ಬೆಂಗಳೂರು: ಸೆಪ್ಟೆಂಬರ್ 6 ರಂದು ವಿಕ್ರಮ್ ಮೂನ್ ಲ್ಯಾಂಡರ್ ವಿಫಲವಾಗಲು ಪ್ರಧಾನಿ ನರೇಂದ್ರ ಮೋದಿ ಕಾರಣ ಎಂದು ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ನಲ್ಲಿ ಪ್ರಧಾನಿ ಮೋದಿ ಅವರ ಉಪಸ್ಥಿತಿಯು ಅಪಶಕುನವಾಗಿರಬಹುದು ಎಂದು ಹೇಳಿದ್ದಾರೆ.
ಮೈಸೂರಿನಲ್ಲಿ ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ಕುಮಾರಸ್ವಾಮಿ ಮಾತನಾಡುತ್ತಾ, ಇಸ್ರೊ ಕೇಂದ್ರ ಕಚೇರಿಯಲ್ಲಿ ಮೋದಿ ಹೆಜ್ಜೆ ಇಟ್ಟಿರುವ ಸಮಯ ಇಸ್ರೋ ವಿಜ್ಞಾನಿಗಳಿಗೆ ಅಪಶಕುನವನ್ನು ತಂದಿರಬಹುದು ಎಂದು ಕುಟುಕಿದ್ದಾರೆ.
'ವಿಜ್ಞಾನಿಗಳು 10-12 ವರ್ಷಗಳ ಕಾಲ ಕಠಿಣ ಪರಿಶ್ರಮ ವಹಿಸಿದ್ದಾರೆ. ಚಂದ್ರಯಾನ -2 ಯೋಜನೆಗೆ 2008-09ರಲ್ಲಿ ಅನುಮೋದನೆ ನೀಡಲಾಗಿದ್ದು, ಅದಕ್ಕಾಗಿ ಹಣವನ್ನು ಅದೇ ವರ್ಷದಲ್ಲಿಯೇ ಬಿಡುಗಡೆ ಮಾಡಲಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ. ಆದರೆ, ಮೋದಿಯವರು ಇಸ್ರೊ ಕೇಂದ್ರ ಕಚೇರಿಗೆ ತೆರಳಿ ಚಂದ್ರಯಾನ-2 ಉಡಾವಣೆಯ ಹಿಂದೆ ಇದ್ದಂತೆ ಪ್ರಚಾರ ಪಡೆಯಲು ಹೋದರು' ಎಂದು ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.
ಸೆಪ್ಟೆಂಬರ್ 6 ರಂದು ರಾತ್ರಿ ಮೋದಿ ಬೆಂಗಳೂರಿಗೆ ಬಂದು ಚಂದ್ರಯಾನದ ಹಿಂದೆ ಇದ್ದಾರೆ ಎನ್ನುವ ಸಂದೇಶವನ್ನು ದೇಶದ ಜನರಿಗೆ ರವಾನಿಸಿದರು. ಆದರೆ ಈ ಯೋಜನೆಯು 2008-09ರ ಅವಧಿಯಲ್ಲಿ ವಿಜ್ಞಾನಿಗಳು ಮತ್ತು ಯುಪಿಎ ಸರ್ಕಾರದ ಫಲಿತಾಂಶವಾಗಿದೆ ಎಂದು ಅವರು ಪ್ರತಿಪಾದಿಸಿದರು.
ಜುಲೈ 22 ರಂದು ಪ್ರಾರಂಭಿಸಲಾದ ಚಂದ್ರಯಾನ -2 ಗೆ ಹಿನ್ನಡೆಯಾಗಿ, ಸೆಪ್ಟೆಂಬರ್ 7 ರಂದು ಬೆಳಿಗ್ಗೆ ಭೂಮಿಯ ಕೇಂದ್ರದೊಂದಿಗೆ ಸಂವಹನವನ್ನು ಕಳೆದುಕೊಂಡಿದ್ದರಿಂದ ಚಂದ್ರನ ಮೇಲ್ಮೈಯಲ್ಲಿ ವಿಕ್ರಮ್ ಲ್ಯಾಂಡರ್‌ನ ಮೃದುವಾದ ಇಳಿಯುವಿಕೆ ಯೋಜಿಸಿದಂತೆ ನಡೆಯಲಿಲ್ಲ.
ಎಲ್ಲಾ ವಿಷಯಗಳ ಬಗ್ಗೆ ಕೇಂದ್ರದ ಮುಂದೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಅಸಹಾಯಕತೆಯನ್ನು ವಿವರಿಸಿದ ಕುಮಾರಸ್ವಾಮಿ, ರಾಜ್ಯ ಸರ್ಕಾರದಲ್ಲಿ ಮತ್ತು ಕೇಂದ್ರದಲ್ಲಿ ಯಾರಿಗೂ ಪ್ರಧಾನಮಂತ್ರಿಯನ್ನು ಸಂಪರ್ಕಿಸುವ ಧೈರ್ಯವಿಲ್ಲ ಎಂದರು.