ಬೆಂಗಳೂರು: ಮಧ್ಯಂತರ ಚುನಾವಣೆ ಬಗ್ಗೆ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ ಮಾತನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ ಹೇಳಿದ್ದಾರೆ.
ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಧ್ಯಂತರ ಚುನಾವಣೆ ನಡೆಯುತ್ತದೆ ಎಂದು ಹೆಚ್.ಡಿ.ದೇವೇಗೌಡರು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಆದರೆ ಅವರು, ಹಿರಿಯರು, ಮಾಜಿ ಪ್ರಧಾನಿ, ರಾಜಕೀಯವನ್ನು ಚೆನ್ನಾಗಿ ಬಲ್ಲವರು, ಅನುಭವಸ್ಥರು, ಹಾಗಾಗಿ ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸುತ್ತೇವೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆ ಬಗ್ಗೆ ದೇವೇಗೌಡರು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಸಿಎಂ, ಹೌದು ಕಾಂಗ್ರೆಸ್ ವರಿಷ್ಠರು ನಾವೆಲ್ಲರೂ ಸೇರಿ ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡಿ ಎಂದು ದೇವೇಗೌಡರ ಮನೆಗೆ ಹೋಗಿದ್ದು ನಿಜ. ರಾಹುಲ್ ಗಾಂಧಿಯವರು ನಾವೆಲ್ಲರೂ ಒಟ್ಟಿಗೆ ಸಾಗೋಣ, ಬಿಜೆಪಿ ಆಡಳಿತ ಸರಿಯಾಗಿಲ್ಲ ಎಂದು ಹೇಳಿದ್ದೂ ಸತ್ಯ. ಈಗ ನಾವೆಲ್ಲಾ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಎಂದು ಒಪ್ಪಿ ಸರ್ಕಾರ ನಡೆಸುತ್ತಿದ್ದೇವೆ. ಇದರಲ್ಲಿ ಎರಡು ಮಾತಿಲ್ಲ. ಸಮ್ಮಿಶ್ರ ಸರ್ಕಾರ ಎಂದಾಗ ಅನೇಕ ಅಭಿಪ್ರಾಯ, ಅನಿಸಿಕೆ ಬರುತ್ತದೆ. ಅದೆಲ್ಲವನ್ನೂ ಅನುಸರಿಸಿಕೊಂಡು ಹೋಗುವುದು ಮೈತ್ರಿ ಧರ್ಮ ಎಂದು ಹೇಳಿದರು.
ದೇವೇಗೌಡರ ಹೇಳಿಕೆ ಬಗ್ಗೆ ಸಿಎಂ ಕುಮಾರಸ್ವಾಮಿ, ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಅವರೆಲ್ಲರೊಂದಿಗೆ ಒಟ್ಟಿಗೆ ಕುಳಿತು ಚರ್ಚೆ ನಡೆಸುತ್ತೇವೆ ಎಂದು ಪರಮೇಶ್ವರ್ ಹೇಳಿದರು.