ನಂದಿ `ರೋಪ್‌ ವೇ' ಕನಸು ನನಸಾಗುವ ಕಾಲ ದೂರವಿಲ್ಲ: ಡಿಸಿಎಂ ಡಾ. ಅಶ್ವತ್ಥನಾರಾಯಣ

"ಎಷ್ಟೋ ವರ್ಷಗಳ ಹಿಂದೆಯೇ ನಟ  ಶಂಕರ್‌ ನಾಗ್‌ ನಂದಿ  ಬೆಟ್ಟಕ್ಕೆ ಕೇಬಲ್‌ ಕಾರ್‌ ಸಂಪರ್ಕ ಕಲ್ಪಿಸುವ ಕನಸು ಕಂಡಿದ್ದರು. ಆ ಕನಸು ನನಸಾಗುವ ಕಾಲ ದೂರವಿಲ್ಲ. ಪ್ರಕೃತಿಗೆ ಸಮಸ್ಯೆ ಆಗದ ರೀತಿಯಲ್ಲಿ  ಪ್ರಕೃತಿಯನ್ನು  ಉಳಿಸಿಕೊಂಡು ಅದರ ಜತೆಗೆ ಬದುಕುವ ಕಲೆ ರೂಢಿಸಿಕೊಳ್ಳಬೇಕು.  ಪರಿಸರ, ಕಾಡು ಪ್ರಾಣಿಗಳು ಸೇರಿದಂತೆ  ಪ್ರಕೃತಿ ರಕ್ಷಣೆ ಜತೆಗೆ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು," ಎಂದರು. 

Last Updated : Oct 29, 2019, 11:24 AM IST
ನಂದಿ `ರೋಪ್‌ ವೇ' ಕನಸು ನನಸಾಗುವ ಕಾಲ ದೂರವಿಲ್ಲ: ಡಿಸಿಎಂ ಡಾ. ಅಶ್ವತ್ಥನಾರಾಯಣ title=
File image

ಚಿಕ್ಕಾಬಳ್ಳಾಪುರ: ನಂದಿ ಬೆಟ್ಟಕ್ಕೆ 'ರೋಪ್‌ ವೇ' ನಿರ್ಮಿಸಬೇಕೆಂಬ ಬಹು ಕಾಲದ ಕನಸು ನನಸಾಗುವ ಕಾಲ ದೂರ ಇಲ್ಲ, ಈ ಸಂಬಂಧ ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಾ. ಸಿ.ಎನ್‌. ಅಶ್ವತ್ಥನಾರಾಯಣ ತಿಳಿಸಿದ್ದಾರೆ. 

ನಂದಿ ಬೆಟ್ಟ ಅಭಿವೃದ್ಧಿಗೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸೋಮವಾರ ಚರ್ಚೆ ನಡೆಸಿದ ನಂತರ ಸುದ್ದಿಗಾರರಿಗೆ ಸಚಿವರು ವಿವರಣೆ ನೀಡಿದರು.  "ಎಷ್ಟೋ ವರ್ಷಗಳ ಹಿಂದೆಯೇ ನಟ  ಶಂಕರ್‌ ನಾಗ್‌ ನಂದಿ  ಬೆಟ್ಟಕ್ಕೆ ಕೇಬಲ್‌ ಕಾರ್‌ ಸಂಪರ್ಕ ಕಲ್ಪಿಸುವ ಕನಸು ಕಂಡಿದ್ದರು. ಆ ಕನಸು ನನಸಾಗುವ ಕಾಲ ದೂರವಿಲ್ಲ. ಪ್ರಕೃತಿಗೆ ಸಮಸ್ಯೆ ಆಗದ ರೀತಿಯಲ್ಲಿ  ಪ್ರಕೃತಿಯನ್ನು  ಉಳಿಸಿಕೊಂಡು ಅದರ ಜತೆಗೆ ಬದುಕುವ ಕಲೆ ರೂಢಿಸಿಕೊಳ್ಳಬೇಕು.  ಪರಿಸರ, ಕಾಡು ಪ್ರಾಣಿಗಳು ಸೇರಿದಂತೆ  ಪ್ರಕೃತಿ ರಕ್ಷಣೆ ಜತೆಗೆ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು," ಎಂದರು. 

"ರಸ್ತೆ ಸಂಪರ್ಕ, ಸ್ಥಳ, ವಾಹನ ನಿಲುಗಡೆ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಪ್ರಕೃತಿಗೆ ಹಾನಿಯಾಗದ ರೀತಿಯಲ್ಲಿ ರೋಪ್‌ ವೇ ನಿರ್ಮಾಣ ಕಾರ್ಯ ಆಗಬೇಕು. ಈ ಹಾದಿಯಲ್ಲಿ ಎದುರಾಗುವ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟ ಇಲಾಖೆಗಳೊಂದಿಗೆ ಚರ್ಚಿಸಿ ಸೂಕ್ತ ಪರಿಹಾರ ಕಂಡುಕೊಂಡು, ನಿರ್ದಿಷ್ಟ ಕಾಲಮಿತಿಯೊಳಗೆ ತ್ವರಿತಗತಿಯಲ್ಲಿ ಯೋಜನೆ ಕೈಗೊಳ್ಳಲಾಗುವುದು," ಎಂದು ಅವರು ತಿಳಿಸಿದರು. 

ಪರಿಸರ ರಕ್ಷಣೆಗೆ ಒತ್ತು:
"ನಂದಿ ಬೆಟ್ಟ ಸುತ್ತಮುತ್ತಲಿನ ಪರಿಸರ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಲಾಗುವುದು. ಪ್ರಕೃತಿಗೆ ಮಾರಕವಾಗುವಂಥ  ಅಂಶಗಳನ್ನು ಸರಿಪಡಿಸಲಾಗುವುದು. ಸ್ವಚ್ಛತೆ, ಕಾಡಿನ ರಕ್ಷಣೆ, ಕಾಡ್ಗಿಚ್ಚು ನಿವರ್ಹಣೆ,  ಕಸ ವಿಲೇವಾರಿ, ನೀರಿನ ಸಂರಕ್ಷಣೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿ ಸೂಕ್ತ ನಿರ್ದೇಶನ ನೀಡಲಾಗಿದೆ. ನಂದಿ ಬೆಟ್ಟದಲ್ಲಿ ಸಂಚಾರ ದಟ್ಟಣೆ ನಿವರ್ಹಣೆ ಅದರಲ್ಲೂ ವಿಶೇಷವಾಗಿ ವಾರಾಂತ್ಯದ ದಟ್ಟಣೆ ನಿರ್ವಹಣೆಗೆ ಗಮನ ಹರಿಸಲಾಗುವುದು,'' ಎಂದು ಸಚಿವರು ತಿಳಿಸಿದರು. 

ಭೋಗ ನಂದೀಶ್ವರ ಅಭಿವೃದ್ಧಿ:
"ಭೋಗ ನಂದೀಶ್ವರ ಮತ್ತು ಯೋಗ ನಂದೀಶ್ವರ ಅಭಿವೃದ್ಧಿ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ. ಭೋಗ ನಂದೀಶ್ವರ ಸಂರಕ್ಷಣೆಗಾಗಿ ಮುಜರಾಯಿ ಇಲಾಖೆಯಿಂದ ಪುರಾತತ್ತ್ವ ಇಲಾಖೆಗೆ   2 ಕೋಟಿ ರೂ. ಹಣ  ನೀಡಿ,    ಅಭಿವೃದ್ಧಿಗೆ  ನೆರವು ನೀಡಲಾಗುವುದು,"ಎಂದರು. 

ಡ್ರೋನ್‌ ಕಣ್ಗಾವಲು:
"ನಂದಿಯ 15 ಸಾವಿರ ಎಕರೆ ಪ್ರದೇಶದ ರಕ್ಷಣೆಗೆ ಡ್ರೋನ್‌ ವ್ಯವಸ್ಥೆ ಮಾಡಲಾಗುವುದು. ಕಾಡ್ಗಿಚ್ಚು ತಡೆ,  ಪ್ರಾಣಿ, ಪಕ್ಷಗಳ ರಕ್ಷಣೆ ಜತೆಗೆ ಕಾನೂನು ಪಾಲನೆಗೆ ಡ್ರೋನ್‌ ವ್ಯವಸ್ಥೆ ನೆರವಾಗುವುದು.  ಸದ್ಯ ಆರ್‌ಎಫ್‌ಓ ಚಿಕ್ಕಾಬಳ್ಳಾಪುರ ಪಟ್ಟಣದಲ್ಲಿದ್ದು, ಆ ಕಚೇರಿಯನ್ನು ಇಲ್ಲಿಗೆ ವರ್ಗಾಯಿಸಲಾಗುವುದು. ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಕೆಯಿಂದ ಅನೇಕ ಪರಿಹಾರ ಕಂಡುಕೊಳ್ಳಲು ಸಾಧ್ಯ," ಎಂದು ಅವರು ಪ್ರತಿಪಾದಿಸಿದರು.    

ನಂದಿ ಅಭಿವೃದ್ಧಿ ಪಡಿಸುವಲ್ಲಿ  ಪ್ರವಾಸೋದ್ಯಮ ಇಲಾಖೆ ವಿಫಲವಾಗಿದೆ ಎಂಬ ಆರೋಪ ನಿರಾಕರಿಸಿದ ಸಚಿವರು,  "ಯಾವುದೇ ಒಂದು ಇಲಾಖೆಯ ವೈಫಲ್ಯ ಎನ್ನಲು ಸಾಧ್ಯವಿಲ್ಲ. ಬೆಟ್ಟ ಹಲವು ಪ್ರಾಧಿಕಾರಗಳ ವ್ಯಾಪ್ತಿಗೆ ಬರುತ್ತದೆ. ನಂದಿ ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆ 10 ಕೋಟಿ ಹಣ ನೀಡಲು ಸಿದ್ಧವಿದೆ.  ಲೋಕೋಪಯೋಗಿ ಇಲಾಖೆ ಮೂಲಕ  6 ಕೋಟಿ ರೂ. ಮಂಜೂರು ಮಾಡಿ  ಬಸ್‌ ನಿಲ್ದಾಣ, ವಾಹನ ನಿಲುಗಡೆ ಮುಂತಾದ ಮೂಲಸೌಕರ್ಯ ನಿರ್ಮಿಸಲು ಮುಂದಾಗಿದೆ. ಸಮಗ್ರ ಅಭಿವೃದ್ಧಿ ಒಂದೆರೆಡು ಸಂಸ್ಥೆಯಿಂದ ಆಗುವುದಿಲ್ಲ. ಅರಣ್ಯ, ಯೋಜನಾ ಪ್ರಾಧಿಕಾರ, ಕಸ ವಿಲೇವಾರಿ, ಕುಡಿಯುವ ನೀರು, ಕಾನೂನು ಸುವ್ಯವಸ್ಥೆ ಎಲ್ಲ ಸೇರಿ ಪರಿಹಾರ ಕಂಡುಕೊಳ್ಳಬೇಕು. ಸ್ಥಳೀಯ ಸಂಸ್ಥೆ ಅಡಿಯಲ್ಲಿ  ಸಮಗ್ರ ಅಭಿವೃದ್ಧಿ ವ್ಯವಸ್ಥೆ ಮಾಡಲಾಗುತ್ತದೆ. ಯಶಸ್ವಿ ಮಾದರಿಯನ್ನು ಪರಿಶೀಲಿಸಿ , ಹೆಜ್ಜೆಇಡಲಾಗುವುದು," ಎಂದು ಸಚಿವರು ತಿಳಿಸಿದರು.  ಯಡಿಯೂರಪ್ಪ ಅವರು ಮೊದಲ ಬಾರಿ ಮುಖ್ಯಮಂತ್ರಿ ಆದ ಸಂದರ್ಭದಲ್ಲಿ ನಂದಿ ಅಭಿವೃದ್ಧಿಗೆ 14 ಕೋಟಿ ರೂ. ಕೊಟ್ಟಿದ್ದರು. ಆಗ ಕೈಗೊಂಡ ಕಾಮಗಾರಿಗಳ ಪ್ರಗತಿ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು, "ಈ ಬಗ್ಗೆ ಗಮನ ಹರಿಸುತ್ತೇನೆ.  ಎಲ್ಲದಕ್ಕೂ ಉತ್ತರದಾಯಿತ್ವ, ಪಾರದರ್ಶಕತೆ ಬೇಕು. ತೆರಿಗೆದಾರರ ಹಣಕ್ಕೆ ಲೆಕ್ಕ ಸಿಗಬೇಕು. ಎಲ್ಲವನ್ನೂ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು," ಎಂದರು.
 

Trending News