Mysuru Dasara Festival: ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಸಾಂಸ್ಕೃತಿಕ ನಗರಿ ಮೈಸೂರು

ಸಾಂಸ್ಕೃತಿಕ ನಗರಿ ಮೈಸೂರು ಇಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ವಿಶ್ವವಿಖ್ಯಾತವಾಗಿರುವ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬೆಳ್ಳಿ ಪಲ್ಲಕ್ಕಿಯಲ್ಲಿ ಪವಡಿಸಿರುವ ನಾಡದೇವಿ ತಾಯಿ ಶ್ರೀ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ  ಆರತಿ ಬೆಳಗಿ, ಪುಷ್ಪಾರ್ಚನೆಗೈದು ನಮಿಸಿ, ದೀಪ ಬೆಳಗುವ  ಮೂಲಕ ವಿಧ್ಯುಕ್ತ ಚಾಲನೆ ನೀಡಿದರು.

Written by - Puttaraj K Alur | Last Updated : Sep 26, 2022, 11:26 AM IST
  • ಸಾಂಸ್ಕೃತಿಕ ನಗರಿ ಮೈಸೂರು ಸೋಂವಾರ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು
  • ತಾಯಿ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಸಲ್ಲಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು
  • ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸಿಎಂ ಬಸವರಾಜ್ ಬೊಮ್ಮಾಯಿ ಸೇರಿ ಅನೇಕ ಗಣ್ಯರು ಭಾಗಿ
Mysuru Dasara Festival: ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಸಾಂಸ್ಕೃತಿಕ ನಗರಿ ಮೈಸೂರು title=
ನಾಡಹಬ್ಬ ಮೈಸೂರು ದಸರಾಗೆ ಚಾಲನೆ

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರು ಇಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ವಿಶ್ವವಿಖ್ಯಾತವಾಗಿರುವ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬೆಳ್ಳಿ ಪಲ್ಲಕ್ಕಿಯಲ್ಲಿ ಪವಡಿಸಿರುವ ನಾಡದೇವಿ ತಾಯಿ ಶ್ರೀ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ  ಆರತಿ ಬೆಳಗಿ, ಪುಷ್ಪಾರ್ಚನೆಗೈದು ನಮಿಸಿ, ದೀಪ ಬೆಳಗುವ  ಮೂಲಕ ವಿಧ್ಯುಕ್ತ ಚಾಲನೆ ನೀಡಿದರು.

ಬೆಳಗ್ಗೆ 9.45ರಿಂದ‌1 0.05ರ ವೃಶ್ಚಿಕ ಲಗ್ನದಲ್ಲಿ ಸಾಂಪ್ರದಾಯಿಕ, ವೈಭವಯುತವಾದ ದಸರಾ ಮಹೋತ್ಸವಕ್ಕೆ ಚಾಲನೆ ಲಭಿಸಿತು. ಬಳಿಕ ನಾಡಗೀತೆ ಮೊಳಗಿತು. ಚಾಮುಂಡಿಬೆಟ್ಟಕ್ಕೆ ಆಗಮಿಸುತ್ತಿದ್ದಂತೆಯೇ ಮೊದಲು ಚಾಮುಂಡೇಶ್ವರಿ ದೇವಿಯ ದರ್ಶನಕ್ಕೆ ತೆರಳಿದ ರಾಷ್ಟ್ರಪತಿಗಳು ತಾಯಿಯ ದರ್ಶನ ಪಡೆದರು. ಇದೇ ವೇಳೆ ದೇವಸ್ಥಾನವನ್ನು ವೀಕ್ಷಿಸಿ ಮಾಹಿತಿ ಪಡೆದುಕೊಂಡರು.

ಇದನ್ನೂ ಓದಿ: Mysuru dasara: ವಿಶ್ವವಿಖ್ಯಾತ ಮೈಸೂರು ದಸರಾಗೆ ಚಾಲನೆ ನೀಡಿದ ರಾಷ್ಟ್ರಪತಿ ದ್ರೌಪತಿ ಮುರ್ಮು

ಬಳಿಕ ಅವರು ವೇದಿಕೆಗೆ ಆಗಮಿಸುತ್ತಿದ್ದಂತೆಯೇ ಪೊಲೀಸ್ ಬ್ಯಾಂಡ್ ವತಿಯಿಂದ ರಾಷ್ಟ್ರಗೀತೆ ಮೊಳಗಿತು. ಸಭೆಯಲ್ಲಿ ಸೂಜಿ ಬಿದ್ದರೂ ಸದ್ದಾಗುವಷ್ಟು ಶಾಂತತೆ ಇತ್ತು. ಹೆಚ್ಚಿನ ಸಂಖ್ಯೆಯಲ್ಲಿ ಚಿಣ್ಣರು ಆಗಮಿಸಿದ್ದರೂ ಸಹ ಶಾಂತಚಿತ್ತರಾಗಿ ಕುಳಿತು ಕಾರ್ಯಕ್ರಮವನ್ನು ತದೇಕಚಿತ್ತರಾಗಿ ವೀಕ್ಷಿಸಿ ಭಾರತದ ಪ್ರಥಮ ಪ್ರಜೆಯನ್ನು ಕಣ್ತುಂಬಿಸಿಕೊಂಡು ಪುಳಕಿತರಾದರು.

ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿ ಸಿಂಗಾರಗೊಂಡಿತ್ತು. ಹಚ್ಚ ಹಸಿರು ಜರತಾರಿ ಸೀರೆ ತೊಡಿಸಿ ದೇವಿಗೆ ಸಿಂಗರಿಸಲಾಗಿತ್ತು. ಬಂಗಾರದ ಒಡವೆಗಳು, ತಾಳಿ, ವಿವಿಧ ಬಗೆಯ ಹೂವುಗಳಿಂದ ತಾಯಿ ಚಾಮುಂಡಿಯ ಉತ್ಸವ ಮೂರ್ತಿಯನ್ನು ಅಲಂಕಾರಿಸಲಾಗಿತ್ತು. ಬೆಳ್ಳಿ ಪಲ್ಲಕ್ಕಿಯಲ್ಲಿ ಮಹಿಷ ಮರ್ದಿನಿ‌ ಅವತಾರದ ದೇವಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ದಸರಾಗೆ ವಿದ್ಯುಕ್ತ ಚಾಲನೆ ದೊರೆಯಿತು.

ಇದನ್ನೂ ಓದಿ: Good News: ನವರಾತ್ರಿಗೆ ಬಂಪರ್ ಆಫರ್ ಘೋಷಿಸಿದ KSRTC

ವೇದಿಕೆಯಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಖಾತೆ ಸಚಿವ ಪ್ರಹ್ಲಾದ್ ಜೋಶಿ, ಕೇಂದ್ರದ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಶಾಸಕ ಜಿ.ಟಿ.ದೇವೇಗೌಡ ಉಪಸ್ಥಿತರಿದ್ದರು.

ವೇದಿಕೆಯ ಮುಂಭಾಗದಲ್ಲಿ ಶಾಸಕರಾದ ಎಲ್.ನಾಗೇಂದ್ರ, ಎಸ್.ಎ.ರಾಮದಾಸ್, ತನ್ವೀರ್ ಸೇಠ್, ವಿಧಾನ ಪರಿಷತ್ ಸದಸ್ಯರಾದ ಹೆಚ್.ವಿಶ್ವನಾಥ್, ಸಿ.ಎನ್.ಮಂಜೇಗೌಡ , ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಮತ್ತಿತರರಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News