ಬೆಂಗಳೂರು: ಯುಗಾದಿ ಹಬ್ಬದ ವೇಳೆ ರಾಜ್ಯ ರಾಜಧಾನಿ ಬೆಂಗಳೂರಿನಿಂದ ತಮ್ಮ ಊರಿನ ಕಡೆಗೆ ಸಂಚರಿಸುವವರ ಸಂಖ್ಯೆ ಸಾಮಾನ್ಯವಾಗಿ ಹೆಚ್ಚಾಗಿಯೇ ಇರುತ್ತದೆ. ಹಬ್ಬದ ಸಂದರ್ಭದಲ್ಲಿ ಬೇರೆ ಊರುಗಳಿಗೆ ಹೋಗಿ ಬರುವ ಪ್ರಯಾಣಿಕರ ಸಂಖ್ಯೆ ಹೆಚ್ಚಿರುವುದರಿಂದ ಬೆಂಗಳೂರಿನಿಂದ ರಾಜ್ಯದ ವಿವಿಧ ಭಾಗಗಳಿಗೆ ತೆರಳುವವರಿಗೆ ಅನುಕೂಲ ಮಾಡಿಕೊಡುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹೆಚ್ಚುವರಿಯಾಗಿ 600 ಬಸ್ ವ್ಯವಸ್ಥೆ ಕಲ್ಪಿಸಿದೆ.
ಪ್ರಯಾಣಿಕರ ಸುಖಕರ ಪ್ರಯಾಣಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಎಪ್ರಿಲ್ 5 ಹಾಗೂ 6 ರಂದು ವಿವಿಧ ಮಾರ್ಗಗಳಿಗೆ 600 ಹೆಚ್ಚವರಿ ಬಸ್ ಗಳನ್ನು ಬಿಡಲು ನಿರ್ಧರಿಸಿದೆ.
ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆಸುಬ್ರಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ಹುಬ್ಬಳ್ಳಿ, ಧಾರವಾಡ, ದಾವಣಗೆರೆ, ಗೋಕರ್ಣ, ವಿಜಯಪುರ, ಶಿರಸಿ, ಕಾರವಾರ, ರಾಯಚೂರು, ಕಲಬುರ್ಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್, ತಿರುಪತಿಗೆ ವಿಶೇಷ ಬಸ್ ಗಳು ಸಂಚರಿಸಲಿವೆ.
ನಾಲ್ಕರಿಂದ ಐದು ಪ್ರಯಾಣಿಕರು ಒಟ್ಟಿಗೆ ಟಿಕೆಟ್ ಕಾಯ್ದಿರಿಸಿದಲ್ಲಿ ಅವರಿಗೆ ಶೇ.5 ರಷ್ಟು ರಿಯಾಯಿತಿ ಸಿಗಲಿದೆ. ವಿಶೇಷ ಸೂಚನೆ: ಹೋಗುವ-ಹಿಂದಿರುಗುವ ಟಿಕೆಟ್ ಅನ್ನು ಒಟ್ಟಿಗೆ ಕಾಯ್ದಿರಿಸಿದರೆ, ರಿಟರ್ನ್ ಟಿಕೆಟ್ ದರದಲ್ಲಿ ಈ ರಿಯಾಯಿತಿ ಸಿಗಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಪ್ರಯಾಣಿಕರು ಸಂಸ್ಥೆಯ ವೆಬ್ಸೈಟ್ ಗೆ ಭೇಟಿ ನೀಡಿ ಪರಿಶೀಲಿಸಿ.