ಬಾಗಲಕೋಟೆ-ಕುಡಚಿ ರೈಲು ಮಾರ್ಗಕ್ಕೆ ಭೂಮಿ ಒದಗಿಸಿದರೆ ತಕ್ಷಣ ಕಾಮಗಾರಿ ಆರಂಭ- ಸುರೇಶ್ ಅಂಗಡಿ

ಕುಡಚಿ-ಬಾಗಲಕೋಟೆ ರೈಲು ಮಾರ್ಗ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅಗತ್ಯ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ ರೈಲ್ವೆ ಇಲಾಖೆಗೆ ಜಮೀನು ಹಸ್ತಾಂತರಿಸಿದರೆ ಶೀಘ್ರ ಕಾಮಗಾರಿಯನ್ನು ಪೂರ್ಣಗೊಳಿಸುವುದು ರೈಲ್ವೆ ಇಲಾಖೆಯ ಪ್ರಥಮ ಆದ್ಯತೆಯಾಗಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಹೇಳಿದರು.

Last Updated : Jul 11, 2020, 04:15 PM IST
ಬಾಗಲಕೋಟೆ-ಕುಡಚಿ ರೈಲು ಮಾರ್ಗಕ್ಕೆ ಭೂಮಿ ಒದಗಿಸಿದರೆ ತಕ್ಷಣ ಕಾಮಗಾರಿ ಆರಂಭ- ಸುರೇಶ್ ಅಂಗಡಿ  title=
Photo Courtsey : facebook

ಬೆಳಗಾವಿ: ಕುಡಚಿ-ಬಾಗಲಕೋಟೆ ರೈಲು ಮಾರ್ಗ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅಗತ್ಯ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ ರೈಲ್ವೆ ಇಲಾಖೆಗೆ ಜಮೀನು ಹಸ್ತಾಂತರಿಸಿದರೆ ಶೀಘ್ರ ಕಾಮಗಾರಿಯನ್ನು ಪೂರ್ಣಗೊಳಿಸುವುದು ರೈಲ್ವೆ ಇಲಾಖೆಯ ಪ್ರಥಮ ಆದ್ಯತೆಯಾಗಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಹೇಳಿದರು.

ಜಿಲ್ಲಾ ಕಚೇರಿಯ ಸಭಾಂಗಣದಲ್ಲಿ ಶನಿವಾರ (ಜು.11) ನಡೆದ ಬೆಳಗಾವಿ-ಬಾಗಲಕೋಟೆ ಜಿಲ್ಲೆಯ ಜಿಲ್ಲಾಧಿಕಾರಿಗಳು ಮತ್ತು ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಒಮ್ಮೆ ಭೂಸ್ವಾಧೀನ ಪ್ರಕ್ರಿಯೆ ಆರಂಭಗೊಂಡರೆ ಡಿಪಿಆರ್ ಮತ್ತು ಹಣ ಬಿಡುಗಡೆ ಪ್ರಕ್ರಿಯೆ ಸುಗಮವಾಗಲಿದೆ. ಆದ್ದರಿಂದ ಬಾಕಿ ಉಳಿದಿರುವ ಭೂಸ್ವಾಧೀನ ಪ್ರಕ್ರಿಯೆ ತಕ್ಷಣ ಆರಂಭಿಸುವಂತೆ ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದರು.ಸಂಪೂರ್ಣ ಜಮೀನು ಒದಗಿಸುವುದು ಹಾಗೂ ಯೋಜನೆ ಕಾಮಗಾರಿಯ ಶೇ.50 ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಬೇಕಿರುವುದರಿಂದ ಸ್ಥಳೀಯ ಶಾಸಕರು ಮತ್ತು ಜಿಲ್ಲಾಧಿಕಾರಿಗಳು ಆದಷ್ಟು ಬೇಗ ಈ ಕೆಲಸ ಪೂರ್ಣಗೊಳಿಸಿದರೆ ಯೋಜನೆ ಅನುಷ್ಠಾನ ಸುಲಭವಾಗಲಿದೆ ಎಂದು ಸುರೇಶ್ ಅಂಗಡಿ ಹೇಳಿದರು.

ಭೂಮಿ ಗುರುತಿಸಿಕೊಡುವ ಕೆಲಸ ರೈಲ್ವೆ ಇಲಾಖೆಯ ಅಧಿಕಾರಿಗಳು ಹದಿನೈದು ದಿನದೊಳಗೆ ಪೂರ್ಣಗೊಳಿಸಬೇಕು. ಅದಾದ ಬಳಿಕ ಸ್ವಾಧೀನ ಪ್ರಕ್ರಿಯೆಯನ್ನು ಉಭಯ ಜಿಲ್ಲಾಧಿಕಾರಿಗಳು ಆರಂಭಿಸಬೇಕು ಎಂದು ಸೂಚನೆ ನೀಡಿದರು.ಇನ್ನುಳಿದ 114 ಎಕರೆ ಭೂಸ್ವಾಧೀನ ಪ್ರಕ್ರಿಯೆ ತಕ್ಷಣ ಆರಂಭಿಸಬೇಕು ಎಂದು ಬಾಗಲಕೋಟೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.ಅರಣ್ಯ ಇಲಾಖೆಗೆ ಸಂಬಂಧಿಸಿದ 41 ಎಕರೆ ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸಿ ಹದಿನೈದು ದಿನಗಳಲ್ಲಿ ಪ್ರಕ್ರಿಯೆ ಪೂರ್ಣಗೊಳಿಸಲು ರೈಲ್ವೆ ಇಲಾಖೆಯ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.

ಸಂಸದ ಪಿ.ಸಿ.ಗದ್ದಿಗೌಡರ, ಲೋಕಾಪುರ ಮತ್ತು ಭಾಗದಲ್ಲಿ ಬೇರೆ ಬೇರೆ ಕಾರಣಕ್ಕೆ ಮಾರ್ಗದ ಅಲೈನ್ ಮೆಂಟ್ ಬದಲಾವಣೆ ಮಾಡುತ್ತಿರುವುದು ಕಾಮಗಾರಿ ವಿಳಂಬವಾಗುತ್ತಿದೆ. ಆದ್ದರಿಂದ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಲು ಆದ್ಯತೆ ನೀಡಬೇಕು ಎಂದು ಹೇಳಿದರು.

ಸಿಎಂ ನೇತೃತ್ವದಲ್ಲಿ ಸಭೆಗೆ ಸಲಹೆ:

ಶಾಸಕ ವೀರಣ್ಣ ಚರಂತಿಮಠ ಮಾತನಾಡಿ ಭೂಸ್ವಾಧೀನ ಮತ್ತು ಅನುದಾನ ಬಿಡುಗಡೆ ಕುರಿತು ಚರ್ಚಿಸಲು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ಕರೆಯಬೇಕು ಎಂದು ಸಲಹೆ ನೀಡಿದರು.ಯೋಜನೆಯ ಸಂಪೂರ್ಣ ವಿವರವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದರೆ ಕಾಮಗಾರಿ ಚುರುಕುಗೊಳಿಸಲು ಅನುಕೂಲವಾಗುತ್ತದೆ ಎಂದರು.ಅಗತ್ಯ ಭೂಮಿಯ ಕುರಿತು ರೈಲ್ವೆ ಇಲಾಖೆಯ ಅಧಿಕಾರಿಗಳು ಸಮರ್ಪಕ ಮಾಹಿತಿಯನ್ನು ಒದಗಿಸಿದರೆ ಭೂಸ್ವಾಧೀನ ಕಾರ್ಯ ಸುಗಮವಾಗಲಿದೆ ಎಂದರು.ಅದೇ ರೀತಿ ಬೆಳಗಾವಿ ಜಿಲ್ಲೆಯ ಕಡೆಯಿಂದಲೂ ಕಾಮಗಾರಿ ಆರಂಭಿಸಬೇಕು ಎಂದು ತಿಳಿಸಿದರು.

ನೈರುತ್ಯ ರೈಲ್ವೆ ವಲಯದ ಜನರಲ್ ಮ್ಯಾನೇಜರ್ ಎ.ಕೆ.ಸಿಂಗ್ ಮಾತನಾಡಿ 'ಯೋಜನೆ ಈಗಾಗಲೇ ಬಹಳ ವಿಳಂಬ ಆಗಿರುವುದರಿಂದ ಲಭ್ಯವಿರುವ ಅನುದಾನ ಮತ್ತು ಭೂಮಿ ಬಳಸಿಕೊಂಡು ಭೂಸ್ವಾಧೀನ ಪ್ರಕ್ರಿಯೆ ಆರಂಭಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.ರೈಲ್ವೆ ಇಲಾಖೆಯ ವತಿಯಿಂದ ಭೂಸ್ವಾಧೀನ ಸೇರಿದಂತೆ ಯಾವುದಾದರೂ ಹಣ ಬಿಡುಗಡೆ ಬಾಕಿ ಇದ್ದರೆ ತಕ್ಷಣ ಬಿಡುಗಡೆಗೊಳಿಸುವಂತೆ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಾಗಲಕೋಟೆ ನವನಗರಕ್ಕೆ ಗೂಡ್ಸ ಶೆಡ್ ಸ್ಥಳಾಂತರ:

ನವನಗರಕ್ಕೆ ಗೂಡ್ಸ್ ಶೆಡ್ ಸ್ಥಳಾಂತರ ಹಾಗೂ ಬಾಗಲಕೋಟೆ ನೂತನ ನಿಲ್ದಾಣ ನಿರ್ಮಾಣ ಕುರಿತು ಹುಬ್ಬಳ್ಳಿ ಸಭೆಯಲ್ಲಿ ಒತ್ತಾಯಿಸಲಾಗಿತ್ತು. ಇದುವರೆಗೆ ಯಾವುದೇ ಪ್ರಗತಿಯಾಗಿಲ್ಲ ಎಂದು ಶಾಸಕ ವೀರಣ್ಣ ಚರಂತಿಮಠ ಬೇಸರ ವ್ಯಕ್ತಪಡಿಸಿದರು.

ಗೂಡ್ಸ್ ಶೆಡ್ ಸ್ಥಳಾಂತರಕ್ಕೆ ಜಾಗೆ ಗುರುತಿಸಲಾಗಿದ್ದು, ಆದಷ್ಟು ಬೇಗನೆ ಸ್ಥಳಾಂತರ ಮಾಡಲಾಗುವುದು ಎಂದು ಮುಖ್ಯ ಎಂಜಿನಿಯರ್ ಪ್ರೇಮನಾರಾಯಣ್ ತಿಳಿಸಿದರು.

ಬಾಗಲಕೋಟೆ-ಖಜ್ಜಿಡೋಣಿವರೆಗೆ 32 ಕಿ.ಮೀ. ಮಾರ್ಗ ಪೂರ್ಣಗೊಂಡಿದೆ. 16 ಎಕರೆ ಮಾತ್ರ ಭೂಸ್ವಾಧೀನ ಅಗತ್ಯವಿದೆ ಎಂದು ಬಾಗಲಕೋಟೆ ಜಿಲ್ಲಾಧಿಕಾರಿ ಕ್ಯಾಪ್ಟನ್ ರಾಜೇಂದ್ರ ವಿವರಿಸಿದರು.ಖಜ್ಜಿಡೋಣಿ-ತೇರದಾಳ ನಡುವಿನ ಮಾರ್ಗ ನಿರ್ಮಾಣ ಆಗಬೇಕಿದೆ.
ಒಟ್ಟು 454 ಎಕರೆ ಈಗಾಗಲೇ ಭೂಸ್ವಾಧೀನ ಆಗಿದೆ. ಅದೇ ರೀತಿ 894 ಭೂಸ್ವಾಧೀನ ಆಗಬೇಕಿದೆ. ಈ ಭೂಸ್ವಾಧೀನ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ತಿಳಿಸಿದರು.ಇದರಲ್ಲಿ 40 ಎಕರೆ ಅರಣ್ಯ ಇಲಾಖೆಗೆ ಸಂಬಂಧಿಸಿದ ಭೂಮಿ ಸ್ವಾಧೀನಪಡಿಸಿಕೊಳ್ಳಬೇಕಿದ್ದು, ಇದನ್ನು ರೈಲ್ವೆ ಇಲಾಖೆಯ ಅಧಿಕಾರಿಗಳು ಪ್ರಕ್ರಿಯೆ ಆರಂಭಿಸಿದ್ದಾರೆ.

114 ಎಕರೆ ಭೂಸ್ವಾಧೀನ ಪ್ರಕ್ರಿಯೆ ಇದೀಗ ಹೊಸದಾಗಿ ಆರಂಭಿಸಲಾಗಿದ್ದು, 770 ಎಕರೆ 19(1) ಅಧಿಸೂಚನೆ ಆಗಿದ್ದು, 200 ಕೋಟಿ ಒದಗಿಸಿದರೆ ತಕ್ಷಣವೇ ಭೂಸ್ವಾಧೀನ ಸಾಧ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ರಾಜೇಂದ್ರ ತಿಳಿಸಿದರು.

ರೈಲ್ವೆ ಯೋಜನೆಗಳ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಮುಖ್ಯ ಕಾರ್ಯದರ್ಶಿಗಳು ಸದ್ಯದಲ್ಲಿಯೇ ವಿಡಿಯೋ ಸಂವಾದ ಏರ್ಪಡಿಸಿದ್ದು, ಭೂಸ್ವಾಧೀನ ಸೇರಿದಂತೆ ಬಾಕಿ ಉಳಿದಿರುವ ಕಾಮಗಾರಿಗಳ ಕುರಿತು ಅವರ ಗಮನಸೆಳೆದು ಆದಷ್ಟು ಬೇಗನೆ ಕಾಮಗಾರಿ ಚುರುಕುಗೊಳಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಸಭೆಯಲ್ಲಿ ತಿಳಿಸಿದರು.

213 ಎಕರೆ ಈಗಾಗಲೇ ಸ್ವಾಧೀನಪಡಿಸಿಕೊಂಡು ರೈಲ್ವೆ ಇಲಾಖೆಗೆ ನೀಡಲಾಗಿದೆ. ಉಳಿದ 236 ಎಕರೆ ಪೈಕಿ 28 ಎಕರೆಗೆ ಸಂಬಂಧಿಸಿದಂತೆ ಮಾತ್ರ ತಡೆಯಾಜ್ಞೆ ಇದೆ ಎಂದು ಸಚಿವರಿಗೆ ವಿವರಿಸಿದರು.

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಉಪ ವಿಭಾಗದಲ್ಲಿ 66 ಎಕರೆ ಹಾಗೂ 169 ಎಕರೆ ಚಿಕ್ಕೋಡಿ ಜಮೀನಿನ ಅಗತ್ಯವಿದೆ.
19(1) ಅಧಿಸೂಚನೆ ಅಗತ್ಯವಿದೆ ಎಂದು ರೈಲ್ವೆ ಇಲಾಖೆಯ ಮುಖ್ಯ ಎಂಜಿನಿಯರ್ ಪ್ರೇಮ ನಾರಾಯಣ್ ಹೇಳಿದರು.

ಬೈಲಹೊಂಗಲ ಉಪ ವಿಭಾಗ ವ್ಯಾಪ್ತಿಯಲ್ಲಿ ಯಾದವಾಡ ಬಳಿ 28 ಎಕರೆ ಭೂಸ್ವಾಧೀನ ಪ್ರಕ್ರಿಯೆಗೆ ನ್ಯಾಯಾಲಯದಿಂದ ತಡೆಯಾಜ್ಞೆ ಇದ್ದು, ಉಳಿದಂತೆ ಭೂಸ್ವಾಧೀನ ಬಹುತೇಕ ಪೂರ್ಣಗೊಂಡಿದೆ ಎಂದು ಬೈಲಹೊಂಗಲ ಉಪ ವಿಭಾಗಾಧಿಕಾರಿಗಳಾದ ಶಿವಾನಂದ ಭಜಂತ್ರಿ ಸಭೆಗೆ ತಿಳಿಸಿದರು.ಅಗತ್ಯ ಜಮೀನು ಸಮೀಕ್ಷೆ ಮಾಡಿ ಗುರುತಿಸಲು ಎಂಜಿನಿಯರ್ ಗಳನ್ನು ಒದಗಿಸಿದರೆ ಕೆಲಸ ಚುರುಕುಗೊಳ್ಳಲಿದೆ ಎಂದರು.

ದುರ್ಯೋಧನ ಐಹೊಳೆ, ರಾಯಬಾಗ ರೈಲು ನಿಲ್ದಾಣಕ್ಕೆ ಮೇಲ್ಛಾವಣಿ ಹಾಕಿಸಬೇಕು, ನಿರೀಕ್ಷಣಾ ಗೃಹ ನಿರ್ಮಿಸಬೇಕು ಹಾಗೂ ಸ್ಥಗಿತಗೊಂಡಿರುವ ರೈಲು ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.

ಶಾಸಕ ಸಿದ್ದು ಸವದಿ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಸೇರಿದಂತೆ ಕಂದಾಯ, ಅರಣ್ಯ ಹಾಗೂ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Trending News