ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಸೋಮವಾರ ಮಂಡ್ಯದ ಮೈಶುಗರ್ ಸಕ್ಕರೆ ಕಾರ್ಖಾನೆಯ ಪುನಶ್ಚೇತನ ಕುರಿತಂತೆ ರೈತ ಮುಖಂಡರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಿದರು.
ಆಯವ್ಯಯದಲ್ಲಿ ಘೋಷಿಸಿದಂತೆ ಮೈಶುಗರ್ ಕಾರ್ಖಾನೆಯ ಪುನಶ್ಚೇತನಕ್ಕೆ ಕ್ರಮ ವಹಿಸಲಾಗಿದ್ದು, ಕಾರ್ಖಾನೆಯ ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಿ ಖಾಸಗಿಯವರಿಗೆ ವಹಿಸಿಕೊಡಲು ಕ್ರಮ ವಹಿಸಲಾಗುತ್ತಿದೆ. ಸಿಬ್ಬಂದಿ ಸೌಲಭ್ಯ ಮತ್ತಿತರ ನಿರ್ವಹಣೆ ಉದ್ದೇಶಕ್ಕೆ ಇದಕ್ಕೆ 69.16 ಕೋಟಿ ರೂ. ಅಗತ್ಯವಿದೆ. ಈ ವೆಚ್ಚ ಭರಿಸಿದರೂ ಕಾರ್ಖಾನೆ ಸುಗಮವಾಗಿ ಕಾರ್ಯ ನಿರ್ವಹಿಸುವ ಬಗ್ಗೆ ಖಾತರಿ ಇಲ್ಲ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಅದಾಗ್ಯೂ ರೈತರ ಹಿತ ರಕ್ಷಣೆಯ ದೃಷ್ಟಿಯಿಂದ ಶಾಶ್ವತವಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಆರ್ಥಿಕ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಸಿಎಂ ಭರವಸೆ ನೀಡಿದರು.
ರಾಜ್ಯ ರಾಜಕೀಯ ಬೆಳವಣಿಗೆಯ ನಡುವೆಯೂ ನಡೆಸಲಾದ ಈ ಸಭೆಯಲ್ಲಿ ಸಕ್ಕರೆ ಸಚಿವ ಆರ್.ಬಿ. ತಿಮ್ಮಾಪೂರ, ಸಣ್ಣ ನೀರಾವರಿ ಸಚಿವ ಸಿ.ಎಸ್. ಪುಟ್ಟರಾಜು, ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್, ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ, ಮಂಡ್ಯ ಜಿಲ್ಲೆಯ ಶಾಸಕರು, ರೈತ ಮುಖಂಡರು, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐಎಸ್ಎನ್ ಪ್ರಸಾದ್, ಸಣ್ಣ ಕೈಗಾರಿಕಾ ಇಲಾಖೆ ಕಾರ್ಯದರ್ಶಿ ಮಹೇಶ್ವರ ರಾವ್, ಸಕ್ಕರೆ ಆಯುಕ್ತ ಶಾಂತಾರಾಂ, ಮಂಡ್ಯ ಜಿಲ್ಲಾಧಿಕಾರಿ ಮಂಜುಶ್ರೀ ಮತ್ತಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.