ಕರ್ನಾಟಕದಲ್ಲಿ ಪ್ರವಾಹ ಭೀತಿ; ಹೈ ಅಲರ್ಟ್ ಘೋಷಣೆ

ಮಳೆ ಹಾನಿ ಕುರಿತು ನಿಗಾ ವಹಿಸುವಂತೆ ಹಾಗೂ ಪರಿಹಾರ ಕ್ರಮ ಕೈಗೊಳ್ಳುವಂತೆ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದ್ದಾರೆ.

Last Updated : Aug 15, 2018, 07:08 PM IST
ಕರ್ನಾಟಕದಲ್ಲಿ ಪ್ರವಾಹ ಭೀತಿ; ಹೈ ಅಲರ್ಟ್ ಘೋಷಣೆ title=

ಬೆಂಗಳೂರು: ರಾಜ್ಯದಲ್ಲಿ ಕಳೆದ ಎರಡು ವಾರಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಚಿಕ್ಕಮಗಳೂರು, ಉಡುಪಿ, ಶಿವಮೊಗ್ಗ, ಕೊಡಗು, ಮೈಸೂರು ಜಿಲ್ಲೆಗಳಲ್ಲಿ ನದಿಗಳು ತುಂಬಿ ಹರಿಯುತ್ತಿದ್ದು ಪ್ರವಾಹ ಭೀತಿ ಎದುರಾಗಿದೆ. ಹೀಗಾಗಿ ರಾಜ್ಯದ 14 ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. 

ರಾಜ್ಯದ ಬಹುತೇಕ ಜಲಾಶಯಗಳು ತುಂಬಿದ್ದು, ಜಲಾಶಯಗಳಿಂದ ನೀರು ಹೊರ ಬಿಡಲಾಗುತ್ತಿದೆ. ಇದರಿಂದಾಗಿ ನದಿ ಪಾತ್ರಗಳಲ್ಲಿ ಪ್ರವಾಹ ರೀತಿಯ ಪರಿಸ್ಥಿತಿ ಏರ್ಪಟ್ಟಿದೆ. ಶಿರಾಡಿ, ಚಾರ್ಮುಡಿ ಘಾಟ್​ ರಸ್ತೆಗಳು ಗುಡ್ಡ ಕುಸಿತದಿಂದ ಬಂದ್​ ಆಗಿದ್ದು, ಹಲವೆಡೆ ನದಿಗಳು ಉಕ್ಕಿ ಹರಿದ ಪರಿಣಾಮ ಜನರು ಸಂಪರ್ಕ ಕಳೆದುಕೊಂಡಿದ್ದಾರೆ. 

ರಾಜ್ಯಾದ್ಯಂತ ಭಾರೀ ಮಳೆಗೆ ಸರ್ಕಾರ ಕಂಗಾಲಾಗಿದ್ದು, ಕಟ್ಟೆಚ್ಚರ ವಹಿಸಲು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಜಿಲ್ಲ ಉಸ್ತುವಾರಿ ಸಚಿವರಿಗೆ ಸೂಚನೆ ನೀಡಿದ್ದಾರೆ. ಚಿಕ್ಕಮಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡ, ಹಾಸನ, ಕೊಡಗು, ಮೈಸೂರು, ಮಂಡ್ಯ ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು, ಜಿಲ್ಲಾಡಳಿತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಮಳೆ ಹಾನಿ ಕುರಿತು ನಿಗಾ ವಹಿಸುವಂತೆ ಹಾಗೂ ಪರಿಹಾರ ಕ್ರಮ ಕೈಗೊಳ್ಳುವಂತೆ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದ್ದಾರೆ.

ಒಂದೆಡೆ ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದು ಅಕ್ಕಪಕ್ಕದ ಬಡಾವಣೆಗೆ ನೀರು ನುಗ್ಗಿ ಅವಾಂತರ ಸೃಷ್ಟಿ ಮಾಡಿದೆ. ಕೊಡಗು ಜಿಲ್ಲೆ ಗಡಿ ಮೈಸೂರಿನ ಕೊಪ್ಪಕ್ಕೂ ಪ್ರವಾಹ ಬಿಸಿ ಮುಟ್ಟಿದ್ದು, ಕಾವೇರಿ ನದಿ ತಟದಲ್ಲಿ ಇರುವ ಬೈಲಕುಪ್ಪೆಗೆ ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಡೆ ಆಗಿದೆ. ಇನ್ನು ಎಂದಿನಂತೆ ಭಾಗಮಂಡಲ ಜಲಾವೃತವಾಗಿದ್ದು ನೀರಿನ ಪ್ರಮಾಣ ಏರಿಕೆ ಆದ ಕಾರಣ ವಿರಾಜಪೇಟೆ-ಮಡಿಕೇರಿ ನಡುವೆ ಸಂಪರ್ಕ ಕಲ್ಪಿಸುವ ಭೇತ್ರಿ ಸೇತುವೆ ಹಲವು ವರ್ಷಗಳ ಬಳಿಕ ಮುಳುಗಡೆ ಆಗಿದ್ದು ಸಂಚಾರ ಕಡಿತಗೊಂಡಿದೆ.

ಬಲಮುರಿ, ಎಮ್ಮೆಗಾಳು, ಬೋಳಿಬಾಣೆಯಲ್ಲಿ, ಭತ್ತದ ಗದ್ದೆಗಳು ಸಂಪೂರ್ಣ ಜಲಾವೃತಗೊಂಡು ಸಾಕಷ್ಟು ನಷ್ಟ ಉಂಟಾಗಿದೆ. ಇತ್ತ ವಿರಾಜಪೇಟೆ ತಾಲೂಕಿನ ನಿಟ್ಟೂರಿನಲ್ಲಿ ಲಕ್ಷಣ ತೀರ್ಥ ನದಿ ಉಕ್ಕಿ ಅನಾಹುತ ಸೃಷ್ಟಿಸಿದೆ. ಮಾದಾಪುರ ಹೊಳೆ, ಹಟ್ಟಿ ಹೊಳೆ, ಕುಮಾರಧಾರ, ಅಪಾಯ ಮಟ್ಟದಲ್ಲಿ ಹರಿಯುತ್ತಿದೆ. ಹಲವು ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ ಮತ್ತು ವಿದ್ಯುತ್ ಸಂಪರ್ಕ ಕಳೆದುಕೊಂಡಿದೆ. 

Trending News