ಜನಸ್ನೇಹಿ ಪೊಲೀಸರಾಗಲು ಆರಂಭದಿಂದಲೇ ತರಬೇತಿ: ಜಿ.ಪರಮೇಶ್ವರ್

ಪೊಲೀಸರ ಮೇಲಿನ‌ ಭಯ ಜನಸಾಮಾನ್ಯರಲ್ಲಿ ಹೋಗಬೇಕು. ಪೊಲೀಸರು ಕೂಡ ಹೆಚ್ಚು ಜನಸ್ನೇಹಿ ಸೇವೆ ನೀಡಬೇಕು ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದರು.

Last Updated : Nov 19, 2018, 01:43 PM IST
ಜನಸ್ನೇಹಿ ಪೊಲೀಸರಾಗಲು ಆರಂಭದಿಂದಲೇ ತರಬೇತಿ: ಜಿ.ಪರಮೇಶ್ವರ್ title=

ಬೆಂಗಳೂರು: ಪೊಲೀಸರ ಬಗ್ಗೆ ಜನರಲ್ಲಿರುವ ಭಯ ಹೋಗಾಡಿಸಲು ಮತ್ತು ಪೊಲೀಸರು ಜನಸ್ನೇಹಿಯಾಗಿ ಕಾರ್ಯನಿರ್ವಹಿಸುವಂತೆ ಮಾಡಲು ವಿಶೇಷ ತರಬೇತಿ ನೀಡಲಾಗುವುದು ಎಂದು ಉಪ ಮುಖ್ಯಮಂತ್ರಿ ಹಾಗೂ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ.

ನಗರದ ತಿಲಕ್ ನಗರ ಪೊಲೀಸ್ ಠಾಣೆ ಹಾಗೂ ಸಹಾಯಕ ಪೊಲೀಸ್‌ ಆಯುಕ್ತರ ಕಚೇರಿ ನವೀಕರಣಗೊಂಡ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಗಲು ರಾತ್ರಿ ಎನ್ನದೇ ಶ್ರಮಿಸುವ ಪೊಲೀಸರನ್ನು ಸಮಾಜದಲ್ಲಿ ಬಿಂಬಿಸುವ ರೀತಿ ಸರಿ ಇಲ್ಲ. ಅವರ ಮೇಲಿನ‌ ಭಯ ಜನಸಾಮಾನ್ಯರಲ್ಲಿ ಹೋಗಬೇಕು. ಪೊಲೀಸರು ಕೂಡ ಹೆಚ್ಚು ಜನಸ್ನೇಹಿ ಸೇವೆ ನೀಡಬೇಕು.‌ ಅದಕ್ಕಾಗಿ ತರಬೇತಿ ನೀಡುವ ಸಂದರ್ಭದಲ್ಲಿಯೇ ಸ್ನೇಹಪೂರ್ವಕ ನಡವಳಿಕೆ ಬಗ್ಗೆಯೂ ತರಬೇತಿ ನೀಡಲಾಗುವುದು ಎಂದರು.

ಕರ್ನಾಟಕ ಪೊಲೀಸ್‌ ಅನ್ನು ಆಧುನೀಕರಣ ಗೊಳಿಸುವ ನಿಟ್ಟಿನಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ. ಕೇಂದ್ರ ಸರಕಾರದ ನೆರವಿನೊಂದಿಗೆ ಸಿಸಿ ಕ್ಯಾಮರಾ ಅಳವಡಿಕೆ, ಟ್ರಾಫಿಕ್‌ ನಿಯಮ ಪಾಲನೆಗೂ ಕ್ರಮ ಕೈಗೊಳ್ಳಲಾಗುತ್ತಿದೆ. ಜೊತೆಗೆ ಪೊಲೀಸ್‌ ಸಿಬ್ಬಂದಿಯ ವೇತನ ತಾರತಮ್ಯ ಸರಿದೂಗಿಸಲು ಔರಾದ್ಕರ್‌ ಅವರ ವರದಿಯನ್ನು ಶೀಘ್ರವೇ ಜಾರಿ ಮಾಡಲು ಸರ್ಕಾರ ಮುಂದಾಗಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ತಿಲಕ್ ನಗರ ಪೊಲೀಸ್‌ ಠಾಣೆ ನವೀಕರಣ ಮಾಡಿರುವ ಮತ್ತು 22 ಕೋಟಿ ರೂ. ವೆಚ್ಚದಲ್ಲಿ ಸೈಬರ್ ಕ್ರೈಂ ವಿಭಾಗದ ತರಬೇತಿ ಕಟ್ಟಡವನ್ನು ನಿರ್ಮಿಸಿಕೊಡುತ್ತಿರುವ ಇನ್‌ಫೋಸಿಸ್‌ ಸಂಸ್ಥೆಗೆ ಧನ್ಯವಾದ ಸಲ್ಲಿಸಿದರು. 

ಕಾರ್ಯಕ್ರಮದಲ್ಲಿ ಇನ್‌ಫೋಸಿಸ್‌ ಮುಖ್ಯಸ್ಥೆ ಸುಧಾಮೂರ್ತಿ, ನಗರ ಪೊಲೀಸ್‌ ಆಯುಕ್ತ ಸುನೀಲ್‌ ಕುಮಾರ್‌, ಶಾಸಕಿ ಸೌಮ್ಯ, ಮೇಯರ್ ಗಂಗಾಂಬಿಕೆ ಪಾಲ್ಗೊಂಡಿದ್ದರು.

Trending News