ಬೆಂಗಳೂರು: ಸೆಪ್ಟೆಂಬರ್ ಮೂರನೇ ವಾರದಲ್ಲಿ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಕಾಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದ್ದಾರೆ.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ಸೆಪ್ಟಂಬರ್ 3ನೇ ವಾರದಲ್ಲಿ ಸಂಪುಟ ವಿಸ್ತರಣೆ ಜತೆಗೆ ಕಾಂಗ್ರೆಸ್ ನ 20 ಹಾಗೂ ಜೆಡಿಎಸ್ ನ 10 ಶಾಸಕರನ್ನು ನಿಗಮಗಳಿಗೆ ನೇಮಕ ಮಾಡುವ ನಿರ್ಧಾರ ಪ್ರಕಟಿಸಿದರು. ಉಳಿದ ಕಾರ್ಯಕರ್ತರಿಗೆ ನಂತರ ಅವಕಾಶ ಮಾಡಿಕೊಡುವ ಭರವಸೆ ನೀಡಿದ್ದಾರೆ.
ಮುಂದುವರೆದು, ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ಗೊಂದಲವಿಲ್ಲ. ಸಮ್ಮಿಶ್ರ ಸರ್ಕಾರ ಐದು ವರ್ಷ ಪೂರೈಸಲಿದೆ. ಸಾಮಾನ್ಯ ಕನಿಷ್ಠ ಯೋಜನೆ ಮುಂದುವರೆಕೆಗೂ ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ. ಅಂತೆಯೇ ನಾವೆಲ್ಲರೂ ಒಂದೇ ಎಂದು ಹೇಳಿದ ಸಿದ್ದರಾಮಯ್ಯ ಅವರು, ಸರ್ಕಾರ ಉತ್ತಮ ದಿಕ್ಕಿನಲ್ಲಿ ಸಾಗಿದೆ. ಈ ಬಗ್ಗೆ ಬಿಜೆಪಿ ಚಿಂತಿಸುವ ಅಗತ್ಯವಿಲ್ಲ. ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದ ಭರವಸೆಗಳ ಈಡೇರಿಕೆ ಕುರಿತು ಬಿಜೆಪಿ ಚಿಂತಿಸಲಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
105 ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಫ್ರೆಂಡ್ಲಿ ಫೈಟ್ ನಡೆಸಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಚುನಾವಣೋತ್ತರ ಮೈತ್ರಿ ಮಾಡಿಕೊಳ್ಳಲು ನಿರ್ಧರಿಸಿವೆ. ಸಮನ್ವಯ ಸಮಿತಿ ಸಭೆಯಲ್ಲಿ ಈ ಬಗ್ಗೆ ಎರಡೂ ಪಕ್ಷದ ನಾಯಕರು ಒಮ್ಮತದ ತೀರ್ಮಾನ ಮಾಡಿದ್ದಾರೆ. ಸ್ಥಳೀಯ ಸಂಸ್ಥೆಗಳಲ್ಲಿ ಅತಂತ್ರವಾಗುವೆಡೆ ಎರಡೂ ಪಕ್ಷ ಒಟ್ಟಾಗಿ ಅಧಿಕಾರ ಹಿಡಿಯುವ ಬಗ್ಗೆ ತೀರ್ಮಾನ ಮಾಡಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.