ಯಾರು ಏನೇ ಟೀಕೆ ಮಾಡಿಕೊಳ್ಳಲಿ, ನಾನಂತೂ ಚನ್ನಪಟ್ಟಣದ ಜನರ ಋಣ ತೀರಿಸುತ್ತೇನೆ: ಡಿಸಿಎಂ ಡಿಕೆ ಶಿವಕುಮಾರ್

ಇಲ್ಲಿ ಬಂದಿರುವ ಸಾವಿರಾರು ಜನ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಅರ್ಜಿ ಸಲ್ಲಿಸಲು ಮುಗಿ ಬೀಳುತ್ತಿರುವುದನ್ನು ನೋಡಿದರೆ, ಅವರ ಪರಿಸ್ಥಿತಿ ಅರ್ಥವಾಗುತ್ತದೆ. ನನ್ನ ಬಗ್ಗೆ ಯಾರು ಏನೇ ಟೀಕೆ ಮಾಡಲಿ, ನನಗೆ ಈ ಜನರ ಸಮಸ್ಯೆಗೆ ಪರಿಹಾರ ನೀಡುವುದಷ್ಟೇ ಮುಖ್ಯ

Written by - Prashobh Devanahalli | Last Updated : Jun 24, 2024, 06:46 PM IST
    • ನಾನು ಚನ್ನಪಟ್ಟಣ ಕ್ಷೇತ್ರದ ಜನರ ಋಣ ತೀರಿಸುತ್ತೇನೆ
    • "ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ" ಕಾರ್ಯಕ್ರಮ
    • ಜನರ ಅಹವಾಲು ಸ್ವೀಕರಿಸಿ ಮಾತನಾಡಿದ ಡಿಕೆ ಶಿವಕುಮಾರ್
ಯಾರು ಏನೇ ಟೀಕೆ ಮಾಡಿಕೊಳ್ಳಲಿ, ನಾನಂತೂ ಚನ್ನಪಟ್ಟಣದ ಜನರ ಋಣ ತೀರಿಸುತ್ತೇನೆ: ಡಿಸಿಎಂ ಡಿಕೆ ಶಿವಕುಮಾರ್ title=
File Photo

ಚನ್ನಪಟ್ಟಣ: ಯಾರು ಏನೇ ಟೀಕೆ ಮಾಡಲಿ. ನಾನು ಚನ್ನಪಟ್ಟಣ ಕ್ಷೇತ್ರದ ಜನರ ಋಣ ತೀರಿಸುತ್ತೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು. ಕೋಡಂಬಳ್ಳಿ ಹಾಗೂ ಅಕ್ಕೂರು ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯಲ್ಲಿ ಸರ್ಕಾರದ ವತಿಯಿಂದ ನಡೆದ "ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ" ಕಾರ್ಯಕ್ರಮದಲ್ಲಿ ಸೋಮವಾರ ಜನರ ಅಹವಾಲು ಸ್ವೀಕರಿಸಿ ಮಾತನಾಡಿದರು.

"ಇಲ್ಲಿ ಬಂದಿರುವ ಸಾವಿರಾರು ಜನ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಅರ್ಜಿ ಸಲ್ಲಿಸಲು ಮುಗಿ ಬೀಳುತ್ತಿರುವುದನ್ನು ನೋಡಿದರೆ, ಅವರ ಪರಿಸ್ಥಿತಿ ಅರ್ಥವಾಗುತ್ತದೆ. ನನ್ನ ಬಗ್ಗೆ ಯಾರು ಏನೇ ಟೀಕೆ ಮಾಡಲಿ, ನನಗೆ ಈ ಜನರ ಸಮಸ್ಯೆಗೆ ಪರಿಹಾರ ನೀಡುವುದಷ್ಟೇ ಮುಖ್ಯ. ಈ ಹಿಂದೆ ನಾನು ಈ ಭಾಗದ ಶಾಸಕನಾಗಿದ್ದಾಗಲೂ ಅಧಿಕಾರಿಗಳನ್ನು ಹಳ್ಳಿಗಳಿಗೆ ಕರೆದುಕೊಂಡು ಹೋಗಿ ಜನರ ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡುವ ಕೆಲಸ ಮಾಡುತ್ತಿದ್ದೆ. ಈಗಲೂ ಅದೇ ಕೆಲಸ ಮುಂದುವರಿಸುತ್ತಿದ್ದೇನೆ” ಎಂದರು.

ಇದನ್ನೂ ಓದಿ: ಮಾಜಿ ಸಿಎಂ ಬಿಎಸ್ವೈ ಟೆಂಪಲ್ ರನ್: ಧರ್ಮಸ್ಥಳ-ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಭೇಟಿ

ಈ ಹಿಂದೆ ಇದ್ದ ಜನಪ್ರತಿನಿಧಿಗಳು ಈ ಕೆಲಸ ಮಾಡಬಹುದಾಗಿತ್ತು. ಆದರೆ ಮಾಡಲಿಲ್ಲ. ಯಾಕೆ ಮಾಡಲಿಲ್ಲ ಎಂದು ನಾನು ಪ್ರಶ್ನೆ ಮಾಡುವುದಿಲ್ಲ. ಕೆಲ ದಿನಗಳ ಹಿಂದೆ ತಾಲ್ಲೂಕಿನ ಅಧಿಕಾರಿಗಳ ಸಭೆ ಮಾಡಿದೆ. ಆಗ ನನ್ನ ಗಮನಕ್ಕೆ ಒಂದಷ್ಟು ವಿಚಾರಗಳು ಬಂದವು ಎಂದರು.

ಕಳೆದ ಐದು ವರ್ಷಗಳಲ್ಲಿ ತಾಲ್ಲೂಕಿನ ಬಡವರಿಗೆ ಒಂದೇ ಒಂದು ನಿವೇಶನ ಹಂಚಿಕೆ ಮಾಡಿಲ್ಲ. ಯಾರೊಬ್ಬರಿಗೂ ಬಗರ್ ಹುಕಂ ಸಾಗುವಳಿ ಜಮೀನು ನೀಡಿಲ್ಲ. ಆಶ್ರಯ ಸಮಿತಿ ಸಭೆ ಕೂಡ ಮಾಡಿಲ್ಲ ಎಂಬ ವಿಚಾರ ತಿಳಿಯಿತು. ಈ ಹಿಂದೆ ಇದ್ದವರು ಯಾಕೆ ಮಾಡಲಿಲ್ಲ ಎಂದು ಈಗ ನಾನು ಪ್ರಶ್ನೆ ಮಾಡುವುದಿಲ್ಲ. ಬಡವರ ಬದುಕಲ್ಲಿ ಬದಲಾವಣೆ ತರಲಿಲ್ಲ ಎಂದರೆ ನಾವು ಜನಪ್ರತಿನಿಧಿಯಾಗಿ ಯಾಕೆ ಇರಬೇಕು?  ಇಂತಹ ಕಾರ್ಯಕ್ರಮ ಮಾಡಿ ಜನರ ಕಷ್ಟ ಆಲಿಸಬೇಡಿ ಎಂದು ಅವರಿಗೆ ನಾವೇನಾದರೂ ಹೇಳಿದ್ದೆವಾ? ನೀವೇನಾದರೂ ಹೇಳಿದ್ದೀರಾ? ಎಂದು ಪ್ರಶ್ನಿಸಿದರು

ಯಾರಿಗೆ ನಿವೇಶನವಿಲ್ಲ ಆಯಾ ಊರುಗಳಲ್ಲಿ ಸರ್ಕಾರ 2-3 ಎಕರೆ ಜಮೀನು ಖರೀದಿಸಿ ಲೇಔಟ್ ಮಾಡಿ ಬಡವರಿಗೆ ನಿವೇಶನ ಹಂಚಿಕೆ ಮಾಡಲಾಗುವುದು ಎಂದು ಬಿಸಿಲಮ್ಮ ದೇವಾಲಯದ ಆವರಣದಲ್ಲಿ ನಿಂತು ಹೇಳುತ್ತಿದ್ದೇನೆ. ಚನ್ನಪಟ್ಟಣದ ಬಡವರಿಗೆ ನಿವೇಶನ ನೀಡಲು 50 ಕೋಟಿ ಹಣ ತಂದು 50-100 ಎಕರೆ ಜಾಗದಲ್ಲಿ ಲೇಔಟ್ ಮಾಡುತ್ತೇವೆ. ಬಡವರಿಗೆ ಮನೆ ಕಟ್ಟಿಕೊಡಲಾಗುವುದು. ಮುಂದೆ ಇಲ್ಲಿ ನಮ್ಮ ಶಾಸಕರು ಆಯ್ಕೆಯಾಗುತ್ತಾರೆ ಕನಿಷ್ಠ 10 ಸಾವಿರ ಜನರಿಗೆ ನಿವೇಶನ ಹಂಚಿಕೆ ಮಾಡುತ್ತೇವೆ ಎಂದರು.

ಈ ತಾಲ್ಲೂಕಿನ 94% ಅಂದರೆ ಸುಮಾರು 64 ಸಾವಿರ ಬಡ ಕುಟುಂಬದ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ತಲುಪಿದೆ. ಇನ್ನು 7-8 % ಫಲಾನುಭವಿಗಳಿಗೆ ತಲುಪಬೇಕಿದೆ. ಅದಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಈ ಪಂಚಾಯ್ತಿಯ 12 ಸಾವಿರ ಕುಟುಂಬಗಳಿಗೆ ಅರ್ಜಿಯನ್ನು ತಲುಪಿಸಿದ್ದೇವೆ ಎಂದು ಹೇಳಿದರು.

ಅಧಿಕಾರಕ್ಕಾಗಿ ಚನ್ನಪಟ್ಟಣ ಬಿಟ್ಟು ಓಡಿ ಹೋಗುವವನಲ್ಲ

ನಾನು ಚನ್ನಪಟ್ಟಣ ಬಿಟ್ಟು ಓಡಿ ಹೋಗುವವನಲ್ಲ. ಪೋಡಿ, ಜಮೀನು ಖಾತೆ, ಬಗರ್ ಹುಕುಂ ಸಾಗುವಳಿ ಜಮೀನು, ನಿವೇಶನ, ವಸತಿ ರಹಿತರ ಸಮಸ್ಯೆ, ಸಂಧ್ಯಾ ಸುರಕ್ಷಾ ಸೇರಿದಂತೆ ವಿವಿಧ ಪಿಂಚಣಿ ಸಮಸ್ಯೆ, ರಸ್ತೆ ದುರಸ್ತಿ, ಬಸ್ ವ್ಯವಸ್ಥೆ,  ದೇವಾಲಯ ಜೀರ್ಣೋದ್ಧಾರ, ಕುಡಿಯುವ ನೀರಿನ ಸಮಸ್ಯೆ, ಸರ್ಕಾರಿ ಯೋಜನೆಗಳ ಸಮಸ್ಯೆ, ಪೊಲೀಸರಿಂದ ತೊಂದರೆ ಸೇರಿದಂತೆ ಯಾವುದೇ ಸಮಸ್ಯೆ ಇದ್ದರೂ ನಮಗೆ ಅರ್ಜಿ ಸಲ್ಲಿಸಿ. ನಿಮ್ಮ ಅರ್ಜಿಯನ್ನು ಸರ್ಕಾರಿ ಅಧಿಕಾರಿಗಳು ಪರಿಶೀಲಿಸಿ ಸಮಸ್ಯೆ ಬಗೆಹರಿಸಲಿದ್ದಾರೆ ಎಂದು ನುಡಿದರು.

ಇದು ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಡಿ.ಕೆ. ಶಿವಕುಮಾರ್ ಅವರ ಕನಸಿನ ಯೋಜನೆ. ಈ ಯೋಜನೆ ಮೂಲಕ ಸರ್ಕಾರವನ್ನೇ ನಿಮ್ಮ ಮನೆ ಬಾಗಿಲಿಗೆ ತಂದು ನಿಮ್ಮ ಸಮಸ್ಯೆಗಳಿಗೆ ಪರಿಹಾರ ನೀಡುವ ಪ್ರಯತ್ನ ಇದಾಗಿದೆ. ಬೇರೆ ಪಕ್ಷಕ್ಕೆ ಮತ ಹಾಕಿದ್ದೇನೆ, ಬೇರೆ ಪಕ್ಷದ ಜತೆ ಗುರುತಿಸಿಕೊಂಡಿದ್ದೇನೆ. ಶಿವಕುಮಾರ್ ಬಳಿ ಹೋಗಿ ಹೇಗೆ ಅರ್ಜಿ ನೀಡಲಿ ಎಂಬ ಮುಜುಗರ, ಹಿಂಜರಿಕೆ ಬೇಡ. ನಾವು ಎಲ್ಲರ ಸಮಸ್ಯೆಗಳನ್ನೂ ಆಲಿಸಿ ಸ್ಪಂದಿಸುತ್ತೇವೆ ಎಂದು ಭರವಸೆ ನೀಡಿದರು.

ತಾಲ್ಲೂಕಿನ ಗ್ರಾಮೀಣ ಭಾಗದ ಜನರು ವಿದ್ಯಾಭ್ಯಾಕ್ಕಾಗಿ, ಉದ್ಯೋಗಕ್ಕಾಗಿ ಬೆಂಗಳೂರಿಗೆ ಹೋಗುತ್ತಿದ್ದಾರೆ. ಹೀಗಾಗಿ ಮಾಜಿ ಸಂಸದ ಸುರೇಶ್ ಅವರು ಸಿ ಎಸ್ ಆರ್ ನಿಧಿಯಲ್ಲಿ ರಾಮನಗರದ 20 ಕಡೆಗಳಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗಳ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಸಧ್ಯದಲ್ಲೇ ಈ ಶಾಲೆಗಳ ನಿರ್ಮಾಣ ಆರಂಭವಾಗಲಿದೆ. ಕೆಲವರು ಮಾತಲ್ಲೇ ಮನೆ ಕಟ್ಟುವ ಪ್ರಯತ್ನ ಮಾಡುತ್ತಾರೆ. ನಾನು ಶ್ರಮದಿಂದ ಭದ್ರ ಅಡಿಪಾಯ ಹಾಕಿ ಮನೆ ಕಟ್ಟುವವನು. ನಾವು ಭಾವನೆ ಮೇಲೆ ರಾಜಕೀಯ ಮಾಡಲ್ಲ. ಬದುಕಿನ ಮೇಲೆ ರಾಜಕಾರಣ ಮಾಡಿ ನಿಮ್ಮ ಬದುಕು ಹಾಸನ ಮಾಡುವ ಪ್ರಯತ್ನ ಮಾಡುತ್ತೇವೆ ಎಂದರು.

ವಿಧಾನಸಭೆ ಚುನಾವಣೆಗೂ ಮುನ್ನ ಕೊಟ್ಟ ಮಾತಿನಂತೆ ಉಚಿತ ಬಸ್ ಪ್ರಯಾಣ, ತಿಂಗಳಿಗೆ 2 ಸಾವಿರ, ಉಚಿತ ವಿದ್ಯುತ್, ಐದು ಕೆ.ಜಿ ಅಕ್ಕಿ, ಐದು ಕೆ.ಜಿ ಅಕ್ಕಿ ಹಣ ನೀಡಲಾಗುತ್ತಿದೆ. ಯಾರಿಗೆ ಈ ಸೌಲಭ್ಯ ಸಿಗುತ್ತಿಲ್ಲ ಅವರು ಅರ್ಜಿ ಹಾಕಿ ಎಂದರು.

ಕನಿಷ್ಠ 10 ಸಾವಿರ ಜನರಿಗೆ ಸಾಲ ಸೌಲಭ್ಯ:

ಆರ್ಥಿಕವಾಗಿ ಹಿಂದುಳಿದ ಜನರಿಗೆ ಬೀದಿ ವ್ಯಾಪಾರಿಗಳಿಗೆ ಹಾಗು ಕೊಳವೆ ಬಾವಿ ಕೊರೆಸಲು, ಹಂದಿ, ಹಸು, ಕುರಿ ಸಾಕುವವರಿಗೆ ನೀಡುವ 1 ಲಕ್ಷ ಸಾಲ ಸೌಲಭ್ಯವನ್ನು ಕನಿಷ್ಠ 10 ಸಾವಿರ ಜನರಿಗೆ ಕೊಡಿಸಲಾಗುವುದು. ಎಲ್ಲಾ ಜಾತಿ, ಧರ್ಮದವರಿಗೆ ಈ ಸೌಲಭ್ಯ ನೀಡಲಾಗುವುದು. ಕಾವೇರಿ ನಿಗಮದಿಂದ ಇಲ್ಲಿ ಕೆನಾಲ್ ಮೂಲಕ ನೀರು ತರಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದರು.

ದೊಡ್ಡ ನಾಯಕರೊಬ್ಬರು ನನಗೆ ಏನು ಮಾಡಿದ್ದೀರಿ ಎಂದು ಕೇಳಿದ್ದಾರೆ. ಇಂಧನ ಸಚಿವನಾಗಿದ್ದಾಗ ಈ ತಾಲ್ಲೂಕಿನ 18 ಸಾವಿರ ರೈತರಿಗೆ ಉಚಿತ ಟ್ರಾನ್ಸ್ಫಾರ್ಮರ್ ನೀಡಿದ್ದೇನೆ. ಕುಮಾರಸ್ವಾಮಿ ಅವರು ಈ ಕ್ಷೇತ್ರ ಬಿಟ್ಟು ಮಂಡ್ಯಕ್ಕೆ ಹೋಗಿದ್ದಾರೆ. ಕೇಂದ್ರದಿಂದ ಹಣ ತಂದು ಅಲ್ಲಿನ ರೈತರಿಗೆ ಟ್ರಾನ್ಸ್ಫಾರ್ಮರ್ ಕೊಡಲಿ ನೋಡೋಣ. ಡಿ.ಕೆ. ಸುರೇಶ್ ಅವರ  ಲೋಕಸಭಾ ವ್ಯಾಪ್ತಿಯಲ್ಲಿ ನಾವು ಈ ರೀತಿ ರೈತರಿಗೆ ಉಚಿತ ಟ್ರಾನ್ಸ್ಫಾರ್ಮರ್ ಅಳವಡಿಸಿದ್ದೇವೆ. 10 ಕಡೆ ದೊಡ್ಡ ಸ್ಟೇಶನ್ ಹಾಕಿಸಿದ್ದೇವೆ ಎಂದು ತಿಳಿಸಿದರು.

ಸಮುದಾಯ ಭವನ ಕಟ್ಟಲು ವ್ಯವಸ್ಥೆ:

ತಾಲ್ಲೂಕಿನಲ್ಲಿ ಎಲ್ಲಾ ಸಮುದಾಯಗಳಿಗೆ ಸಮುದಾಯ ಭವನ ಕಟ್ಟಲು ವ್ಯವಸ್ಥೆ ಮಾಡಿಕೊಡಲಾಗುವುದು.

ಇದನ್ನೂ ಓದಿ: ಟೀಂ ಇಂಡಿಯಾದ ಮುಂದಿನ ನಾಯಕ ಈ ಸ್ಫೋಟಕ ಬ್ಯಾಟರ್: ರೋಹಿತ್ ಬಳಿಕ ಮತ್ತೆ ಆರಂಭಿಕನಿಗೆ ಕ್ಯಾಪ್ಟನ್ಸಿ ನೀಡಿದ BCCI!

ತಾಲ್ಲೂಕು ಕಚೇರಿಯಲ್ಲಿ ಪ್ರತ್ಯೇಕ ಕೊಠಡಿ:

ಇಲ್ಲಿ ಅರ್ಜಿಗಳನ್ನು ಸಲ್ಲಿಸಲು ಆಗದವರಿಗೆ ಅನುಕೂಲ ಮಾಡಿಕೊಡಲು ತಾಲ್ಲೂಕು ಕಚೇರಿಯಲ್ಲಿ ಪ್ರತ್ಯೇಕ ಕೊಠಡಿ ವ್ಯವಸ್ಥೆ ಕಲ್ಪಿಸಲಾಗುವುದು. ಅಲ್ಲಿ ಕೂಡ ಜನರು ತಮ್ಮ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿಗಳ ವಿಲೇವಾರಿ ಕುರಿತು ಅಧಿಕಾರಿಗಳ ಜತೆ ಚರ್ಚೆ ಮಾಡಿ ಆಯಾ ಇಲಾಖೆ ಮೂಲಕ ಪರಿಹಾರ ನೀಡಲಾಗುವುದು. ಯಾವ ವಿಚಾರಗಳಲ್ಲಿ ಪರಿಹಾರ ನೀಡಲು ಸಾಧ್ಯವಿಲ್ಲವೋ ಅದಕ್ಕೆ ಸೂಕ್ತ ಕಾರಣವನ್ನು ನಾವು ಅರ್ಜಿದಾರರಿಗೆ ತಿಳಿಸುತ್ತೇವೆ ಎಂದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News