ಕರ್ನಾಟಕದ ಹಿರಿಮೆ ಸಾರುವ ರಾಜ್ಯೋತ್ಸವ

Last Updated : Nov 1, 2019, 06:00 AM IST
ಕರ್ನಾಟಕದ ಹಿರಿಮೆ ಸಾರುವ ರಾಜ್ಯೋತ್ಸವ  title=
file photo

ಪ್ರತಿ ವರ್ಷ ನವೆಂಬರ್ 1 ಬಂದಾಗಲೆಲ್ಲಾ ಕನ್ನಡ ರಾಜೋತ್ಸವದ ದಿನ ನೆನಪಿಗೆ ಬರುತ್ತದೆ. ಈ ದಿನವನ್ನು ಭೌಗೋಳಿಕವಾಗಿ ಹರಿದು ಹಂಚಿಹೋಗಿದ್ದ ಕನ್ನಡಿಗರಿಗೆ ಭಾಷೆ ಆಧಾರದ ಮೇಲೆ ತಮ್ಮ ಅಸ್ಮಿತೆಯನ್ನು ಪ್ರತಿಷ್ಠಾಪಿಸಿದ ದಿನವಾಗಿ ಕನ್ನಡಿಗರು ಆಚರಿಸುತ್ತಾರೆ. 

ಕನ್ನಡದ ಸಾಂಸ್ಕೃತಿಕ, ಭೌಗೋಳಿಕ ಪರಂಪರೆಯನ್ನು ಸ್ಮರಿಸುವ ದಿನವಾಗಿ ಆಚರಿಸುವ ಈ ದಿನಕ್ಕೆ ತನ್ನದೇ ಆದ ಮಹತ್ವವಿದೆ ಇದೆ. ಈ ದಿನವನ್ನು ಐತಿಹಾಸಿಕ ಹಿನ್ನಲೆ ಮೂಲಕ ನೋಡುತ್ತಾ ಹೊರಟಾಗ ಈ ದಿನದ ಮಹತ್ವ ತಿಳಿಯುತ್ತದೆ. ಸ್ವಾತಂತ್ರದ ಸಂದರ್ಭದಲ್ಲಿ ಒಂದು ಕಡೆ ಬ್ರಿಟಿಷರ ದಾಸ್ಯದಿಂದ ಮುಕ್ತಿ ಪಡೆಯುವ ಹೋರಾಟ ಒಂದೆಡೆಯಾದರೆ ಇನ್ನೊಂದೆಡೆ ಪ್ರದೇಶವಾರು ಹಂಚಿಹೋಗಿದ್ದ ಕನ್ನಡಿಗರಿಗೆ ಒಂದು ಭೌಗೋಳಿಕ ಮತ್ತು ಸಾಂಸ್ಕೃತಿಕ ನೆಲೆಯನ್ನು ಕಂಡುಕೊಳ್ಳುವುದಾಗಿತ್ತು. ಆಗ ಕನ್ನಡದ ಪ್ರದೇಶಗಳು ಬಾಂಬೆ, ಮದ್ರಾಸ್, ಮೈಸೂರು, ಪ್ರಾಂತ್ಯಗಳಲ್ಲಿ ಹಂಚಿಹೋಗಿದ್ದವು. ಇಂತಹ ಸಂದರ್ಭದಲ್ಲಿ ಆಯಾ ಪ್ರದೇಶದಲ್ಲಿ ಕನ್ನಡಿಗರು ಹಲವು ಹಕ್ಕುಗಳಿಂದ ವಂಚಿತರಾಗುತ್ತಿದ್ದರು.

ಇಂತಹ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟದ ಮೂಲಕ ಭಾರತೀಯರ ಐಕ್ಯತೆಯ ಮಹತ್ವವನ್ನು ಅರಿತುಕೊಂಡಿದ್ದ ಆಲೂರ್ ವೆಂಕಟರಾಯ್, ಹುಯಿಲುಗೋಳ ನಾರಾಯಣ್ ರಾವ್, ಸಿದ್ದಪ್ಪ ಕಂಬಳಿಯಂತಹ ಕನ್ನಡ ಪರ ಹೋರಾಟಗಾರರು ಕನ್ನಡದ ಸಾರ್ವಭೌಮತೆ ವಿಚಾರವಾಗಿ ಧ್ವನಿ ಎತ್ತಿದರು.ಇದಕ್ಕೆ ಪೂರಕವಾಗಿ ಆಲೂರ್ ವೆಂಕಟರಾಯರು 1905 ರಲ್ಲಿ ಮೊದಲ ಬಾರಿಗೆ ಕರ್ನಾಟಕ ಏಕೀಕರಣ ಚಳುವಳಿಗೆ ಅಡಿಪಾಯ ಹಾಕಿದರು. ಇನ್ನೊಂದೆಡೆ ಕನ್ನಡಿಗರಲ್ಲಿ ಏಕತೆ ಪ್ರಜ್ಞೆ ಮೂಡಿಸುವ ನಿಟ್ಟಿನಲ್ಲಿ ರಚಿಸಿದ ಹುಯಿಲುಗೋಳ ನಾರಾಯಣರ 'ಉದಯವಾಗಲಿ ಚೆಲುವ ಕನ್ನಡ ನಾಡು' ಗೀತೆ ಜನಜನಿತವಾಯಿತು.1924ರಲ್ಲಿ ಮಹಾತ್ಮಾ ಗಾಂಧೀಜಿಯವರು ಅಧ್ಯಕ್ಷತೆ ವಹಿಸಿದ ಬೆಳಗಾವಿ ಕಾಂಗ್ರೆಸ್ ಅಧಿವೇಶನದಲ್ಲಿ ಈ ಗೀತೆಯನ್ನು ಹಾಡಲಾಯಿತು. ವಿಶೇಷವೆಂದರೆ ಈ ಗೀತೆಯನ್ನು ಆಗಿನ್ನೂ ಬಾಲಕಿಯಾಗಿದ್ದ ಗಂಗೂಬಾಯಿ ಹಾನಗಲ್ ಅವರು ಹಾಡಿದ್ದರು.  

ಅಗಸ್ಟ್ 15 1947 ರಂದು ಭಾರತಕ್ಕೆ ಸ್ವಾತಂತ್ರ ಸಿಕ್ಕ ನಂತರ ದೇಶದೆಲ್ಲೆಡೆ ಭಾಷಾವಾರು ರಾಜ್ಯ ರಚನೆ ಕಿಚ್ಚು ತೀವ್ರಗೊಂಡಿತು. ಆಂಧ್ರದಲ್ಲಿ ಪೊಟ್ಟಿ ಶ್ರೀರಾಮಲು ಎನ್ನುವ ವ್ಯಕ್ತಿ 1952 ಡಿಸೆಂಬರ್ 15 ರಂದು ಭಾಷಾವಾರು ಆಂಧ್ರಪ್ರದೇಶದ ಏಕೀಕರಣದ ಹೋರಾಟದಲ್ಲಿ ಕೊನೆಯುಸಿರೆಳೆದರು. ಇದರಿಂದಾಗುವ ಪ್ರತಿಕೂಲ ಪರಿಣಾಮವನ್ನು ಅರಿತುಕೊಂಡ ಆಗಿನ ಪ್ರಧಾನಿಯಾಗಿದ್ದ ನೆಹರು ಭಾಷೆಯ ಆಧಾರದ ಮೇಲೆ ಆಂಧ್ರಪ್ರದೇಶವನ್ನು ಘೋಷಿಸಿದರು.

ಇದರ ಪರಿಣಾಮವಾಗಿ ಮುಂದೆ ಹಲವಾರು ರಾಜ್ಯಗಳಲ್ಲಿ ಭಾಷೆ ಆಧಾರದ ಮೇಲೆ ರಾಜ್ಯ ರಚನೆ ಹೋರಾಟ ತೀವ್ರಗೊಂಡಿತು. ಇದರ ಪ್ರತಿಫಲವಾಗಿ 1956 ರಲ್ಲಿ ಕನ್ನಡ ಮಾತನಾಡುವ ಪ್ರದೇಶಗಳನ್ನು ಒಂದುಗೂಡಿಸಿ ಮೈಸೂರು ರಾಜ್ಯ ಎಂದು ಘೋಷಣೆ ಮಾಡಲಾಯಿತು. ತದನಂತರ ಮುಂದೆ 1973 ರಲ್ಲಿ ಮೈಸೂರು ರಾಜ್ಯವನ್ನು ಕರ್ನಾಟಕವೆಂದು ಮರು ನಾಮಕರಣ ಮಾಡಲಾಯಿತು.  

 

Trending News