ಬೆಂಗಳೂರು: ಕರ್ನಾಟಕದಲ್ಲಿ ಬಾಲ ಗರ್ಭಿಣಿಯರ ಸಂಖ್ಯೆ ಅಧಿಕವಾಗಿರುವುದು ಎಚ್ಚರಿಕೆಯ ಗಂಟೆಯಾಗಿದೆ. ಬಾಲ್ಯ ವಿವಾಹದ ಪಿಡುಗನ್ನು ತೊಡೆದುಹಾಕುವಲ್ಲಿ ಎಷ್ಟೇ ಯತ್ನಿಸಿದರೂ ಅದರ ನಿಯಂತ್ರಣ ಪರಿಣಾಮಕಾರಿಯಾಗಿ ಆಗುತ್ತಿಲ್ಲ. ಕರ್ನಾಟಕದಂಥ ಪ್ರಗತಿಶೀಲ ರಾಜ್ಯದಲ್ಲಿ ಬಾಲ ಗರ್ಭಿಣಿಯರ ಸಂಖ್ಯೆ 13,477 ಇರುವುದು ಕಳವಳಕಾರಿ ವಿಚಾರವಾಗಿದೆ.
ಕರ್ನಾಟಕದಂಥ ಪ್ರಗತಿಶೀಲ ರಾಜ್ಯ ಬಾಲಗರ್ಭಿಣಿಯರ ಪ್ರಮಾಣ ಹೆಚ್ಚುತ್ತಿರುವುದು ಪ್ರಗತಿಪರ ಕರುನಾಡು ನಾಚಿಕೆ ಪಡುವಂಥ ವಿಚಾರವಾಗಿದೆ. ರಾಜ್ಯದಲ್ಲಿ ಬಾಲ್ಯ ವಿವಾಹದಂಥ ಪ್ರಕರಣಗಳಿಗೆ ಅಂಕುಶ ಹಾಕಲು ಯತ್ನಿಸಲಾಗುತ್ತಿದೆ. ಆದರೆ, ಅದಕ್ಕೆ ಪೂರ್ಣ ವಿರಾಮ ಹಾಕುವಲ್ಲಿ ಸಾಧ್ಯವಾಗುತ್ತಿಲ್ಲ. ಇದರ ಜೊತೆಗೆ ಬಾಲ ಗರ್ಭಿಣಿಯರ ಸಂಖ್ಯೆ ರಾಜ್ಯದಲ್ಲಿ ಹೆಚ್ಚಾಗಿರುವುದು ರಾಜ್ಯ ಸರ್ಕಾರಕ್ಕೆ ದೊಡ್ಡ ತಲೆನೋವಿನ ಸಂಗತಿಯಾಗಿದೆ. 18 ವರ್ಷಗಳಿಗಿಂತ ಕಡಿಮೆ ವಯಸ್ಸಿನವರು ಗರ್ಭಿಣಿಯಾಗುತ್ತಿರುವುದು ಆತಂಕಕಾಕರಿ ವಿಷಯವಾಗಿದೆ.
ರಾಜ್ಯದಲ್ಲಿ 13,477 ಬಾಲ ಗರ್ಭಿಣಿ ಪ್ರಕರಣ:
ರಾಜ್ಯದಲ್ಲಿ ಜ.1, 2022ರಿಂದ ಮಾರ್ಚ್ 31, 2023ರ ವರೆಗೆ 13,477 ಬಾಲ ಗರ್ಭಿಣಿ ಪ್ರಕರಣಗಳು ಪತ್ತೆಯಾಗಿದೆ. ಸಂತಾನೋತ್ಪತ್ತಿ ಮಕ್ಕಳ ಆರೋಗ್ಯ (RCH) ದತ್ತಾಂಶದ ಪ್ರಕಾರ ರಾಜ್ಯದಲ್ಲಿ 13,477 ಗರ್ಭಿಣಿಯರ ಪ್ರಕರಣ ದಾಖಲಾಗಿದೆ. ನಿನ್ನೆ ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಡಿಸಿಗಳ ಜೊತೆಗಿನ ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಈ ವರದಿಯನ್ನು ಮುಂದಿಟ್ಟಿದೆ.
ಅಚ್ಚರಿ ಎಂಬಂತೆ ಬೆಂಗಳೂರು ನಗರವೇ ಅತಿ ಹೆಚ್ಚು ಬಾಲಗರ್ಭಿಣಿ ಪ್ರಕರಣಗಳಿಗೆ ಸಾಕ್ಷಿಯಾಗಿರುವುದು ಅತ್ಯಂತ ಕಳವಳ ವಿಚಾರವಾಗಿದೆ. ಬೆಂಗಳೂರು ನಗರದಲ್ಲಿ 1,334 ಬಾಲ ಗರ್ಭಿಣಿ ಪ್ರಕರಣ ಪತ್ತೆಯಾಗಿದೆ. ಸುಶಿಕ್ಷಿತರೇ ಇರುವ ನಗರ ಪ್ರದೇಶವಾದ ರಾಜ್ಯ ರಾಜಧಾನಿಯೇ ಬಾಲ ಗರ್ಭಿಣಿ ಪ್ರಕರಣಗಳಲ್ಲಿ ಮುಂಚೂಣಿಯಲ್ಲಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಉಳಿದಂತೆ ಬೆಳಗಾವಿಯಲ್ಲಿ 986, ಮೈಸೂರಿನಲ್ಲಿ 943, ಚಿತ್ರದುರ್ಗ 806, ವಿಜಯಪುರ 769 ಬಾಲ ಗರ್ಭಿಣಿಯರ ಪ್ರಕರಣಗಳು ಪತ್ತೆಯಾಗಿವೆ.
ಕಲಬುರ್ಗಿ ಜಿಲ್ಲೆಯಲ್ಲಿ 764, ತುಮಕೂರಿನಲ್ಲಿ 689, ಮಂಡ್ಯದಲ್ಲಿ 647, ಬಾಗಲಕೋಟೆಯಲ್ಲಿ 567, ವಿಜಯನಗರ 507, ರಾಯಚೂರಲ್ಲಿ 493, ಯಾದಗಿರಿಯಲ್ಲಿ 481, ಬಳ್ಳಾರಿಯಲ್ಲಿ 459, ದಾವಣಗೆರೆಯಲ್ಲಿ 457, ಬೀದರ್ ನಲ್ಲಿ 412, ಕೋಲಾರದಲ್ಲಿ 396 ಮತ್ತು ಹಾಸನದಲ್ಲಿ 317 ಬಾಲ ಗರ್ಭಿಣಿ ಪ್ರಕರಣಗಳು ಪತ್ತೆಯಾಗಿವೆ ಎಂಬ ಅಂಕಿಅಂಶವನ್ನು ನೀಡಲಾಗಿದೆ.
ಇನ್ನು ರಾಮನಗರದಲ್ಲಿ 267, ಚಿಕ್ಕಬಳ್ಳಾಪುರದಲ್ಲಿ 263, ಶಿವಮೊಗ್ಗದಲ್ಲಿ 247, ಹಾವೇರಿಯಲ್ಲಿ 246, ಚಿಕ್ಕಮಗಳೂರಲ್ಲಿ 242, ಕೊಪ್ಪಳದಲ್ಲಿ 228, ಬೆಂಗಳೂರು ಗ್ರಾಮಾಂತರದಲ್ಲಿ 216, ಚಾಮರಾಜನಗರದಲ್ಲಿ 180, ಧಾರವಾಡದಲ್ಲಿ 178, ಕೊಡಗುನಲ್ಲಿ 127 ಮತ್ತು ಗದಗ ಜಿಲ್ಲೆಯಲ್ಲಿ 105 ಬಾಲ ಗರ್ಭಿಣಿ ಪ್ರಕರಣಗಳು ಪತ್ತೆಯಾಗಿವೆ.
ಇದನ್ನೂ ಓದಿ: ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ಮರುನಾಮಕರಣಕ್ಕೆ ಸಿಎಂಗೆ ಪ್ರಸ್ತಾವನೆ: ಡಿಸಿಎಂ ಡಿ.ಕೆ. ಶಿವಕುಮಾರ್
ಉತ್ತರ ಕನ್ನಡದಲ್ಲಿ 71, ದಕ್ಷಿಣ ಕನ್ನಡದಲ್ಲಿ 48 ಹಾಗೂ ಉಡುಪಿ ಜಿಲ್ಲೆಯಲ್ಲಿ 32 ಬಾಲ ಗರ್ಭಿಣಿ ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಬಾಲ ಗರ್ಭಿಣಿ ಪ್ರಕರಣ ಪತ್ತೆಯಾಗುತ್ತಿರುವುದು ಆತಂಕಕಾಕರಿ ವಿಚಾರವಾಗಿದೆ.
ಬಾಲ ಗರ್ಭಿಣಿಗೆ ಪ್ರಮುಖ ಕಾರಣಗಳೇನು?
ವರದಿಯಲ್ಲಿ ಬಾಲ ಗರ್ಭಿಣಿಗೆ ಕಾರಣವಾಗಿರುವ ಪ್ರಮುಖ ಕಾರಣಗಳನ್ನು ವಿಶ್ಲೇಷಿಸಲಾಗಿದೆ. ಅದರಂತೆ ಕುಟುಂಬದ ಸದಸ್ಯರ ಒತ್ತಡ/ ಏಕ ಪೋಷಕತ್ವ/ ಸಾಮಾಜಿಕ/ ಧಾರ್ಮಿಕ/ ಆರ್ಥಿಕ ಕಾರಣಗಳಿಂದ 2,920 ಬಾಲ ಗರ್ಭಿಣಿ ಪ್ರಕರಣಗಳು ಪತ್ತೆಯಾಗಿವೆ.
ಶಾಲೆಯಿಂದ ಹೊರಗುಳಿಯುವುದು/ ಶೈಕ್ಷಣಿಕ ಸೌಲಭ್ಯಗಳ ಕೊರತೆಯಿಂದ 716 ಬಾಲ ಗರ್ಭಿಣಿ ಪ್ರಕರಣಗಳು ಪತ್ತೆಯಾಗಿವೆ. ಇನ್ನು ಮಾನಸಿಕ ಹಾಗೂ ಭಾವನಾತ್ಮಕ ಬದಲಾವಣೆಗಳು (ಪ್ರೇಮ ಪ್ರಕರಣ)ಗಳಿಂದ 2033 ಬಾಲ ಗರ್ಭಿಣಿ ಪ್ರಕರಣಗಳು ಪತ್ತೆಯಾಗಿವೆ.
ತಂದೆ ಅಥವಾ ತಾಯಿ ಮಾನಸಿಕ ಅಸ್ವಸ್ಥತೆ/ ವಿಧವೆ ತಾಯಿ/ ಪೋಷಕರ ತೀವ್ರ ಅನಾರೋಗ್ಯ/ ಕೊರೊನಾ ಕಾರಣದಿಂದ 847 ಬಾಲ್ಯ ವಿವಾಹ/ಬಾಲ ಗರ್ಭಿಣಿ ಪ್ರಕರಣಗಳು ನಡೆದಿವೆ ಎಂದು ವರದಿಯಲ್ಲಿ ವಿಶ್ಲೇಷಿಸಲಾಗಿದೆ.
ನಿಯಂತ್ರಣಕ್ಕೆ ಕ್ರಮಗಳೇನು?
ಎಲ್ಲಾ ಸಂಬಂಧಿತ ಇಲಾಖೆಗಳು ಬಾಲ್ಯವಿವಾಹ ಮತ್ತು ಬಾಲ ಗರ್ಭಿಣಿಯರ ಪ್ರಕಣಗಳ ತಡೆಗಟ್ಟಲು ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸುವುದು ಮತ್ತು ಬಾಲ್ಯವಿವಾಹ ನಿಷೇಧ ಕಾಯ್ದೆಯ ಸಮರ್ಪಕ ಅನುಷ್ಠಾನಗೊಳಿಸುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಉಡುಪಿಯಲ್ಲಿ ರಣಭೀಕರ ಮಳೆ ಹಿನ್ನೆಲೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಬಾಲ್ಯವಿವಾಹ ಮೇಲ್ವಿಚಾರಣಾ ಸಮಿತಿಗಳನ್ನು ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾವಲು ಸಮಿತಿಗಳ ಬಲವರ್ಧನೆ ಗೊಳಿಸಿ, ಪ್ರತಿ ಮಾಹೆ RCH ದತ್ತಾಂಶದ/ ಬಾಲ್ಯವಿವಾಹ ಪ್ರಕರಣಗಳ ಪರಿಶೀಲಿಸಬೇಕು ಎಂದು ಸೂಚಿಸಿದ್ದಾರೆ. ಜಿಲ್ಲೆ, ತಾಲ್ಲೂಕು, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಬಾಲ್ಯವಿವಾಹ ಮತ್ತು ಬಾಲ ಗರ್ಭಿಣಿಯರ ಪ್ರಕರಣಗಳನ್ನು ತಡೆಗಟ್ಟಲು ಜಾಗೃತಿ ಕಾರ್ಯಕ್ರಮಗಳನ್ನು ವ್ಯಾಪಕವಾಗಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.