Marakumbi caste atrocity case : ಆದರೆ ಈ ಒಂದು ತೀರ್ಪು ದುರಹಂಕಾರಿ ಸವರ್ಣಿಯರ ಜಂಗಾಬಲವನ್ನೇ ಉಡುಗಿಸುವಂತಿದೆ. ದಲಿತರ ಮೇಲೆ ಹಲ್ಲೆ ಮಾಡಿ ಅವರ ಗುಡಿಸಲುಗಳಿಗೆ ಬೆಂಕಿ ಇಟ್ಟು ಅಟ್ಟಹಾಸ ಮೆರೆದ ನೂರೊಂದು ಜನರಿಗೆ ಸಾಮೂಹಿಕ ಶಿಕ್ಷೆಯನ್ನು ವಿಧಿಸಲಾಗಿದೆ. ಅದರಲ್ಲಿ 98 ಜನ ದುರುಳರಿಗೆ ಜೀವಾವಧಿ ಶಿಕ್ಷೆಯಾಗಿದ್ದು ಬಹುಷಃ ಭಾರತದ ಇತಿಹಾಸದಲ್ಲೇ ಮೊದಲನೆಯದ್ದಾಗಿದೆ.
ಹಾಗಾದರೆ ಆಗಿದ್ದಾದರೂ ಏನು? ಹತ್ತು ವರ್ಷದ ಹಿಂದೆ 2015ರಲ್ಲಿ ಗಂಗಾವತಿ ತಾಲ್ಲೂಕಿನ ಮರಕುಂಬಿ ಗ್ರಾಮದ ಕೆಲವರು ಸಿನೆಮಾ ನೋಡಲು ಹೋಗಿದ್ದಾಗ ಟಿಕೇಟ್ ವಿಚಾರದಲ್ಲಿ ದಲಿತರ ಜೊತೆ ಜಗಳ ಮಾಡಿಕೊಂಡಿದ್ದರು. ಮೇಲ್ಜಾತಿಯವರಾದ ತಮಗೆ ಕೆಳಜಾತಿಯ ಯುವಕರು ಎದುರಾಡಿದ್ದು ಸವರ್ಣೀಯರ ಅಹಂಕಾರಕ್ಕೆ ದಕ್ಕೆ ತಂದಿತ್ತು. ಇದರ ದುಷ್ಪರಿಣಾಮದಿಂದಾಗಿ ಮಾರನೆಯ ದಿನ ಮರಕುಂಬಿ ಗ್ರಾಮದ ಹೊಟೇಲು ಹಾಗೂ ಕ್ಷೌರದಂಗಡಿಗೆ ದಲಿತರ ಪ್ರವೇಶವನ್ನು ನಿಶೇಧಿಸಲಾಯ್ತು. ಯಾವಾಗ ಈ ತಾರತಮ್ಯವನ್ನು ವಿರೋಧಿಸಿ ದಲಿತರು ಪೊಲೀಸರಿಗೆ ದೂರು ಕೊಟ್ಟರೋ, ಯಾವಾಗ ಪೊಲೀಸ ಅಧಿಕಾರಿಗಳು ಗ್ರಾಮದಲ್ಲಿ ತನಿಖೆ ಮಾಡಿ ಪ್ರಕರಣ ದಾಖಲಿಸಿಕೊಂಡು ಹೋದರೋ ಆಗ ಗ್ರಾಮದ ಸಮಸ್ತ ಸವರ್ಣೀಯರ ಸಿಟ್ಟು ನೆತ್ತಿಗೇರಿತು. ಅವತ್ತೇ ರಾತ್ರಿ ದಲಿತರ ಕೇರಿಗೆ ನುಗ್ಗಿದ ಮೇಲ್ಜಾತಿ ದುರುಳರು ದಲಿತರ ಗುಡಿಸಲುಗಳಿಗೆ ಬೆಂಕಿ ಹಚ್ಚಿ ಹಲ್ಲೆ ಮಾಡಿ ತಮ್ಮ ತೋಳ್ಬಲ ತೋರಿದರು.
ಇದರಿಂದಾಗಿ ದಲಿತರೆಲ್ಲಾ ಹೆದರಿಕೊಂಡು ಊರು ಬಿಟ್ಟು ಓಡಿ ಹೋಗುತ್ತಾರೆ ಎಂಬುದು ಮೇಲ್ಜಾತಿಯವರ ಲೆಕ್ಕಾಚಾರ ಮರುದಿನವೇ ಹುಸಿಯಾಗಿತ್ತು. ಒಟ್ಟು 117 ಜನರ ಮೇಲೆ ಕೇಸು ದಾಖಲಾಯ್ತು. ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು. ಈ ಘಟನೆಗೆ ಪ್ರಮುಖ ಸಾಕ್ಷಿ ಯಾಗಿದ್ದ ಸಿಇಐಎಂ ಪಕ್ಷದ ಕಾರ್ಯಕರ್ತ ವೀರೇಶ್ ಮರಕುಂಬಿಯನ್ನು ಕೋರ್ಟಿಗೆ ಹಾಜರಾಗುವ ದಿನ ಅಂದರೆ 2015 ಜುಲೈ 10 ರಂದು ಬೆಳಿಗ್ಗೆ ಕೊಲೆಮಾಡಿ ಕೊಪ್ಪಳದ ರೈಲು ಹಳಿಗಳ ಮೇಲೆ ಎಸೆಯಲಾಗಿತ್ತು. ಪೊಲೀಸರು ಮೇಲ್ಜಾತಿಯವರ ಪರವಾಗಿ ನಿಂತು ಅದೊಂದು ಆತ್ಮಹತ್ಯೆ ಎಂದು ಕೊಲೆ ಪ್ರಕರಣ ಮುಚ್ಚಿಹಾಕಿದರು.
ಸಾಕ್ಷಿಯನ್ನು ನಾಶಮಾಡಿದರೆ ಶಿಕ್ಷೆಯಿಂದ ಪಾರಾಗಬಹುದು ಎಂದುಕೊಂಡಿದ್ದ ಸವರ್ಣೀಯ ದುರಹಂಕಾರಿಗಳಿಗೆ ಕೊಪ್ಪಳದ ಪ್ರಧಾನ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಲಯವು ಹತ್ತು ವರ್ಷಗಳ ಸುದೀರ್ಘ ವಿಚಾರಣೆಯ ನಂತರ ಯಾರೂ ಕಲ್ಪಿಸಿಕೊಳ್ಳಲೂ ಆಗದಂತಹ ಶಿಕ್ಷೆಯನ್ನು 2024 ಅಕ್ಟೋಬರ್ 25 ರಂದು ಘೋಷಿಸಿ ಜಾತಿ ಶ್ರೇಷ್ಠತೆಯ ವ್ಯಸನಪೀಡಿತರಿಗೆ ಸೊಕ್ಕಡಗಿಸಿತು.
ಬೆಂಕಿ ಹಚ್ಚಿದ ಒಟ್ಟು 117 ಆರೋಪಿಗಳಲ್ಲಿ ಅಳಿದು ಉಳಿದ 101 ಜನರನ್ನು ಅಪರಾಧಿಗಳು ಎಂದು ನ್ಯಾಯಾಧೀಶರಾದ ಸಿ.ಚಂದ್ರಶೇಖರ್ ರವರು ಘೋಷಿಸಿದರು. ಅದರಲ್ಲಿ 98 ಮಂದಿ ಭಸ್ಮಾಸುರರಿಗೆ ಜೀವಾವಧಿ ಶಿಕ್ಷೆ ಹಾಗೂ ಬಾಕಿ ಮೂವರಿಗೆ ಐದು ವರ್ಷ ಕಠೋರ ಜೈಲು ಶಿಕ್ಷೆಯನ್ನು ಆದೇಶಿಸಲಾಯ್ತು. ಸಂವಿಧಾನದ ಆಶಯವನ್ನು ಎತ್ತಿ ಹಿಡಿದ, ದಲಿತರ ಮೇಲೆ ನಡೆದ ಅನಾಚಾರಕ್ಕೆ ಅತ್ಯುಗ್ರ ಶಿಕ್ಷೆಯನ್ನು ಕೊಟ್ಟ ಈ ನ್ಯಾಯಾಧೀಶರ ನಡೆ ಅತ್ಯಂತ ಮಾದರಿಯದ್ದಾಗಿದೆ. ತೋಳ್ಬಲದಿಂದ ಎಂತಹ ಕಾಂಡಗಳನ್ನು ಮಾಡಿ ಹಣಬಲದಿಂದ ದಕ್ಕಿಸಿಕೊಳ್ಳುತ್ತೇವೆ ಎನ್ನುವ ದುರಹಂಕಾರಿ ಜಾತಿವಾದಿಗಳಿಗೆ ನ್ಯಾಯಾಲಯದ ಆದೇಶ ಎಚ್ಚರಿಕೆಯ ಸಂದೇಶವನ್ನು ಕೊಟ್ಟಿದೆ. ಇದೇ ರೀತಿ ಕೆಳ ತಳ ವರ್ಗಗದವರ ಮೇಲೆ ಹಲ್ಲೆ ಹತ್ಯೆ ಮಾಡಿ ದೌರ್ಜನ್ಯವೆಸಗುವ ಎಲ್ಲಾ ಮೇಲ್ಜಾತಿ ದುರುಳರಿಗೆ ಈ ದೇಶದ ನ್ಯಾಯಾಲಯಗಳು ನ್ಯಾಯಸಮ್ಮತವಾದ ವಿಚಾರಣೆ ಮಾಡಿ ಗರಿಷ್ಟ ಶಿಕ್ಷೆ ವಿಧಿಸಿದ್ದೇ ಆದರೆ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ಖಂಡಿತಾ ನಿಯಂತ್ರಣಕ್ಕೆ ಬರುತ್ತವೆ. ಇಂದಿಲ್ಲಾ ನಾಳೆ ಸಂವಿಧಾನದ ಸಮಾನತೆಯ ಆಶಯ ನನಸಾಗುತ್ತದೆ.
ಆದರೆ ಎಲ್ಲಾ ನ್ಯಾಯಾಲಯಗಳಲ್ಲೂ ಚಂದ್ರಶೇಖರ್ ರವರಂತಹ ದಲಿತಪರ ನ್ಯಾಯಮೂರ್ತೀಗಳು ಇರಬೇಕಲ್ಲಾ? ಇದೇ ಮರಕುಂಬಿ ಪ್ರಕರಣದ ಅಪರಾಧಿಗಳು ಮೇಲಿನ ಕೋರ್ಟಿಗೆ ಅಪೀಲು ಹೋಗಿ ಜಾಮೀನು ಪಡೆಯುತ್ತಾರೆ. ಅಲ್ಲೂ ಅವರ ಪರವಾಗಿ ಆದೇಶ ಬಾರದಿದ್ದರೆ ಇನ್ನೂ ಮೇಲಿನ ನ್ಯಾಯಾಲಯದಲ್ಲಿ ಚಾಲೆಂಜ್ ಮಾಡುತ್ತಾರೆ. ಈ ತೀರ್ಪು ಬರುವುದಕ್ಕೇ ಹತ್ತು ವರ್ಷಗಳಾದವು. ಇನ್ನು ಮೇಲಿನ ನ್ಯಾಯಾಲಯಗಳನ್ನೆಲ್ಲಾ ಈ ಪ್ರಕರಣ ಹಾದು ಬರಬೇಕೆಂದರೆ ಇನ್ನೂ ಎರಡು ಮೂರು ದಶಕಗಳೇ ಬೇಕಾಗಬಹುದು. ಈಗಾಗಲೇ ಈ ಪ್ರಕರಣದಲ್ಲಿ ಭಾಗಿಯಾಗಿದ್ದ 16 ಜನರು ಅಸುನೀಗಿದ್ದಾರೆ. ಮೇಲಿನ ಕೋರ್ಟುಗಳಲ್ಲಿ ಅಂತಿಮ ತೀರ್ಪುಗಳು ಬರುವುದರಲ್ಲಿ ಅರ್ಧಕ್ಕೂ ಹೆಚ್ಚು ಅಪರಾಧಿಗಳಿಗೆ ಅಂತಿಮ ನಮನ ಸಲ್ಲಿಕೆಯಾಗಿರುತ್ತದೆ. ಬಹುತೇಕ ದೂರುದಾರರು ಹಾಗೂ ಸಾಕ್ಷಿಗಳು ಶಿವನ ಪಾದ ಸೇರಿಯಾಗಿರುತ್ತದೆ. ನಮ್ಮ ನ್ಯಾಯಾಂಗದ ವಿಳಂಬ ವ್ಯವಸ್ಥೆ ಹಾಗಿದೆ. ನ್ಯಾಯಾಧೀಶರ ಹಿನ್ನೆಲೆ, ಸಿದ್ದಾಂತ ಹಾಗೂ ಆಲೋಚನಾ ಕ್ರಮದ ಮೇಲೆ ಈ ಪ್ರಕರಣದ ಅಂತಿಮ ಆದೇಶ ನಿರ್ಧಾರವಾಗುತ್ತದೆ.
ಏನೇ ಆಗಲಿ. ದುರ್ಬಲ ಸಮುದಾಯದವರ ಮೇಲೆ ದೌರ್ಜನ್ಯವೆಸಗುವ ಮುನ್ನ ಹಲವು ಬಾರಿ ಸವರ್ಣೀಯರು ಯೋಚಿಸುವಂತೆ ಮಾಡುವ ಹಾಗೆ ಈ ಮುರಕುಂಬಿ ದಲಿತ ದಮನದ ಪ್ರಕರಣದ ತೀರ್ಪು ಹೊರಬಂದಿದೆ. ಕಾನೂನು ಇನ್ನೂ ಎಚ್ಚರವಾಗಿದೆ. ಈ ತೀರ್ಪು ಸಂವಿಧಾನದ ಗೆಲುವೂ ಆಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ