ಕೇರಳ, ತಮಿಳುನಾಡಿಗೆ ಕೃಷಿ ಉತ್ಪನ್ನಗಳನ್ನು ಸಾಗಿಸಲು ತೊಂದರೆಯಾದರೆ ತಕ್ಷಣವೇ ಗಮನಕ್ಕೆ ತನ್ನಿ: ಸಚಿವ ಸೋಮಶೇಖರ್

ಕೇರಳ ಹಾಗೂ ತಮಿಳುನಾಡಿಗೆ ಉತ್ಪನ್ನಗಳ ಸಾಗಾಟ ವೇಳೆ ತೊಂದರೆಯಾಗದಂತೆ ಈಗಾಗಲೇ ಸೂಚಿಸಲಾಗಿದೆ. ಒಂದು ವೇಳೆ ಸಮಸ್ಯೆಯಾದರೆ ತಕ್ಷಣವೇ ಗಮನಕ್ಕೆ ತನ್ನಿ ಎಂದು ಸಚಿವರು ರೈತರು ಹಾಗೂ ವರ್ತಕರಿಗೆ ಮನವಿ ಮಾಡಿದರು.

Written by - Yashaswini V | Last Updated : Apr 22, 2020, 10:43 AM IST
ಕೇರಳ, ತಮಿಳುನಾಡಿಗೆ ಕೃಷಿ ಉತ್ಪನ್ನಗಳನ್ನು ಸಾಗಿಸಲು ತೊಂದರೆಯಾದರೆ ತಕ್ಷಣವೇ ಗಮನಕ್ಕೆ ತನ್ನಿ: ಸಚಿವ ಸೋಮಶೇಖರ್ title=

ಬೆಂಗಳೂರು: ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯ ಕೃಷಿ ಉತ್ಪನ್ನ ಮಾರುಕಟ್ಟೆಗೆ ಮಾನ್ಯ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ (ST Somashekhar) ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶಾಸಕರಾದ ನಿರಂಜನ, ಹೆಚ್ಚುವರಿ ಜಿಲ್ಲಾಧಿಕಾರಿ ಆನಂದ, ಡಿವೈಎಸ್ಪಿ ಇತರರು ಇದ್ದರು. 

ಇದೇ ವೇಳೆ ರೈತರು (Farmers) ಹಾಗೂ ವರ್ತಕರ ಬಳಿ ತೆರಳಿದ ಸಚಿವರು, ವ್ಯಾಪಾರ-ವಹಿವಾಟು ಬಗ್ಗೆ ವಿಚಾರಿಸಿದರು. ಅಲ್ಲದೆ, ಮಾರುಕಟ್ಟೆಗೆ ಬೆಳೆಗಳನ್ನು ಸಾಗಿಸುವಾಗ ಚೆಕ್ ಪೋಸ್ಟ್ ಬಳಿ, ಇಲ್ಲವೇ ದಾರಿ ಮಧ್ಯೆ ಪೊಲೀಸರಿಂದ ಸಮಸ್ಯೆಯಾಗುತ್ತಿದೆಯೇ ಎಂದು ಪ್ರಶ್ನಿಸಿ ತಿಳಿದುಕೊಂಡರು.

ರೈತರಿಗೆ ಚೆಕ್‌ಫೋಸ್ಟ್ಗಳಲ್ಲಿ ಯಾವುದೇ ಅಡೆತಡೆ ಇರುವುದಿಲ್ಲ- ಸಚಿವ ಎಸ್.ಟಿ.ಸೋಮಶೇಖರ್

ಕೇರಳ ಹಾಗೂ ತಮಿಳುನಾಡಿಗೆ ಉತ್ಪನ್ನಗಳ ಸಾಗಾಟ ವೇಳೆ ತೊಂದರೆಯಾಗದಂತೆ ಈಗಾಗಲೇ ಸೂಚಿಸಲಾಗಿದೆ. ಒಂದು ವೇಳೆ ಸಮಸ್ಯೆಯಾದರೆ ತಕ್ಷಣವೇ ಗಮನಕ್ಕೆ ತನ್ನಿ ಎಂದು ಸಚಿವರು ರೈತರು ಹಾಗೂ ವರ್ತಕರಿಗೆ ಮನವಿ ಮಾಡಿದರು.

ಮಾರುಕಟ್ಟೆಯಲ್ಲಿ ತರಕಾರಿ ಉತ್ಪನ್ನಗಳ ಮಾರಾಟ ಸ್ಥಿತಿಗತಿಗಳ ಬಗ್ಗೆ ಪ್ರತಿ ಮಳಿಗೆಗೆ ಭೇಟಿ ಕೊಡುವುದರ ಮೂಲಕ ಕೊರೋನಾ ಬಾಧಿಸುವುದಕ್ಕೆ ಮುಂಚೆ ಹಾಗೂ ಹಾಲಿ ವಸ್ತುಸ್ಥಿತಿ ಹೇಗಿದೆ ಎಂದು ವಿಚಾರಿಸಿಕೊಂಡರು.‌ ಎಪಿಎಂಸಿ ಪರಿಶೀಲನೆ ಬಳಿಕ ಅಧಿಕಾರಿಗಳ ಜೊತೆ ಸಭೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವರಾದ ಸೋಮಶೇಖರ್, ರೈತರು-ವರ್ತಕರ ಸಮಸ್ಯೆಗಳ ಬಗ್ಗೆ ಆಲಿಸಿದರು.  

ಹೂವು, ಹಣ್ಣುಗಳು ಹಾಗೂ ತರಕಾರಿಗಳ ಬೆಳೆ ನಷ್ಟ ಪರಿಹಾರ ಅಂದಾಜಿಗೆ ಸಚಿವ ಸೋಮಶೇಖರ್ ಸೂಚನೆ

ರೈತರ ಬೆಳೆಗೆ ಉತ್ತಮ ದರ ಸಿಗುತ್ತಿಲ್ಲ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಬೇಕಾಬಿಟ್ಟಿ ದರಗಳ ಮಾರಾಟಕ್ಕೆ ಕಡಿವಾಣ ಬೀಳಬೇಕು. ರೈತರಿಗೆ ಒಳ್ಳೇ ದರ ಸಿಗಬೇಕು. ಆ ದರದ ಮೇಲೆ ಮಾರಾಟದ ದರದ ಮೇಲೂ ನಿಗಾ ವಹಿಸಬೇಕು. ರೈತರಿಗೆ ನಷ್ಟವಾಗಿ ದಲ್ಲಾಳಿಗಳಿಗೆ ಮಾತ್ರ ಲಾಭವಾಗುವಂತೆ ಮಾಡುವುದು ಸರಿಯಲ್ಲ. ಇಂಥದ್ದಕ್ಕೆ ಎಪಿಎಂಸಿಯಿಂದ ಕಡಿವಾಣ ಬೀಳಬೇಕು. ಈ ಬಗ್ಗೆ ಕೂಡಲೇ ಉಪ ವಿಭಾಗಾಧಿಕಾರಿಗಳು ಮತ್ತು ತಹಸೀಲ್ದಾರ್ ಮೂಲಕ ಆದೇಶ ಹೊರಡಿಸಲಾಗುವುದು. ಹಾಗೇ ಎಪಿಎಂಸಿಗೆ ಕೋಲ್ಡ್ ಸ್ಟೋರೇಜ್ ಅನ್ನು ಮಂಜೂರು ಮಾಡಲಾಗುವುದು ಎಂದು ಸಚಿವರು ತಿಳಿಸಿದರು.

Trending News