ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳಾ ಮೀಸಲಾತಿ ಜಾರಿ: ಹಾವೇರಿಯಲ್ಲಿ ರಾಹುಲ್ ಗಾಂಧಿ

ನರೇಂದ್ರ ಮೋದಿ ತಾನು ದೇಶದ ಚೌಕಿದಾರ್ ಎನ್ನುತ್ತಾರೆ. ಆದರೆ ಮೋದಿ ಅನಿಲ್ ಅಂಬಾನಿಯ ಚೌಕಿದಾರ್. ಮೋದಿ ಎಲ್ಲಿಗೆ ಹೋದರೂ ಅಂಬಾನಿ, ಅದಾನಿ ಜೊತೆಗಿರುತ್ತಾರೆ ಎಂದು ರಾಹುಲ್ ಗಾಂಧಿ ಲೇವಡಿ ಮಾಡಿದರು.

Last Updated : Mar 9, 2019, 03:58 PM IST
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳಾ ಮೀಸಲಾತಿ ಜಾರಿ: ಹಾವೇರಿಯಲ್ಲಿ ರಾಹುಲ್ ಗಾಂಧಿ title=

ಹಾವೇರಿ: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳಾ  ಮೀಸಲು ವಿಧೇಯಕ ಜಾರಿಗೊಳಿಸಲಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭರವಸೆ ನೀಡಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಜನ ಪರಿವರ್ತನಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ರಾಹುಲ್ ಗಾಂಧಿ, ಕಳೆದ 9 ವರ್ಷಗಳಿಂದ ಸಂಸತ್ತಿನಲ್ಲಿ ಮಹಿಳಾ ಮೀಸಲು ವಿಧೇಯಕ ಅನುಮೊದನೆಯಾಗಿಲ್ಲ. ಒಂದು ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಾಡುವ ಮೊದಲು ಕೆಲಸವೇ ಮಹಿಳಾ ಮೀಸಲು ವಿಧೇಯಕಕ್ಕೆ ಅನುಮೋದನೆ ದೊರೆಯುವನತೆ ನೋಡಿಕೊಳ್ಳುವುದು. ಆ ಮೂಲಕ ವಿಧಾನಸಭೆ ಮತ್ತು ಸಂಸತ್ತಿನಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲು ಕಲ್ಪಿಸಲಾಗುವುದು ಎಂದು ಆಶ್ವಾಸನೆ ನೀಡಿದರು.

ಮೋದಿ ಸರ್ಕಾರದಿಂದ ಉದ್ಯಮಿಗಳ 3.5 ಲಕ್ಷ ಕೋಟಿ ರೂ. ಸಾಲ ಮನ್ನಾ
ರೈತರಿಗೆ ದಿನಕ್ಕೆ 3.50ರೂ. ನೀಡುತ್ತಿರುವ ಮೋದಿ ಸರ್ಕಾರ 15-20 ಉದ್ಯಮಿಗಳ 3.50 ಕೋಟಿ ರೂ. ಸಾಲ ಮನ್ನಾ ಮಾಡಿದೆ. ಹೀಗಿರುವಾಗ ರೈತರಿಗೆ ವಾರ್ಷಿಕವಾಗಿ 6 ಸಾವಿರ ರೂ. ನೀಡುತ್ತಿರುವುದು ಬಡ ಕೃಷಿಕರ ಬಗ್ಗೆ ಅಪಹಾಸ್ಯ ಮಾಡಿದಂತಿದೆ ಎಂದು ಮೋದಿ ವಿರುದ್ಧ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದರು.

ಮೋದಿಯವರು ರಾಜ್ಯಕ್ಕೆ ಬಂದಾಗ ರಾಜ್ಯ ಸರ್ಕಾರ ರೈತರಿಗೆ ಲಾಲಿಪಾಪ್ ಕೊಡುತ್ತದೆ ಎಂದು ವ್ಯಂಗ್ಯವಾಡಿದ್ದರು. ಆದರೆ ಕರ್ನಾಟಕ ರಾಜ್ಯ ಸಮ್ಮಿಶ್ರ ಸರ್ಕಾರ ರೈತರ ಸಾಲ ಮನ್ನಾ ಮಾಡಿದೆ. ಕಾಂಗ್ರೆಸ್ ಕೊಟ್ಟ ಭರವಸೆಯಂತೆ ನಡೆದುಕೊಂಡಿದೆ ಎಂದು ತಿರುಗೇಟು ನೀಡಿದರು.

ನೋಟ್​ ಬ್ಯಾನ್​ ಮೋದಿ ಕೈಗೊಂಡ ಮೂರ್ಖ ತೀರ್ಮಾನ
ಕಪ್ಪು ಹಣ ನಿಯಂತ್ರಣಕ್ಕಾಗಿ ನೋಟು ರದ್ಧತಿ ಮಾಡಲಾಯಿತು. ಈ ವೇಳೆ ಸಾಲಿನಲ್ಲಿ ಯಾರು ನಿಂತಿದ್ದರು? ಅನಿಲ್ ಅಂಬಾನಿ ಇದ್ದರಾ? ನೀರವ್ ಮೋದಿ ಇದ್ದರಾ? ವಿಜಯ ಮಲ್ಯ ಇದ್ದರಾ? ಯಾರು ಇದ್ದವರು, ಇದ್ದಿದ್ದು ದೇಶದ ಬಡ ಜನರು. ಐದು ವರ್ಷ ದೇಶದಲ್ಲಿ ಆಡಳಿತ ನಡೆಸುತ್ತಾ ಮೋದಿ ನಿಮ್ಮನ್ನು ಮೂರ್ಖರನ್ನಾಗಿ ಮಾಡಿದ್ದಾರೆ. ಮೋದಿ ಅನಿಲ್ ಅಂಬಾನಿ , ಲಲಿತ್ ಮೋದಿ, ನೀರವ್ ಮೋದಿ ಜೇಬಿಗೆ ಮೋದಿ 60-70 ಸಾವಿರ ಕೋಟಿ ಹಾಕಿದರೆ ನಾವು ಬಡವರಿಗೆ ಜೇಬಿಗೆ ಹಣ ಹಾಕುತ್ತೇವೆ. ನೀವು ನಮ್ಮ ಮೇಲೆ ನಂಬಿಕೆ ಇಡಿ, ನಿಮ್ಮ ಪರವಾಗಿ ಕೆಲಸ ಮಾಡುತ್ತೇವೆ ಎಂದು ರಾಹುಲ್ ಗಾಂಧಿ ಭರವಸೆ ನೀಡಿದರು.

ಮೋದಿ ಅನಿಲ್ ಅಂಬಾನಿಯ ಚೌಕಿದಾರ್
ಮೋದಿ ಅಧಿಕಾರದಲ್ಲಿ ಇಂದು ದೇಶ ಎರಡಾಗಿದೆ. ಒಂದು ಅಂಬಾನಿ, ಅದಾನಿ, ಚೋಕ್ಸಿಯವರಂತಹ ಭಾರತ. ಬ್ಯಾಂಕ್ ನ ಹಣ ಕೇವಲ 15-20 ಜನರ ಕೈಯಲ್ಲಿದೆ. ಮತ್ತೊಂದು ನಿರುದ್ಯೋಗದ ಭಾರತ ಎಂದು ಕೇಂದ್ರ ಸರಕಾರದ ವಿರುದ್ಧ ಕಿಡಿಕಾರಿದರು. ನರೇಂದ್ರ ಮೋದಿ ತಾನು ದೇಶದ ಚೌಕಿದಾರ್ ಎನ್ನುತ್ತಾರೆ. ಆದರೆ ಮೋದಿ ಅನಿಲ್ ಅಂಬಾನಿಯ ಚೌಕಿದಾರ್. ಮೋದಿ ಎಲ್ಲಿಗೆ ಹೋದರೂ ಅಂಬಾನಿ, ಅದಾನಿ ಜೊತೆಗಿರ್ತಾರೆ ಎಂದು ಲೇವಡಿ ಮಾಡಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜಿಎಸ್ಟಿಯಲ್ಲಿ ಬದಲಾವಣೆ
ಮೋದಿ ಸರ್ಕಾರ ಜಾರಿಗೆ ತಂದಿರುವ ಎಸ್ ಟಿಯನ್ನು ಗಬ್ಬರ್ ಸಿಂಗ್ ಟ್ಯಾಕ್ಸ್ ಎಂದು ಕರೆದ ರಾಹುಲ್, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಈಗಿರುವ ಜಿಎಸ್ ಟಿಯನ್ನು ತೆಗೆದು, ಬೇರೆ ಒಂದೇ ಜಿಎಸ್ ಟಿ, ಸುಲಭ ಜಿಎಸ್ ಟಿಯನ್ನು ಜಾರಿಗೆ ತರುವುದಾಗಿ ಘೋಷಿಸಿದರು.

ಇದಕ್ಕೂ ಮುನ್ನ, ಗೋವಾ ಮಾರ್ಗವಾಗಿ ದೆಹಲಿಯಿಂದ ವಿಶೇಷ ವಿಮಾನದ ಮೂಲಕ‌ ಹುಬ್ಬಳ್ಳಿಗೆ ಆಗಮಿಸಿದ ರಾಹುಲ್ ಗಾಂಧಿ ಅವರನ್ನು ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವ ಆರ್.ವಿ. ದೇಶಪಾಂಡೆ, ದಿನೇಶ್ ಗುಂಡೂರಾವ್, ಮಾಜಿ ಸಚಿವ ವಿನಯ ಕುಲಕರ್ಣಿ ಸ್ವಾಗತಿಸಿದರು. ಬಳಿಕ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಹಾವೇರಿಗೆ ತೆರಳಿ ಪರಿವರ್ತನಾ ಸಮಾವೇಶದಲ್ಲಿ ರಾಹುಲ್ ಗಾಂಧಿ ಭಾಗಿಯಾದರು.

Trending News