ಬೆಂಗಳೂರು: ಪ್ರಗತಿಪರ ಚಿಂತಕಿ, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಖಂಡಿಸಿ ಚಿಂತಕರು, ಸಾಹಿತಿಗಳು, ಪ್ರಗತಿಪರರು, ವಿದ್ಯಾರ್ಥಿಗಳು, ಕಲಾವಿದರು ಸೇರಿದಂತೆ ಸಾವಿರಾರು ಜನರು ನಡಿಸುತ್ತಿರುವ "ನಾನು ಗೌರಿ-ನಾವೆಲ್ಲಾ ಗೌರಿ" ಎಂಬ ವಿಭಿನ್ನ ಪ್ರತಿಭಟನಾ ರ್ಯಾಲಿಯು ಸಿಟಿ ರೈಲ್ವೆ ನಿಲ್ದಾಣದಿಂದ ಪ್ರಾರಂಭಗೊಳ್ಳಲಿದೆ.
ರ್ಯಾಲಿಯಲ್ಲಿ 1600 ಕ್ಕೂ ಹೆಚ್ಚು ಜನ ವಿದ್ಯಾರ್ಥಿಗಳು ಭಾಗಿಯಾಗುವ ಸಾಧ್ಯತೆಯಿದೆ ಎಂಬುದು ಮೂಲಗಳಿಂದ ತಿಳಿದುಬಂದಿದೆ. ರ್ಯಾಲಿಯು ಕಪ್ಪು ಛತ್ರಿ ಹಿಡಿದು ವಿಭಿನ್ನವಾಗಿ ನಡೆಯಲಿದೆ. ಛತ್ರಿಯಲ್ಲಿ 'ಅಭಿವ್ಯಕ್ತಿ ಸ್ವಾತಂತ್ರ್ಯದ ಕಗ್ಗೊಲೆ' ಎಂಬ ಹೆಸರಿನಲ್ಲಿ ಬರಹಗಳು ಮೂಡಿಬಂದಿವೆ.
ವಿಭಿನ್ನ ಬರಹಗಳ ಮೂಲಕ ಚಿತ್ರಕಲಾ ಪರಿಷತ್ ವಿಧ್ಯಾರ್ಥಿಗಳಿಂದ ಅಕ್ರೋಶ ವ್ಯಕ್ತವಾಗಿದೆ.
ಬೆಳಿಗ್ಗೆ 10 ರಿಂದ 11 ಗಂಟೆಯವರಗೆ ಸಿಟಿ ರೈಲ್ವೆ ಸ್ಟೇಶನ್ ನಿಂದ ಸೆಂಟ್ರಲ್ ಕಾಲೇಜು ಮೈದಾನದವರಗೆ ರ್ಯಾಲಿ ನಡೆಯಲಿದೆ. ನಂತರ 11 ರಿಂದ 12 ಗಂಟೆಯವರೆಗೆ ಸೆಂಟ್ರಲ್ ಕಾಲೇಜು ಮೈದಾನದಲ್ಲಿ ಖಂಡನಾ ಸಮಾವೇಶ ನೆರವೇರಲಿದೆ.
ಈಗಾಗಲೇ ಸಾಕಷ್ಟು ಸಂಖ್ಯೆಯಲ್ಲಿ ಹೋರಾಟಗಾರರು ಜಮಾಯಿಸಿರುವ ದೃಶ್ಯ ಸಿಟಿ ರೈಲ್ವೆ ನಿಲ್ದಾಣದ ಬಳಿ ಕಂಡುಬಂದಿದೆ. ಪ್ರತಿಭಟನೆಗೆ ಅಮ್ ಆದ್ಮಿ ಮತ್ತು ಎಸ್ಡಿಪಿಐ ಸಂಘಟನೆಗಳು ಸಾಥ್ ನೀಡಿವೆ.
ಪ್ರತಿಭಟನೆಗೆ ಕೆಲ ವಿಶೇಷ ಚೇತನರೂ ಭಾಗಿಯಾಗಿದ್ದು, ಪ್ರತಿಭಟನಾಕಾರರು ವ್ಹಿಲ್ ಚೇರ್ ನಲ್ಲಿ ಬಂದಿದ್ದಾರೆ.
ಮೆಜೆಸ್ಚಿಕ್ ನ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ರ್ಯಾಲಿ ಪ್ರಾರಂಭವಾಗಲಿದೆ. 1 ಗಂಟೆ ಅವಧಿಯಲ್ಲಿ ಸಮಾವೇಶ ಸ್ಥಳ ತಲುಪಲಿರುವ ಪ್ರಗತಿಪರರ ರ್ಯಾಲಿ, ಸೆಂಟ್ರಲ್ ಕಾಲೇಜು ಮೈದಾನದಲ್ಲಿ ಖಂಡನೆ, ಪ್ರತಿರೋಧ ಸಮಾವೇಶವನ್ನು ಆಯೋಜನೆ ಮಾಡಿದೆ.
ಗೌರಿ ಲಂಕೇಶ್ ಹತ್ಯೆ ವಿರೋಧಿ ಹೋರಾಟ ವೇದಿಕೆ ವತಿಯಿಂದ ಬೆಳಗ್ಗೆ 11 ಗಂಟೆಗೆ ಸಮಾವೇಶ ಆರಂಭವಾಗಲಿದೆ.
ರಾಜ್ಯದ ವಿವಿಧ ಜಿಲ್ಲೆಗಳಿಂದ ಹಾಗೂ ದೆಹಲಿ ಸೇರಿ ಬೇರೆ ಬೇರೆ ರಾಜ್ಯಗಳಿಂದಲೂ ಪ್ರಗತಿಪರರು, ಚಿಂತಕರು ಆಗಮಿಸಿದ್ದಾರೆ. ಪ್ರಗತಿಪರರು, ಚಿಂತಕರು - ಗೌರಿ ಲಂಕೇಶ್ ಹಂತಕರನ್ನು ಬೇಗನೇ ಬಂಧಿಸುವಂತೆಯೂ ಆಗ್ರಹ ಮಾಡಿದ್ದಾರೆ.