ಬೆಂಗಳೂರು : ಅವರ ಹೆಸರು ಕರ್ನಾಟಕದ ಮನೆ ಮನೆಯಲ್ಲೂ ಪ್ರಸಿದ್ಧವಾಗಿದೆ. ಅವರು ರಚಿಸಿದ ಮಹಾಕಾವ್ಯ ಕನ್ನಡ ಸಾಹಿತ್ಯಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿಯ ಗೌರವವನ್ನು ಸಂಪಾದಿಸಿದೆ. ಇಂದಿನ ದಿನ, ಅಂದರೆ 1904ರ ಡಿಸೆಂಬರ್ 29ರಂದು ಜನಿಸಿದ ಅವರೇ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ. ಕಾವ್ಯನಾಮದಿಂದ ಕುವೆಂಪು ಎಂದೇ ಪ್ರಸಿದ್ಧರಾದವರು. ಅವರ ಜನ್ಮದಿನವಾದ ಇಂದು ಎಲ್ಲೆಡೆಯೂ ಅವರ ನೆನಪುಗಳು, ಅವರ ಸಾಹಿತ್ಯದ ಸ್ಮರಣೆಗಳು ನಡೆಯುತ್ತವೆ.
ಕುವೆಂಪು ಅವರು ಓರ್ವ ಮಹಾನ್ ರಾಷ್ಟ್ರೀಯವಾದಿ ಸಾಹಿತಿಯಾಗಿದ್ದರು. ಅವರಿಗೆ ಭಾರತದ ಬಗೆಗಿದ್ದ ಅಭಿಮಾನ ಮಹತ್ತರವಾದುದಾಗಿತ್ತು. ಅವರು ತನ್ನ ಸಾಹಿತ್ಯದ ಮೂಲಕವೂ ಅದನ್ನು ವ್ಯಕ್ತಪಡಿಸಿ, ಭಾರತೀಯ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು. ಅವರ ಸಾಲುಗಳಾದ 'ನಾನಳಿವೆ, ನೀನಳಿವೆ, ನಮ್ಮೆಲುಬುಗಳ ಮೇಲೆ ಮೂಡುವುದು, ಮೂಡುವುದು
ನವಭಾರತದ ಲೀಲೆ!' ಎಂಬ ಸಾಲುಗಳು ಭಾರತೀಯತೆಯ ಮಹತ್ವವನ್ನು ಸಾರಿವೆ.
ಇದನ್ನೂ ಓದಿ : ಕೈದಿಗಳ ಸಂಬಳ ಮತ್ತೆ 3 ಪಟ್ಟು ಜಾಸ್ತಿ: ರಾಜ್ಯದ ಕೈದಿಗಳಿಗೆ ದೇಶದಲ್ಲೇ ಅತಿಹೆಚ್ಚು ಸ್ಯಾಲರಿ..!
ಬೇಸಗೆ ಸಮಯದಿ ಬೇಸರಗೊಂಡಿರೆ
ಗೊಲ್ಲನ ಕೊಳಲನು ಕೇಳಿಹೆಯೇನು?
ವೇಣುನಿನಾದವು ಕಿವಿದೆರೆಗೈತರೆ
ವಂಶದ ವಂಶದ ಹಿಕ್ಕುವೆಯೇನು? ಎಂಬ 'ಕುಲ' ಕವನದ ಸಾಲುಗಳಲ್ಲಿ ಕುವೆಂಪು ಅವರು ವೇಣುನಾದ ಕೇಳಿ ಬಿದಿರಿನ ಕುಲವನ್ನು ಹುಡುಕಾಡದ ನಾವು ಮನುಷ್ಯರಲ್ಲಿ ಯಾಕೆ ಕುಲ ಕುಲ ಎಂದು ಏಕೆ ಒರಲುವುದು ಏಕೆ ಎಂದು ಪ್ರಶ್ನಿಸಿದ್ದಾರೆ. ಆ ಮೂಲಕ ಅವರು ಭಾರತದಲ್ಲಿನ ಜಾತಿ ಆಧಾರಿತ ತಾರತಮ್ಯವನ್ನು ಬಲವಾಗಿ ಪ್ರಶ್ನಿಸಿದ್ದಾರೆ. ಧರ್ಮ ಮತ್ತು ಜಾತಿಗಳು ಭಾರತದ ಅಭಿವೃದ್ಧಿಗೆ ಅಡ್ಡಿಯಾಗುವ ಜೈಲು ಎಂದೇ ಕುವೆಂಪು ಭಾವಿಸಿದ್ದರು. ಅವರು ಮೂಢನಂಬಿಕೆಗಳು, ಡಂಬಾಚಾರಗಳು ಮತ್ತು ಲಿಂಗ ತಾರತಮ್ಯಗಳ ವಿರುದ್ಧ ಹೋರಾಡಿದರು. ಕುವೆಂಪು ಬರಹಗಳು, ಅವರ ಸಂದೇಶಗಳು ಇಂದಿಗೂ ಅತ್ಯಂತ ಪ್ರಚಲಿತವಾಗಿವೆ.
"ಬಹಳ ಜನರಿಗೆ ತಿಳಿದಿರದ ವಿಚಾರವೆಂದರೆ, ಕುವೆಂಪು ಅವರು ತನ್ನ ಆರಂಭಿಕ ಬರವಣಿಗೆಯನ್ನು ಇಂಗ್ಲಿಷ್ ಭಾಷೆಯಲ್ಲಿ ಆರಂಭಿಸಿದ್ದರು. ಅವರು 1922ರ ವೇಳೆಗಾಗಲೇ ಇಂಗ್ಲಿಷ್‌ನಲ್ಲಿ ಏಳು ಕವನಗಳ ಸಂಕಲನವಾದ 'ಬಿಗಿನರ್ಸ್ ಮ್ಯೂಸ್' ಕೃತಿಯನ್ನು ಹೊರತಂದಿದ್ದರು" ಎಂದು ಸಾಹಿತಿ, ಪ್ರಾಧ್ಯಾಪಕರಾದ ಡಾ. ಪ್ರಧಾನ್ ಗುರುದತ್ತ ಅವರು 2004ರಲ್ಲಿ ನಡೆದ ಕುವೆಂಪು ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ಹೇಳಿದ್ದರು. ಕುವೆಂಪು ಸಾಹಿತ್ಯದ ಅಧ್ಯಯನ ನಡೆಸಿರುವ, ಸ್ವಯಂ ವಿದ್ವಾಂಸರೂ ಆದ ಪ್ರಧಾನ್ ಗುರುದತ್ತ ಅವರು ಕುವೆಂಪು ಅವರ ಮಹಾಕಾವ್ಯ, ಶ್ರೀ ರಾಮಾಯಣ ದರ್ಶನಂ ಕೃತಿಯನ್ನು ಹಿಂದಿಗೆ ಭಾಷಾಂತರಿಸಿದ್ದರು.
ಇದನ್ನೂ ಓದಿ : ಬೆಂಗಳೂರಲ್ಲಿ ಹೆಚ್ಚಾಯ್ತು ಅತ್ಯಾಚಾರ, ಮನೆಗಳ್ಳತನ, ರಾಬರಿ: ಕಮ್ಮಿಯಾಯ್ತು ಸರಗಳ್ಳತನ, ಡಕಾಯಿತಿ ಕೇಸ್
ಕುವೆಂಪು ಅವರ ಶ್ರೀ ರಾಮಾಯಣ ದರ್ಶನಂ ಹಿಂದೂ ಪುರಾಣ ರಾಮಾಯಣದ ಆಧುನಿಕ ಅವತರಣಿಕೆಯಾಗಿದೆ. ಈ ಕೃತಿಗಾಗಿ ಕುವೆಂಪು ಅವರಿಗೆ 1967ರಲ್ಲಿ ಜ್ಞಾನಪೀಠ ಪ್ರಶಸ್ತಿಯೂ ಲಭಿಸಿತು. ಇದು ಕನ್ನಡದ ಪ್ರಥಮ ಜ್ಞಾನಪೀಠ ಗೌರವವಾಗಿದೆ.
ತಮ್ಮ ಕೃತಿಯಲ್ಲಿ ಕುವೆಂಪು ಅವರು 'ಸರ್ವೋದಯ' ಎಂಬ ಯೋಚನೆಯನ್ನು ವ್ಯಕ್ತಪಡಿಸಿದ್ದಾರೆ. ಇದರಲ್ಲಿ, ಭಾರತದ ಕಟ್ಟಕಡೆಯ ವ್ಯಕ್ತಿಯೂ ಅಭಿವೃದ್ಧಿಯ ಭಾಗವಾಗಿರಬೇಕು ಎಂದು ಕುವೆಂಪು ವಿವರಿಸಿದ್ದಾರೆ. ಕುವೆಂಪು ಅವರು ಭಾರತ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದ ಸಂದರ್ಭದಲ್ಲೇ ಕೃತಿಗಳನ್ನು ರಚಿಸಿದ್ದರು. ಆ ಮೂಲಕ ಅವರು ತನ್ನ ಸಾಹಿತ್ಯದ ಮೂಲಕವೇ ಸ್ವಾತಂತ್ರ್ಯ ಹೋರಾಟದ ಭಾಗವಾಗಿದ್ದರು.
ಮಂಜೇಶ್ವರ ಗೋವಿಂದ ಪೈ ಅವರ ಬಳಿಕ, ಕುವೆಂಪು 1964ರಲ್ಲಿ ಕನ್ನಡದ ಎರಡನೇ ರಾಷ್ಟ್ರಕವಿ ಎನಿಸಿಕೊಂಡರು. ಅವರ ಕವನ 'ಜಯ ಭಾರತ ಜನನಿಯ ತನುಜಾತೆ' ಕರ್ನಾಟಕದ ನಾಡಗೀತೆಯಾಗಿ ಆಯ್ಕೆಯಾಯಿತು. 1956ರಲ್ಲಿ ಕುವೆಂಪು ಮೈಸೂರು ವಿಶ್ವವಿದ್ಯಾನಿಲಯದ 11ನೇ ಕುಲಪತಿಗಳಾಗಿ ನೇಮಕಗೊಂಡರು.
ಇದನ್ನೂ ಓದಿ : ನೂರಕ್ಕೂ ಅಧಿಕ ಪೊಲೀಸ್ ಠಾಣೆಗಳ ನಿರ್ಮಾಣಕ್ಕೆ ಮುಂದಾದ ರಾಜ್ಯ ಸರ್ಕಾರ
ಕವನ ಎನ್ನುವುದು ಕುವೆಂಪು ಅವರ ಜೀವನದ ಅವಿಭಾಜ್ಯ ಅಂಗವಾಗಿತ್ತು. ಅವರು ಸಾಮಾನ್ಯ ವಸ್ತುಗಳಿಗೂ ಕಾವ್ಯಾತ್ಮಕವಾಗಿ ಹೆಸರುಗಳನ್ನು ಇಡುತ್ತಿದ್ದರು. ಉದಾಹರಣೆಗೆ, ಅವರು ತನ್ನ ಮನೆಗೆ 'ಉದಯರವಿ' ಎಂದು ಹೆಸರಿಟ್ಟಿದ್ದರು. ಅವರು ರೈತರನ್ನು 'ನೇಗಿಲಯೋಗಿ' ಎಂದು ಕರೆದಿದ್ದರು. ಅವರು ಜೀವನದುದ್ದಕ್ಕೂ ಪದ್ಮ ವಿಭೂಷಣ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಜ್ಞಾನಪೀಠ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳಿಗೆ ಭಾಜನರಾದರು.
ದುರದೃಷ್ಟವಶಾತ್, ಅವರ ಪದ್ಮ ವಿಭೂಷಣ ಫಲಕವೂ ವಸ್ತು ಸಂಗ್ರಹಾಲಯವಾಗಿ ಮಾರ್ಪಡಿಸಲಾಗಿದ್ದ ಕುವೆಂಪು ಅವರ ನಿವಾಸದಿಂದ ಕಳವಾಗಿತ್ತು. ಆದರೆ ಅದು ಇಂದಿಗೂ ಮತ್ತೆ ಪತ್ತೆಯಾಗಿಲ್ಲ. ಭಾರತ ಸರ್ಕಾರ ಕುವೆಂಪು ಅವರಿಗೆ ಎರಡನೇ ಅತ್ಯುನ್ನತ ನಾಗರಿಕ ಪುರಸ್ಕಾರವಾದ ಪದ್ಮ ವಿಭೂಷಣವನ್ನು 1985ರಲ್ಲಿ ಪ್ರದಾನ ಮಾಡಿತ್ತು. ಆ ಪದಕ ನವೆಂಬರ್ 2015ರಲ್ಲಿ ಕಳವಾಯಿತು. ಅದರ ಮುಖ್ಯ ಆರೋಪಿಯನ್ನು ಬಂಧಿಸಲಾಯಿತಾದರೂ, ತಾನು ಅದನ್ನು ಕಳವು ಮಾಡಿದ ಬಳಿಕ ಪರಾರಿಯಾಗುವಾಗ ಅದನ್ನೆಲ್ಲೋ ಕಾಡಿನಲ್ಲಿ ಬೀಳಿಸಿಕೊಂಡಿದ್ದೇನೆ ಎಂದಿದ್ದ. ಅದಕ್ಕಾಗಿ ಕುಪ್ಪಳ್ಳಿಯ ಸುತ್ತ ಮುತ್ತ ಸಾಕಷ್ಟು ಹುಡುಕಾಟ ನಡೆಸಲಾಯಿತಾದರೂ, ಪದಕ ಪತ್ತೆಯಾಗಲಿಲ್ಲ.
ಕಳ್ಳತನವಾದುದೇ ಸಾಲದು ಎಂಬಂತೆ, ವರ್ಷಗಳು ಉರುಳಿದರೂ ಆ ಪದಕ ಮತ್ತೆ ಸಿಗಲಿಲ್ಲ. ಅದರೊಡನೆ, ಪ್ರಶಸ್ತಿ ಪುರಸ್ಕೃತರು ಇಂದು ಜೀವಂತವಾಗಿಲ್ಲ ಎಂಬ ಕಾರಣದಿಂದ ಪುರಸ್ಕಾರವನ್ನು ಮರಳಿ ನೀಡಲು ಸಾಧ್ಯವಿಲ್ಲ ಎಂದು ಸರ್ಕಾರ ಹೇಳಿಕೆ ನೀಡಿದ್ದು ಇನ್ನೊಂದು ದುಃಖದ ವಿಚಾರವಾಗಿದೆ.
ಇದನ್ನೂ ಓದಿ : ನೂರಕ್ಕೂ ಅಧಿಕ ಪೊಲೀಸ್ ಠಾಣೆಗಳ ನಿರ್ಮಾಣಕ್ಕೆ ಮುಂದಾದ ರಾಜ್ಯ ಸರ್ಕಾರ
ಕುವೆಂಪು ಅವರ ಮನೆ, ವಸ್ತು ಸಂಗ್ರಹಾಲಯವನ್ನು ನಿರ್ವಹಿಸುವ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಆ ಪುರಸ್ಕಾರದ ಪ್ರತಿಯನ್ನು ನೀಡುವಂತೆ ಕೇಂದ್ರ ಸರಕಾರಕ್ಕೆ ಮನವಿ ಮಾಡಿತ್ತು. ಆದರೆ ಕೇಂದ್ರ ಗೃಹ ಸಚಿವಾಲಯ ಕುವೆಂಪು ಅವರು ಜೀವಂತವಾಗಿಲ್ಲ ಎಂಬ ಕಾರಣ ನೀಡಿ, ಆ ಮನವಿಯನ್ನು ತಿರಸ್ಕರಿಸಿತು.
✍ಗಿರೀಶ್ ಲಿಂಗಣ್ಣ, ಲೇಖಕರು
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.