ಹುಬ್ಬಳ್ಳಿ: ಈತ ಕಲಿತದ್ದು 10ನೆಯ ತರಗತಿ. ಆದ್ರೆ ಈತನಿಗೆ ಒಲಿದಿದ್ದು ಪದ್ಮಶ್ರೀ ಪ್ರಶಸ್ತಿ. ರೈತನಾಗಿ ವಿಶೇಷ ತಂತ್ರಜ್ಞಾನದ ಮೂಲಕವೇ ಹೊಸ ಹೊಸ ಆವಿಷ್ಕಾರ ಮಾಡಿದಕ್ಕೆ ಸದ್ಯ ಪದ್ಮಶ್ರೀ ಹುಡುಕಿಕೊಂಡು ಬಂದಿದೆ. ಇದೀಗ ಪದ್ಮಶ್ರೀ ಪಡೆಯಲಿರುವ ಆತನ ಸಾಧನೆ ಎಲ್ಲರ ಮೆಚ್ಚುಗೆ ಗೆ ಪಾತ್ರವಾಗಿದೆ.
ಹೀಗೆ ತಾವೇ ಸಿದ್ದ ಮಾಡಿರುವ ಯಂತ್ರಗಳನ್ನ ಪರಿಶೀಲನೆ ಮಾಡುತ್ತಿರುವ ವ್ಯಕ್ತಿ.. ತಮ್ಮದೇ ಆದ ವಿಶೇಷತೆಗಳುಳ್ಳ ಕೂರಿಗೆ ಯಂತ್ರಗಳನ್ನ ಸಿದ್ಧಪಡಿಸಿ ಇದೀಗ ಒಂದೊಂದಾಗಿ ಮಾರಾಟಕ್ಕೆ ಸಿದ್ಧವಾಗಿರುವ ಯಂತ್ರಗಳು.. ಹೌದು ಈ ಯಂತ್ರಗಳಿಂದಲೇ ಇವರಿಗೆ ಪದ್ಮಶ್ರೀ ಹುಡುಕಿಕೊಂಡು ಬಂದಿದೆ. ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದ ಅಬ್ದುಲ್ ಖಾದರ್ ನಡಕಟ್ಟಿನ್ ರಿಗೆ ಈ ಬಾರಿಯ ಗಣರಾಜ್ಯೋತ್ಸವದ ಅಂಗವಾಗಿ ಕೊಡಮಾಡುವ ಪದ್ಮಶ್ರೀ ಗೌರವಕ್ಕೆ ಅಬ್ದುಲ್ ಪಾತ್ರರಾಗಿದ್ದಾರೆ. ಮೂಲತಃ ಕೃಷಿ ಕುಟುಂಬದಲ್ಲೇ ಹುಟ್ಟಿದ್ದ ಅಬ್ದುಲ್ ರೈತರಿಗೆ ಏನಾದ್ರು ವಿಶೇಷವಾಗಿ ಮತ್ತು ಅತಿವೇಗವಾಗಿ ಉಳುಮೆ ಮಾಡುವ ಯಂತ್ರವನ್ನ ಕಂಡುಹಿಡಿಯಬೇಕು ಅಂತ ನಿರಂತರ ಪ್ರಯತ್ನದಿಂದ ಕೂರಿಗೆ ಯಂತ್ರವನ್ನ ಕಂಡುಹಿಡಿದಿದ್ದಾರೆ. ಮೊದ ಮೊದಲು ಆಸ್ತಿಯನ್ನು ಮಾರಾಟ ಮಾಡಿ ಕೃಷಿ ಯಂತ್ರಗಳನ್ನ ತಯಾರು ಮಾಡುವ ವೇಳೆ ಇವರನ್ನ ಜನರು ಹುಚ್ಚ ಅಂತಲೂ ಕರೆದ ಉದಾಹರಣೆಗಳಿವೆಯಂತೆ. ಅಲ್ಲಿಂದ ಜನರು ಏನೇ ಹೇಳಿದ್ರು ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳದ ಅಬ್ದುಲ್ ಹೊಸ ಹೊಸ ಅವಿಷ್ಕಾರಗಳ ಜೊತೆಗೆ ರೈತರಿಗೆ ಅನುಕೂಲ ಆಗುವಂತಹ ಕೃಷಿ ಯಂತ್ರೋಪಕರಣಗಳನ್ನ ತಯಾರಿಸಿದರು..
ಇದನ್ನೂ ಓದಿ: ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್ ಎಂದಾದರೂ ಗೌರವ ನೀಡಿದೆಯೇ?: ಬಿಜೆಪಿ
ಮಳೆಗಾಲ ಬರುತ್ತಿದ್ದಂತೆಯೇ ರೈತರು ಕೃಷಿ ಚಟುವಟಿಕೆ ಶುರು ಮಾಡುತ್ತಾರೆ. ಒಮ್ಮೆಲೇ ಎಲ್ಲರೂ ಕೃಷಿ ಚಟುವಟಿಕೆ ಶುರು ಮಾಡೋದ್ರಿಂದಾಗಿ ಎತ್ತುಗಳ ಹಾಗೂ ಕೂಲಿ ಕಾರ್ಮಿಕರಿಗೆ ಭಾರೀ ಬೇಡಿಕೆ ಬರುತ್ತದೆ.ಇನ್ನು ಹೆಚ್ಚು ಹೊಲ ಇದ್ದವರ ಪಾಡಂತೂ ಹೇಳತೀರದು. ಹೊಲ ಸಮತಟ್ಟು ಮಾಡಲು, ಊಳಲು ಯಂತ್ರಗಳನ್ನು ಬಳಸಿಕೊಳ್ಳಬಹುದು. ಆದಾದ ಬಳಿಕ ಬಿತ್ತನೆ ಮಾಡಲು ಎತ್ತುಗಳ ಅಥವಾ ಕೃಷಿ ಕೂಲಿ ಕಾರ್ಮಿಕರ ಅವಶ್ಯಕತೆ ಇದ್ದೇ ಇರುತ್ತೆ. ಇದನ್ನು ಗಮನಿಸಿದ ನಡಕಟ್ಟಿನ್, ರೈತರಿಗೆ ಅತ್ಯವಶ್ಯಕವಾದ ಕೂರಿಗೆ, ಅಂದರೆ ಬಿತ್ತನೆ ಮಾಡೋ ಯಂತ್ರವನ್ನು ಕಂಡು ಹಿಡಿಯಬೇಕೆಂದು ನಿರ್ಧರಿಸಿದರು. ಆದರೆ ಅದು ಅಷ್ಟು ಸುಲಭದ ಮಾತಾಗಿರಲಿಲ್ಲ. ಏಕೆಂದರೆ ಬೇರೆ ಬೇರೆ ಬೆಳೆಗಳಿಗೆ ಮಧ್ಯದಲ್ಲಿನ ಅಂತರವೂ ಬೇರೆ ಬೇರೆಯಾಗಿರುತ್ತದೆ.
ಇನ್ನು ಬೀಜವನ್ನು ಭೂಮಿಯಲ್ಲಿ ಬಿತ್ತುವಾಗ ತುಂಬಾನೇ ಹುಷಾರಾಗಿಯೇ ಕೆಲಸ ಮಾಡಬೇಕಾಗುತ್ತದೆ. ಇದೆಲ್ಲವನ್ನು ಕಾರ್ಮಿಕರ ಕೈಯಿಂದ ಮಾಡಿಸಿದರೆ ಉತ್ತಮ. ಆದರೆ ಅದನ್ನು ಯಂತ್ರವೊಂದು ಮಾಡುತ್ತದೆ ಅನ್ನೋ ಕಲ್ಪನೆಯೇ ಒಂದು ವಿಚಿತ್ರ. ಅಂಥ ಕಲ್ಪನೆಯನ್ನು ಸಾಕಾರಗೊಳಿಸಲು ಅಬ್ದುಲ್ ಖಾದರ್ ಸಿದ್ಧವಾಗಿದ್ದರು. ಅದು ಅವರ ಜೀವಮಾನದ ಶ್ರೇಷ್ಠ ಸಂಶೋಧನೆಯಷ್ಟೇ ಅಲ್ಲ, ತಮ್ಮ ಜೀವನದ ಕೊನೆಯ ಸಂಶೋಧನೆ ಅಂತಾನೂ ಅವರು ನಂಬಿದ್ದರು. ಆರು ತಿಂಗಳ ಕಾಲ ಹಗಲು-ರಾತ್ರಿ ಯೋಚಿಸಿ, ಅದಕ್ಕೊಂದು ರೂಪ ನೀಡಿದರು. ಅದೇ ಇವತ್ತು ದಕ್ಷಿಣ ಭಾರತಾದ್ಯಂತ ಪ್ರಸಿದ್ಧಿಯಾಗಿರೋ “ನಡಕಟ್ಟಿನ್ ಕೂರಿಗೆ”
ಸಣ್ಣದಾಗಿ ಆರಂಭವಾದ ಈ ಸಂಶೋಧನೆ ಇದೀಗ ಹೆಮ್ಮರವಾಗಿ ಬೆಳೆದಿದ್ದು ಅಲ್ಲದೆ ನೂರಾರು ಜನರಿಗೆ ಉದ್ಯೋಗವನ್ನ ಸಹ ನೀಡಿದೆ. ತಮ್ಮದೇ ಆದ ಕೃಷಿ ಉತ್ಪನ್ನಗಳ ಮೂಲಕ ರೈತರ ಕೃಷಿಗೆ ಅನುಕೂಲ ಮಾಡಿಕೊಟ್ಟಿದ್ದು, ಈ ಪ್ರಶಸ್ತಿ ಇಡೀ ರೈತ ಕುಲಕ್ಕೆ ಬಂದ ಪ್ರಶಸ್ತಿ ಅನ್ನೋದು ಅಬ್ದುಲ್ ಅವರ ಮಾತು.
'ವಿಶ್ವಶಾಂತಿ ಕೃಷಿ ಸಂಶೋಧನಾ ಕೇಂದ್ರ’ದಲ್ಲಿ ಹೊಸ ಬಗೆಯ ಕೃಷಿ ಯಂತ್ರೋಪಕರಣಗಳ ಸಂಶೋಧನೆಯಲ್ಲಿ 62 ವರ್ಷದ ಅಬ್ದುಲ್ ಖಾದರ್ ನಡಕಟ್ಟಿನ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.ಮಹಾರಾಷ್ಟ್ರ, ಆಂಧ್ರ ಪ್ರದೇಶ ಹಾಗೂ ಇನ್ನಿತರ ರಾಜ್ಯಗಳ ಕೃಷಿಕರೂ ಈ ಯಂತ್ರಕ್ಕಾಗಿ ಬೆನ್ನು ಬಿದ್ದಿದ್ದಾರೆ.
ಅಷ್ಟಕ್ಕೂ ಈ ಯಂತ್ರ ಇಷ್ಟೆಲ್ಲ ಜನಪ್ರಿಯವಾಗಲೂ ಕಾರಣವಿದೆ. ಒಬ್ಬ ರೈತ, ಕೃಷಿಯಲ್ಲಿ ತಾನು ಅನುಭವಿಸಿ ರುವ ಸಮಸ್ಯೆಗಳನ್ನೇ ಆಧರಿಸಿ ಅದಕ್ಕೆ ಪರಿಹಾರವೆಂಬಂತೆ ಸಿದ್ಧವಾದ ಯಂತ್ರಗಳಿವು. ಅಷ್ಟೇ ಅಲ್ಲದೇ, ವರ್ಷಗಳಾ ದರೂ ಮುಕ್ಕಾಗದೆ ಸದಾ ಸುಸ್ಥಿತಿಯಲ್ಲಿರುವುದು ಈ ರೈತರನ್ನೆಲ್ಲ ಇಲ್ಲಿಗೆ ತಂದು ನಿಲ್ಲಿಸುತ್ತಿದೆ.
4 ದಶಕಗಳ ಸಾಧನೆ
ಬಾಲ್ಯದಿಂದಲೇ ಆವಿಷ್ಕಾರಗಳಲ್ಲಿ ಆಸಕ್ತಿ ಹೊಂದಿದ್ದ ಅಬ್ದುಲ್ ಖಾದರ್, ಇದೀಗ 40 ವರ್ಷಗಳ ಸುದೀರ್ಘ ವೃತ್ತಿ ಬದುಕನ್ನು ಪೂರೈಸಿದ್ದಾರೆ. ಕೃಷಿ ಯಂತ್ರೋಪಕರಣ ಗಳ ಅಭಿವೃದ್ಧಿಯಲ್ಲಿ ಹೊಸ ಆವಿಷ್ಕಾರಗಳನ್ನು ಮಾಡುತ್ತಿದ್ದಾರೆ. ಇಷ್ಟು ವರ್ಷ ರೈತರ ಕೆಲಸವನ್ನು ಸುಲಭ ಮಾಡಿದ ಇವರ ಪ್ರಯತ್ನ ಕೇಂದ್ರಕ್ಕೂ ತಲುಪಿದೆ. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರೇ ಖುದ್ದಾಗಿ ಇವರಿಗೆ ‘ಕೃಷಿ ಅನ್ವೇಷಕ’ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಶಾಲೆ ಬಿಟ್ಟರೂ…ಇಮಾಮ್‌ಸಾಬ್ ಅವರ ಒಬ್ಬನೇ ಮಗ ಅಬ್ದುಲ್ ಖಾದರ್. ಇವರು 60 ಎಕರೆ ಕೃಷಿ ಭೂಮಿ ಹೊಂದಿ ದ್ದರು. ಅಪ್ಪಟ ಕೃಷಿಕರಾಗಿದ್ದ ತಂದೆಗೆ, ಮಗ ಪದವಿ ಪಡೆದು ಮತ್ತೊಬ್ಬರ ಕೈಕೆಳಗೆ ಕೆಲಸ ಮಾಡುವುದು ಇಷ್ಟವಿರಲಿಲ್ಲ. ಇನ್ನೊಂದೆಡೆ ಖಾದರ್ ಅವರಿಗೆ ಯಂತ್ರೋಪಕರಣಗಳ ತಯಾರಿ ಎಂದರೆ ಎಲ್ಲಿಲ್ಲದ ಆಸೆ.‘ಮೆಟ್ರಿಕ್ ನಂತರ ಓದು ಬಿಡಿಸಿ ಕೃಷಿ ಕೆಲಸಕ್ಕೆ ಕಳುಹಿಸಿದ ತಂದೆ, ಕೊಯ್ಲು ಆದ ಹತ್ತಿಯನ್ನು ಕೀಳುವ ಕೆಲಸಕ್ಕೆ ನೇಮಿಸಿದ್ದರು.
ಇದನ್ನೂ ಓದಿ: ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್ ಎಂದಾದರೂ ಗೌರವ ನೀಡಿದೆಯೇ?: ಬಿಜೆಪಿ
1985ರಲ್ಲಿ ಭೀಕರ ಬರಗಾಲ.ಸ್ವಾತಿ ಹಾಗೂ ಚಿಟ್ಟೆ ಮಳೆಗೆ ಒಂದಷ್ಟು ಭೂಮಿ ಹಸಿಯಾಗಿತ್ತಾದರೂ ಬಿತ್ತಲು ಯೋಗ್ಯವಾಗಿರಲಿಲ್ಲ. ಈ ಸಂದರ್ಭದಲ್ಲಿ ಗೋಧಿಯನ್ನು ಜೋಳದ ರೀತಿಯಲ್ಲಿ ದೂರದೂರವಾಗಿ ಬಿತ್ತುವ ಯೋಜನೆ ರೂಪಿಸಿದರು. ಇದರಿಂದ ಹೆಚ್ಚು ಇಳುವರಿ ಸಿಗದಿದ್ದರೂ ಇತರರಂತೆ ನಷ್ಟ ಅನುಭವಿಸಲಿಲ್ಲ. ಆಗಲೇ ಇವರಿಗೆ ಕೃಷಿಯಲ್ಲಿ ಉತ್ತಮ ಇಳುವರಿ ತೆಗೆಯಲು ಬಿತ್ತನೆಯೇ ಮೂಲ ತಂತ್ರ ಎಂಬುದರ ಅರಿವಾಗಿದ್ದಂತೆ.
ಇದರಿಂದ ಉತ್ತೇಜಿತರಾಗಿ ವಿವಿಧ ಬೆಳೆಗೆ ತಮ್ಮದೇ ರೀತಿಯಲ್ಲಿ ಬಿತ್ತನೆ ಮಾಡಲು ಕೂರಿಗೆ ಸಂಶೋಧನೆಯಲ್ಲಿ ತೊಡಗಿಸಿಕೊಂಡರು. ಸಂಶೋಧನೆಗಾಗಿ ಅಗತ್ಯ ಇರುವ ಹಣಕ್ಕಾಗಿ 40 ಎಕರೆ ಭೂಮಿ ಕಳೆದುಕೊಂಡರು. ಊರವರು ‘ಹುಚ್ಚ’ ಎಂಬ ಪಟ್ಟ ಕಟ್ಟಿದರು. ‘ನಷ್ಟದಿಂದ ಬೇಸತ್ತು ಆತ್ಮಹತ್ಯೆ ಪ್ರಯತ್ನ ನಡೆಸಿದೆ. ಸಚಿವರ ಶಾಸಕರ ಮನೆ ಮನೆ ಅಲೆದೆ. ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಕಾರಣ ಏನಾದರೂ ಸಹಾಯ ಮಾಡಬೇಕು ಎಂದು ಸದನದಲ್ಲೂ ಪ್ರತಿಧ್ವನಿಸಿತು.
ಆದರೆ ಫಲಿತಾಂಶ ಶೂನ್ಯ. ₹10ಲಕ್ಷ ಪಡೆದ ಸಾಲ ಕೆಲವೇ ವರ್ಷಗಳಲ್ಲಿ ₹1.78 ಕೋಟಿ ಮುಟ್ಟಿತ್ತು. ಆಗ ನನ್ನ ನೆರವಿಗೆ ಬಂದವರು ಧಾರವಾಡ ಕೃಷಿ ವಿವಿ ಪ್ರೊ.ಎಸ್.ಎ.ಪಾಟೀಲ, ‘ಅಬ್ದುಲ್, ಸರ್ಕಾರ ನಿನ್ನ ಕೈಬಿಟ್ಟಿರಬಹುದು.ಗುಣಮಟ್ಟದ ಕೃಷಿ ಉಪಕರಣ ಸಿದ್ಧಪಡಿಸು. ರೈತರು ಎಂದಿಗೂ ಕೈ ಬಿಡರು’ ಎಂದ ಮಾತೇ ಸ್ಫೂರ್ತಿಯಾಯಿತು. ಅಂದಿನ ಮುಖ್ಯ ಕಾರ್ಯದರ್ಶಿ ಚಿರಂಜೀವಿ ಸಿಂಗ್ ಅವರ ಪ್ರೋತ್ಸಾಹವೂ ನನಗೆ ಸಿಕ್ಕಿತು’ ಎಂದು ಅಬ್ದುಲ್ ಖಾದರ್ ನೆನೆಸಿಕೊಳ್ಳುತ್ತಾರೆ.
ಇದನ್ನೂ ಓದಿ: UP Election: ಹಾರ್ದಿಕ್, ಕನ್ಹಯ್ಯಗೆ ನೀಡಿದ ಗೌರವದಷ್ಟೂ ಖರ್ಗೆಗೆ ನೀಡಿಲ್ಲವೆಂದ ಬಿಜೆಪಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.