್ಷೆ ವಿಧಿಸಬೇಕೆಂಬ ಹಿಂದಿನ ನಿರ್ಣಯವನ್ನು ಎತ್ತಿ ಹಿಡಿದಿದೆ. ಶಾಸಕರ ವಿರುದ್ಧ ಲೇಖನ ಪ್ರಕಟಿಸಿದ ಪ್ರಕರಣ ಸಂಬಂಧ ಇಬ್ಬರೂ ಪತ್ರಕರ್ತರನ್ನು ಬಂಧಿಸಲು ವಿಧಾನಸಭಾ ಸಚಿವಾಲಯದಿಂದ ಗೃಹ ಇಲಾಖೆಗೆ ಪತ್ರ ರವಾನೆಯಾದ ಹಿನ್ನೆಲೆಯಲ್ಲಿ ಇದೀಗ ರವಿ ಬೆಳಗೆರೆ ಹಾಗೂ ಅನಿಲ್ ರಾಜ್ ಇಬ್ಬರೂ ಹೈಕೋರ್ಟ್ ಮೊರೆಹೋಗಿದ್ದಾರೆ.
ಈ ಹಿಂದೆಯೂ ವಿಧಾನಸಭೆ ಹಕ್ಕು ಬಾಧ್ಯತೆ ಸಮಿತಿ ಇಬ್ಬರೂ ಪತ್ರಕರ್ತರಿಗೆ ಒಂದು ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ.ದಂಡವನ್ನು ಶಿಕ್ಷೆಯಾಗಿ ವಿಧಿಸಿತ್ತು. ಈ ಶಿಕ್ಷೆಯನ್ನು ರದ್ದುಗೊಳಿಸುವಂತೆ ಈಗ ರವಿ ಬೆಳಗೆರೆ ಮತ್ತು ಅನಿಲ್ ರಾಜ್ ಹೈಕೋರ್ಟ್ ನಲ್ಲಿ ಸಲ್ಲಿಸಿರುವ ಅರ್ಜಿಯು ಇಂದು ವಿಚಾರಣೆಗೆ ಬರುವ ಸಾಧ್ಯತೆ ಇದೆ.