ಬುಡಕಟ್ಟು ಜನರ ಮನೆ ಬಾಗಿಲಿಗೆ ಸಂಚಾರಿ ಆರೋಗ್ಯ ಘಟಕ

ಬುಡಕಟ್ಟು ಮೂಲ ನಿವಾಸಿಗಳ ಮನೆ ಬಾಗಿಲಿನಲ್ಲೇ ಆರೋಗ್ಯ ಚಿಕಿತ್ಸೆ ನೀಡುವ ಈ ಯೋಜನೆ ದುರ್ಬಲವರ್ಗದವರ ಬಗೆಗೆ ನಮ್ಮ ಸರ್ಕಾರಕ್ಕಿರುವ ಬದ್ಧತೆಯನ್ನು ಬಿಂಬಿಸುತ್ತದೆ- ಡಾ. ಜಿ. ಪರಮೇಶ್ವರ್

Last Updated : Aug 1, 2018, 03:46 PM IST
ಬುಡಕಟ್ಟು ಜನರ ಮನೆ ಬಾಗಿಲಿಗೆ ಸಂಚಾರಿ ಆರೋಗ್ಯ ಘಟಕ title=

ಬೆಂಗಳೂರು: ಗ್ರಾಮೀಣ ಮತ್ತು ಅರಣ್ಯ ಪ್ರದೇಶಗಳಲ್ಲಿ ವಾಸವಿರುವ ಬುಡಕಟ್ಟು ಜನಾಂಗದವರಿಗೆ ಮನೆ ಬಾಗಿಲಲ್ಲಿಯೇ ವೈದ್ಯಕೀಯ ಸೌಲಭ್ಯ ನೀಡುವ ಸಲುವಾಗಿ ಒಟ್ಟು 8 ಕೋಟಿ ರೂ. ವೆಚ್ಚದಲ್ಲಿ 16 ಸಂಚಾರಿ ಆರೋಗ್ಯ ಘಟಕಗಳನ್ನು ಸಜ್ಜುಗೊಳಿಸಲಾಗಿದ್ದು, ಈ ವಿನೂತನ ಯೋಜನೆಯನ್ನು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಮೂಲಕ ಲೋಕಾರ್ಪಣೆಗೊಳಿಸಲಾಯಿತು. 

ಬುಧವಾರ ವಿಧಾನಸೌಧ ಮುಂಭಾಗ ಸಂಚಾರಿ ಆರೋಗ್ಯ ಘಟಕ ಸೇವೆ (ಆಂಬ್ಯುಲೆನ್ಸ್)ಗೆ ಚಾಲನೆ ನೀಡಿ ಮಾತನಾಡಿದ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಬುಡಕಟ್ಟು ಜನಾಂಗದವರಿಗೆ ಸರಿಯಾದ ಸಮಯಕ್ಕೆ ಆರೋಗ್ಯ ಸೇವೆ ನೀಡಬೇಕಾದ್ದು ನಮ್ಮ ಜವಾಬ್ಧಾರಿ. ಹೀಗಾಗಿ ಸಮಾಜ ಕಲ್ಯಾಣ ಇಲಾಖೆಯಿಂದ‌ 16 ಆ್ಯಂಬುಲೆನ್ಸ್‌ಗಳನ್ನು ನೀಡಿದ್ದೇವೆ. ಈ ಆ್ಯಂಬುಲೆನ್ಸ್‌ಗಳು ಅವರ ಸ್ಥಳಗಳಿಗೇ ತೆರಳಿ ಉಚಿತ ಚಿಕಿತ್ಸೆ ಕೊಡುವ ನಿಟ್ಟಿನಲ್ಲಿ ಈ ಸೇವೆ ಪ್ರಾರಂಭಿಸಿದ್ದೇವೆ ಎಂದರು. 

ಬುಡಕಟ್ಟು ಮೂಲ ನಿವಾಸಿಗಳ ಮನೆ ಬಾಗಿಲಿನಲ್ಲೇ ಆರೋಗ್ಯ ಚಿಕಿತ್ಸೆ ನೀಡುವ ಈ ಯೋಜನೆ ದುರ್ಬಲವರ್ಗದವರ ಬಗೆಗೆ ನಮ್ಮ ಸರ್ಕಾರಕ್ಕಿರುವ ಬದ್ಧತೆಯನ್ನು ಬಿಂಬಿಸುತ್ತದೆ ಎಂದು ಅಭಿಪ್ರಾಯಪಟ್ಟಿರುವ ಡಿಸಿಎಂ, ಸಮಾಜ ಕಲ್ಯಾಣ ಇಲಾಖೆ ಇಂತಹ ಹೊಸ ಯೋಜನೆಗಳನ್ನು ರೂಪಿಸುವ ಮೂಲಕ ಸಮಾಜದ ಸೌಲಭ್ಯವಂಚಿತ ಕುಟುಂಬಗಳಿಗೆ ಪೂರಕವಾಗುವ ಹಾದಿಯಲ್ಲಿ ಸಾಗಲಾರಂಭಿಸಿದೆ ಎಂದು ಹೇಳಿದರು.

ಪ್ರತಿ ಸಂಚಾರಿ ಆರೋಗ್ಯ ಘಟಕವು ವೈದ್ಯರು ಶುಶ್ರೂಷಕರು, ಪ್ಯಾರಾಸಿಸ್ಟ್, ಲ್ಯಾಬ್ ಟೆಕ್ನಿಷಿಯನ್, ಕಿರಿಯ ಆರೋಗ್ಯ ಸಹಾಯಕಿ ಹಾಗೂ ಚಾಲಕರ ತಂಡವನ್ನು ಒಳಗೊಂಡಿರುತ್ತದೆ. ಈ ಸಂಚಾರಿ ಘಟಕವು ಪ್ರತಿನಿತ್ಯ ಬೆಳಗ್ಗೆ ಹಾಗೂ ಮಧ್ಯಾಹ್ನ ಎರಡು ಗ್ರಾಮಗಳಿಗೆ ಭೇಟಿ ನೀಡಿ ಬುಡಕಟ್ಟು ಜನರು ವಾಸಿಸುವ ಜಿಲ್ಲೆಗಳಲ್ಲಿ ಆರೋಗ್ಯ ತಪಾಸಣೆ, ಆರೋಗ್ಯ ಜಾಗೃತಿ ಮತ್ತು ಸರಳ ಆರೋಗ್ಯ ಸೇವೆಯನ್ನು ಜನರ ಮನೆ ಬಾಗಿಲಿಗೆ ತಲುಪಿಸಲಿದೆ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ವಿವರಿಸಿದ್ದಾರೆ. ರೋಗಿಗಳಿಗೆ ಅವಶ್ಯವಿರುವ ಔಷಧ ಸಾಮಗ್ರಿಗಳು ಈ ಸಂಚಾರಿ ಘಟಕದಲ್ಲಿ ಲಭ್ಯವಿರಲಿದ್ದು, ಅವಶ್ಯವಿರುವ ರೋಗಿಗಳಿಗೆ ಗುಳಿಗೆ ಮುಂತಾದ ಔಷಧಗಳನ್ನೂ ಸ್ಥಳದಲ್ಲಿಯೇ ವಿತರಿಸಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದಾರೆ.

ಈ ಸಂಚಾರಿ ಘಟಕಗಳು ಜಿ.ಪಿ.ಎಸ್. ಹಾಗೂ ಡಿಜಿಟಲ್ ಪೇಷಂಟ್ ರೆಕಾರ್ಡ್ ಸಿಸ್ಟಮ್ ಅನ್ನು ಒಳಗೊಂಡಿರುತ್ತದೆ. ರೋಗಿಗಳ ಆರೋಗ್ಯ ತಪಾಸಣೆ ಮಾಡಿ ಸ್ಥಳದಲ್ಲಿಯೇ ಔಷೋಧೋಪಚಾರ ಮಾಡಲಾಗುವುದು. ಹೆಚ್ಚಿನ ವೈದ್ಯಕೀಯ ಚಿಕಿತ್ಸೆ ಅವಶ್ಯವಿರುವ ರೋಗಿಗಳನ್ನು ಸಮೀಪದ ಆಸ್ಪತ್ರೆಗಳಿಗೆ ಕಳುಹಿಸಿಕೊಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಮೂಲನಿವಾಸಿ ಬುಡಕಟ್ಟು ಪಂಗಡಗಳಾದ ಜೇನು ಕುರುಬ, ಕೊರಗ ಮತ್ತು ಅರಣ್ಯ ಅವಲಂಬಿತ ಬುಡಕಟ್ಟು ಜನರು ರಾಜ್ಯದ ಎಂಟು ಜಿಲ್ಲೆಗಳಲ್ಲಿ ನೆಲೆಸಿದ್ದು, ಈ ಜಿಲ್ಲೆಗಳಲ್ಲಿ ತಲಾ ಎರಡು ಸಂಚಾರಿ ಘಟಕಗಳು ಕಾರ್ಯೋನ್ಮುಖವಾಗಲಿವೆ. ಮೊದಲನೇ ಹಂತದಲ್ಲಿ ಕೊಡಗು ಜಿಲ್ಲೆಯ ಸೋಮವಾರ ಪೇಟೆ, ವಿರಾಜಪೇಟೆ ಮತ್ತು ಮಡಿಕೇರಿ ತಾಲ್ಲೂಕುಗಳು, ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ, ಹೆಗ್ಗಡದೇವನಕೋಟೆ ಮತ್ತು ಹುಣಸೂರು ತಾಲ್ಲೂಕುಗಳು, ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ, ಯಳಂದೂರು ಮತ್ತು ಗುಂಡ್ಲುಪೇಟೆ ತಾಲ್ಲೂಕುಗಳಲ್ಲಿ ಸಂಚಾರಿ ಆರೋಗ್ಯ ಘಟಕಗಳ ಸೇವೆ ಆರಂಭಗೊಳ್ಳಲಿದೆ.

ಎರಡನೇ ಹಂತದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಭಂಟ್ವಾಳ ಹಾಗೂ ಪುತ್ತೂರು ತಾಲ್ಲೂಕುಗಳು, ಉಡುಪಿ ಜಿಲ್ಲೆಯ ಕುಂದಾಪುರ ಮತ್ತು ಉಡುಪಿ ತಾಲ್ಲೂಕುಗಳು, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಮತ್ತು ತರಿಕೆರೆ ತಾಲ್ಲೂಕುಗಳು, ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕು ಮತ್ತು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲ್ಲೂಕುಗಳಲ್ಲಿ ಉಳಿದ ಎಂಟು ಸಂಚಾರಿ ಘಟಕಗಳು ಕಾರ್ಯ ಆರಂಭಿಸಲಿವೆ.
 

Trending News