ಬೆಂಗಳೂರು: ದೇಶದಾದ್ಯಂತ ಕರೋನಾವೈರಸ್ (Coronavirus) ಕೋವಿಡ್- 19 ಸೋಂಕು ಹರಡುವುದನ್ನು ತಡೆಗಟ್ಟಲು ಸರ್ಕಾರ ಲಾಕ್ಡೌನ್ ಮಾಡ್ತಿದೆ. ಹಾಗಾಗಿ ಜನರು ಕೆಲಸ ಇಲ್ಲದೆ ಮನೆಯಲ್ಲೇ ಇರೋದ್ರಿಂದ ಅವರಿಗೆ ಆಹಾರದ ಸಮಸ್ಯೆ ಬಾರದಂತೆ ನೋಡಿಕೊಳ್ಳುವುದು ನಮ್ಮ ಇಲಾಖೆಯ ಜವಾಬ್ದಾರಿಯಾಗಿದೆ. ಅದಕ್ಕಾಗೆ ಕೇಂದ್ರ ಸರ್ಕಾರದಿಂದ ಮತ್ತು ರಾಜ್ಯಸರ್ಕಾರದಿಂದ ಪಡಿತರಿಗೆ ನೀಡಲು ಸಾಕಷ್ಟು ಆಹಾರ ಧಾನ್ಯವನ್ನ ಕೊಡಲಾಗಿದ್ದು, ಇದನ್ನೆ ಕೆಲವು ನ್ಯಾಯಬೆಲೆ ಅಂಗಡಿಯ ಮಾಲಿಕರು ದುರುಪಯೋಗ ಮಾಡಿಕೊಂಡು ಜನರ ಬಳಿ ಹಣ ಪಡೆಯುವುದು, ಪಡಿತರ ರೇಷನ್ ನಲ್ಲಿ ತೂಕದ ವ್ಯತ್ಯಸ ಮಾಡುವುದನ್ನ ಮಾಡಿದ್ದಾರೆ. ಹಾಗಾಗಿ ರಾಜ್ಯದಲ್ಲಿ ಏಪ್ರಿಲ್ ತಿಂಗಳಿನಲ್ಲೇ 146 ಅಂಗಡಿ ಲೈಸೆನ್ಸ್ ಅಮಾನತು ಮಾಡಲಾಗಿದೆ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ. ಗೋಪಾಲಯ್ಯ (K Gopalaiah) ತಿಳಿಸಿದ್ದಾರೆ.
ದಾವಣಗೆರೆಯಲ್ಲಿ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಗೋಪಾಲಯ್ಯ, ಪಡಿತರ ಆಹಾರ ಸಾಗಣೆ ಮಾಡುವ ವಾಹನಗಳಿಗೆ ಜಿಪಿಎಸ್ ಅಳವಡಿಸುವುದಕ್ಕೆ ತೀರ್ಮಾನ ಮಾಡಿದ್ದು ಇದರಿಂದ ಅಕ್ರಮ ಪಡಿತರ ಸಾಗಣೆ ತಡೆಗಟ್ಟಲು ಸಾಧ್ಯವಾಗುತ್ತದೆ. ಹಾಗೇ ನ್ಯಾಯಬೆಲೆ ಅಂಗಡಿ ಮಾಲಿಕರು ಜನರಿಗೆ ಮೋಸ ಮಾಡ್ತಿರೋದು ಕಂಡುಬಂದರೆ ಜಿಲ್ಲಾಧಿಕಾರಿಗಳು ಅವರ ಮೇಲೆ ಕ್ರಮ ಜರುಗಿಸಬೇಕು ಎಂದು ಆದೇಶ ನೀಡಲಾಗಿದೆ ಎಂದರು.
ಇನ್ನು ಮತ್ತೊಂದು ಕಡೆ ನೋಡೋದಾದ್ರೆ ದಾವಣಗೆರೆಯಲ್ಲಿ ಪಡಿತರ ವಿತರಣೆ ಉತ್ತಮವಾಗಿದ್ದು, ಲಾಕ್ಡೌನ್ (Lockdown) ಸಂದರ್ಭದಲ್ಲಿ ಪಡಿತರ ಸೋರಿಕೆ ತಡೆಯಲು ಪ್ರಯತ್ನಿಸುತ್ತಿದ್ದಾರೆ. ಜೊತೆಗೆ ಇದೇ ಮೊದಲ ಬಾರಿ ಇಲಾಖೆ ಶೇಕಡ 94.33ರಷ್ಟು ಪ್ರಗತಿ ಸಾಧಿಸಿದ್ದು ಇದು ದಾಖಲೆಯಾಗಿದೆ ಎಂದು ಹೇಳಿದರು.
ನ್ಯಾಯಬೆಲೆ ಅಂಗಡಿ ಮುಂದೆ ದಾಸ್ತಾನು, ಸೂಚನಾ ಪಟ್ಟಿಯನ್ನ ಖಡ್ಡಾಯವಾಗಿ ಹಾಕಬೇಕು. ತೂಕದಲ್ಲಿ ಯಾವುದೇ ವ್ಯತ್ಯಯವಾಗದಂತೆ ನೋಡಿಕೊಳ್ಳಬೇಕು, ಪಡಿತರ ಕಾರ್ಡ್ದಾರರಿಂದ ಯಾವುದೇ ರೀತಿ ಹಣ ಸಂಗ್ರಹಿಸಬಾರದು ಎಂದು ಕಟ್ಟಅಪ್ಪಣೆ ಮಾಡಿದ್ರು.
ಜೊತೆಗೆ 1.88 ಲಕ್ಷ ಬಿಪಿಎಲ್ ಹೊಸ ಅರ್ಜಿ ಗಳು ಬಂದಿವೆ ಮತ್ತು ಈಗಾಗಲೇ ಬಿಪಿಎಲ್ ಕಾರ್ಡ್ದಾರರಿಗೆ ಉಚಿತವಾಗಿ ಪಡಿತರ ವಿತರಿಸಲಾಗುವುದು. ಮತ್ತು ಉಜ್ವಲ ಯೋಜನೆ ಅಡಿ ರಾಜ್ಯದಲ್ಲಿ 31.5 ಲಕ್ಷ ಎಲ್ಪಿಜಿ ಸಂಪರ್ಕ ಹೊಂದಿದ್ದು 3 ತಿಂಗಳು ಗ್ಯಾಸ್ ಸಿಲಿಂಡರ್ ಉಚಿತ ವಿತರಣೆ ಜಾರಿಯಲ್ಲಿದೆ. ಭತ್ತ, ರಾಗಿ ಖರೀದಿಗೆ ಮೇ. ತಿಂಗಳವರೆಗೆ ಅವಕಾಶವಿದೆ ಹಾಗೂ 1 ಲಕ್ಷ ಟನ್ ರವೆ, ಜೋಳ, ಖರೀದಿಗೆ ಕೇಂದ್ರ ಒಪ್ಪಿಗೆ ಸೂಚಿಸಿದೆ ಎಂದು ತಿಳಿಸಿದರು.