ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದಿಂದ ನೂತನವಾಗಿ ಆಯ್ಕೆಯಾಗಿರುವ ಸಂಸದೆ ಸುಮಲತಾ ಅಂಬರೀಶ್ ಅವರು ಇಂದು ಮಾಜಿ ಸಿಎಂ, ಬಿಜೆಪಿ ನಾಯಕ ಎಸ್.ಎಂ.ಕೃಷ್ಣ ಅವರನ್ನು ಭೇಟಿ ಮಾಡಿದರು.
ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬೆಜೆಪಿ ಬೆಂಬಲದೊಂದಿಗೆ ಭರ್ಜರಿ ಗೆಲುವು ಸಾಧಿಸಿದ ಬೆನ್ನಲ್ಲೇ ಸುಮಲತಾ ಅವರು ಸದಾಶಿವನಗರದಲ್ಲಿರುವ ನಿವಾಸಕ್ಕೆ ತೆರಳಿ ಎಸ್.ಎಂ.ಕೃಷ್ಣ ಅವರಿಗೆ ಧನ್ಯವಾದ ಸಲ್ಲಿಸಿದರು. ಚುನಾವಣೆಯಲ್ಲಿ ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿ ನಿಲ್ಲಿಸದೆ ಸುಮಲತಾ ಅವರಿಗೆ ಬೆಂಬಲ ಸೂಚಿಸಿದ್ದರ ಹಿಂದೆ ಎಸ್.ಎಂ.ಕೃಷ್ಣ ಪ್ರಭಾವ ಬೀರಿದ್ದರು. ಈಗ ಚುನಾವಣೆಯಲ್ಲಿ ಮುಖ್ಯಮಂತ್ರಿಗಳ ಪುತ್ರನ ವಿರುದ್ಧ ವಿಜಯ ಪಾತಕೆ ಹಾರಿಸಿದ ಸುಮಲತಾ ಅವರು, ತಮ್ಮ ಗೆಲುವಿನಲ್ಲಿ ಪಾತ್ರವಹಿಸಿದ ಹಿರಿಯ ನಾಯಕರಿಗೆ ಕೃತಜ್ಞತೆ ಅರ್ಪಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಆರ್.ಅಶೋಕ್ ಸೇರಿದಂತೆ ಅನೇಕ ನಾಯಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸುಮಲತಾ, ಚುನಾವಣೆಯಲ್ಲಿ ಗೆದ್ದ ಬಳಿಕ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುವುದು ನನ್ನ ಕರ್ತವ್ಯ. ಹಾಗಾಗಿ ಎಸ್.ಎಂ.ಕೃಷ್ಣಾ ಅವರನ್ನು ಭೇಟಿ ಮಾಡಿದೆ ಎಂದಿದ್ದಾರೆ.
Bengaluru: Mandya MP Sumalatha Ambareesh meets BJP leader SM Krishna, she says, "It is my duty is to meet everyone and thank them." Former Karnataka CM and BJP leader BS Yeddyurappa also present. #Karnataka pic.twitter.com/6Foynztvcw
— ANI (@ANI) May 26, 2019
"ಮಂಡ್ಯದಲ್ಲಿ ನಡೆದ ಚುನಾವಣೆ ಕೇವಲ ಒಂದು ಪಕ್ಷದ್ದಲ್ಲ. ನಾನು ಎಲ್ಲಾ ಪಕ್ಷದ ಅಭ್ಯರ್ಥಿ ಎನ್ನುವಂತೆ ಇತ್ತು. ನನಗೆ ಬಿಜೆಪಿ ಬೆಂಬಲ ಕೊಟ್ಟಿತ್ತು, ಕಾಂಗ್ರೆಸ್ ಬಂಡಾಯ ಕಾರ್ಯಕರ್ತರು ನನ್ನ ಪರ ಕೆಲಸ ಮಾಡಿದ್ದಾರೆ. ನನಗೆ ಮಂಡ್ಯದ ಜನ ಆಶೀರ್ವಾದ ಮಾಡಿದ್ದಾರೆ. ಮೇ 29ರಂದು ಮಂಡ್ಯಕ್ಕೆ ಹೋಗ್ತೀನಿ .ಅವರೆಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ" ಎಂದು ಸುಮಲತಾ ಹೇಳಿದರು.
ಬಿಜೆಪಿ ಸೇರ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದಸುಮಲತಾ, ನಾನು ಚುನಾವಣೆ ಸಂದರ್ಭದಲ್ಲೇ ಹೇಳಿದಂತೆ ಮಂಡ್ಯದ ಜನರ ಅಭಿಪ್ರಾಯ ಪಡೆದು ನಂತರ ಬಿಜೆಪಿಗೆ ಬೆಂಬಲ ನೀಡಬೇಕೇ, ಬೇಡವೇ ಎಂಬುದರ ಬಗ್ಗೆ ನಿರ್ಧರಿಸುತ್ತೇನೆ. ಚುನಾವಣೆಯಲ್ಲಿ ಬಿಜೆಪಿ ನನಗೆ ಬೆಂಬಲ ನೀಡಿದೆ. ಮಂಡ್ಯ ಜಿಲ್ಲೆಯ ಅಭಿವೃದ್ಧಿಗೂ ಸಹಕಾರ ನೀಡುತ್ತದೆ ಎನ್ನುವ ಭರವಸೆಯಿದೆ. ಮಂಡ್ಯದ ಅಭಿವೃದ್ಧಿಗಾಗಿ ನನ್ನದೇ ಆದ ವಿಷನ್ ಇದೆ. ಆ ಪ್ರಕಾರ ಕೆಲಸ ಮಾಡಿಕೊಂದು ಹೋಗುತ್ತೇನೆ ಎಂದು ಸುಮಲತಾ ಹೇಳಿದರು.