ಮೈಸೂರಿನಲ್ಲಿ ಮೈತ್ರಿ ಅಭ್ಯರ್ಥಿ ಸೋತರೆ ನಾವಂತೂ ಹೊಣೆಯಲ್ಲ-ಜಿ.ಟಿ. ದೇವೇಗೌಡ

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ವಿಶ್ವನಾಥ್ ಸೋತಿದ್ದರು. ಆಗ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತಿದ್ದರಾ- ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಪ್ರಶ್ನೆ

Last Updated : Apr 5, 2019, 03:31 PM IST
ಮೈಸೂರಿನಲ್ಲಿ ಮೈತ್ರಿ ಅಭ್ಯರ್ಥಿ ಸೋತರೆ ನಾವಂತೂ ಹೊಣೆಯಲ್ಲ-ಜಿ.ಟಿ. ದೇವೇಗೌಡ title=
File Image

ಮೈಸೂರು: ಮೈಸೂರು-ಕೊಡಗು ಲೋಕಸಭೆಯಲ್ಲಿ ಮೈತ್ರಿ ಅಭ್ಯರ್ಥಿ ಸೋತರೆ ನಾನಾಗಲಿ ಅಥವಾ ಸಾ.ರಾ ಮಹೇಶ್ ಆಗಲಿ ಹೊಣೆಗಾರರಲ್ಲ ಎಂದು ಜೆಡಿಎಸ್ ನಾಯಕ ಹಾಗೂ ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಹೇಳಿದ್ದಾರೆ.

ಮೈಸೂರಿನಲ್ಲಿಂದು ಸಚಿವ ಜಿ.ಟಿ.ದೇವೇಗೌಡ ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರ ಸಭೆಯಲ್ಲಿ, ಎಂಎಲ್ ಸಿ ಮರಿತಿಬ್ಬೇಗೌಡ ಮಾತನಾಡಿ, ಕಳೆದ 10 ವರ್ಷಗಳ ಹಿಂದಿನ ಚುನಾವಣೆಗೂ ಈಗಿನ ಚುನಾವಣೆಗೂ ಸಾಕಷ್ಟು ಬದಲಾಗಿದೆ. ಆಗ ನೀವೆಲ್ಲರೂ ಜೆಡಿಎಸ್ ಅಭ್ಯರ್ಥಿಗಳ ಪರ ಕೆಲಸ ಮಾಡಿದ್ದೀರಿ. ಸಾಕಷ್ಟು ನೋವು ಅನುಭವಿಸಿದ್ದೀರಿ. ಈಗ ಲೋಕಸಭಾ ಚುನಾವಣೆಗಾಗಿ ಕಾಂಗ್ರೆಸ್-ಜೆಡಿಎಸ್ ಒಪ್ಪಂದ ಮಾಡಿಕೊಂಡಿದ್ದು, ಎಲ್ಲರೂ ಒಟ್ಟಾಗಿ ಕಾಂಗ್ರೆಸ್ ಅಭ್ಯರ್ಥಿ ಪರ ಕೆಲಸ ಮಾಡಿ ಎಂದು ಮನವಿ ಮಾಡಿದರು. 

ಈ ವೇಳೆ ತಮ್ಮ ಆಕ್ರೋಶ ವ್ಯಕ್ತಪಡಿಸಿದ ಜೆಡಿಎಸ್ ಕಾರ್ಯಕರ್ತರು ವಿಧಾನಸಭೆ ಚುನಾವಣೆ ವೇಳೆ ಜೆಡಿಎಸ್ ಪರ ಕೆಲಸ ಮಾಡಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದೇವೆ. ಈಗ ನೀವು ನಾಯಕರು ಒಪ್ಪಂದ ಮಾಡಿಕೊಂಡು ಬಂದು ಬಿಟ್ಟರೆ ನಾವು ಕೆಲಸ ಮಾಡಬೇಕೆ ಎಂದು ಖಾರವಾಗಿ ಪ್ರಶ್ನಿಸಿದ್ದಾರಲ್ಲದೆ, ಪ್ರಧಾನಿ ನರೇಂದ್ರ ಮೋದಿಯವರಿಗೆ ಜೈಕಾರ ಹಾಕಿದ್ದಾರೆ. ಜೊತೆಗೆ ನಾವು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷದ ಪರವಾಗಿ ಕೆಲಸ ಮಾಡುವುದಿಲ್ಲ ಎಂದು ಜಿ.ಟಿ. ದೇವೇಗೌಡರ ಎದುರೇ ಹೇಳಿದ್ದಾರೆ.

ಈ ವೇಳೆ ಕಾರ್ಯಕರ್ತರನ್ನು ಸಮಾಧಾನ ಪಡಿಸಲು ಮುಂದಾದ ಜಿಟಿಡಿ, ಕಾಂಗ್ರೆಸ್-ಜೆಡಿಎಸ್ ನಡುವೆ ಚುನಾವಣಾ ಮೈತ್ರಿ ಮಾಡಿಕೊಳ್ಳಲಾಗಿದ್ದು, ಮೈತ್ರಿ ಅಭ್ಯರ್ಥಿ ಬೆಂಬಲಿಸುವುದು ನಮ್ಮ ಕರ್ತವ್ಯ. ಹಳೆಯದನ್ನು ಮರೆತು ವರಿಷ್ಠರು ಹೇಳಿದಂತೆ ಕರ್ತವ್ಯ ಪಾಲನೆ ಮಾಡುವಂತೆ ಕಾರ್ಯಕರ್ತರಲ್ಲಿ ಮನವಿ ಮಾಡಿದರಾದರೂ ಕಾರ್ಯಕರ್ತರನ್ನು ಸಮಾಧಾನ ಪಡಿಸಲು ಸಾಧ್ಯವಾಗಲಿಲ್ಲ. 

ಬಳಿಕ ಮಾತನಾಡಿದ ಜಿಟಿಡಿ ನಮ್ಮ ಪ್ರಯತ್ನವನ್ನು ನಾವು ಮಾಡುತ್ತೇವೆ. ಮೈಸೂರು-ಕೊಡಗು ಲೋಕಸಭೆಯಲ್ಲಿ ಮೈತ್ರಿ ಅಭ್ಯರ್ಥಿ ಸೋತರೆ ನಾನಾಗಲಿ ಅಥವಾ ಸಾ.ರಾ ಮಹೇಶ್ ಆಗಲಿ ಹೊಣೆಗಾರರಲ್ಲ ಎಂದರು. ಅಲ್ಲದೆ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ವಿಶ್ವನಾಥ್ ಸೋತಿದ್ದರು. ಆಗ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತಿದ್ದರಾ ಎಂದು ಪ್ರಶ್ನಿಸಿದರು.

Trending News