ಮದ್ಯಪಾನ ನಿಷೇಧ: ಪರಿಶೀಲನೆಗೆ ಸಮಯ ಅಗತ್ಯ ಎಂದ ಮುಖ್ಯಮಂತ್ರಿ

ಮಿತ್ರಪಕ್ಷಗಳೊಂದಿಗೆ ಸಮಾಲೋಚನೆ ನಡೆಸದೆ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ.

Last Updated : Jan 31, 2019, 07:32 AM IST
ಮದ್ಯಪಾನ ನಿಷೇಧ: ಪರಿಶೀಲನೆಗೆ ಸಮಯ ಅಗತ್ಯ ಎಂದ ಮುಖ್ಯಮಂತ್ರಿ title=

ಬೆಂಗಳೂರು: ರಾಜ್ಯದಲ್ಲಿ ಮದ್ಯಪಾನವನ್ನು ಸಂಪೂರ್ಣ ನಿಷೇಧ ಮಾಡುವ ಕುರಿತು ಪರಿಶೀಲಿಸಲು ಸಮಯಾವಕಾಶದ ಅಗತ್ಯವಿದೆ ಎಂದು ಬುಧವಾರ ಹಿರಿಯ ರಂಗಕರ್ಮಿ, ಪ್ರಸನ್ನ ಅವರ ನೇತೃತ್ವದಲ್ಲಿ ತಮ್ಮನ್ನು ಭೇಟಿಯಾದ ಮದ್ಯಪಾನ ನಿಷೇಧ ಹೋರಾಟಗಾರರಿಗೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದರು.

ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಸಾರಾಯಿ ಮತ್ತು ಲಾಟರಿ  ನಿಷೇಧಿಸಿದ್ದನ್ನು ಸ್ಮರಿಸಿದ ಮುಖ್ಯಮಂತ್ರಿಗಳು,  ರಾಜ್ಯದಲ್ಲಿ ಪ್ರಸ್ತುತ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿದೆ. ಮಿತ್ರಪಕ್ಷಗಳೊಂದಿಗೆ ಸಮಾಲೋಚನೆ ನಡೆಸದೆ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ. ಅಲ್ಲದೆ ಜಿಎಸ್ಟಿ ಜಾರಿಗೆ ಬಂದ ನಂತರ ರಾಜ್ಯ ಸರ್ಕಾರಕ್ಕೆ ಸಂಪನ್ಮೂಲ ಕ್ರೋಢೀಕರಣದ ಅವಕಾಶಗಳು ಸೀಮಿತವಾಗಿವೆ. 

ಈ ಹಿನ್ನೆಲೆಯಲ್ಲಿ ಈ ವಿಷಯದ ಕುರಿತು ಉನ್ನತ ಮಟ್ಟದ ಚರ್ಚೆ ನಡೆಸುವುದು ಸಹ ಅಗತ್ಯವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಮದ್ಯಪಾನ ಸಂಪೂರ್ಣ ನಿಷೇಧವನ್ನು ಏಕಾಏಕಿ ಘೋಷಿಸಲಾಗದು. ಇದರ ಸಾಧಕ ಬಾಧಕಗಳನ್ನು ಪರಿಶೀಲಿಸಲು ಸಮಯಾವಕಾಶದ ಅಗತ್ಯವಿದೆ ಎಂದು ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ಮದ್ಯ ನಿಷೇಧಕ್ಕೆ ಆಗ್ರಹಿಸಿ 11 ದಿನಗಳ ಹಿಂದೆಯೇ ಚಿತ್ರದುರ್ಗದಿಂದ ಪಾದಯಾತ್ರೆ ಹಮ್ಮಿಕೊಂಡಿದ್ದು, ರಾಜ್ಯದ ನಾನಾ ಮೂಲೆಗಳಿಂದ ಮಹಿಳೆಯರು ಮತ್ತು ಪ್ರಗತಿಪರ ಸಂಘಟನೆಗಳು ಬುಧವಾರ ಬೆಂಗಳೂರಿನಲ್ಲಿ 'ಬೆಂಗಳೂರು ಚಲೋ' ಮೂಲಕ ಮಧ್ಯ ನಿಷೇಧಕ್ಕೆ ಆಗ್ರಹಿಸಿ 2,500ಕ್ಕೂ ಅಧಿಕ ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದಾರೆ. 
 

Trending News