ಹುಬ್ಬಳ್ಳಿ: ಫೋನ್ ಕದ್ದಾಲಿಕೆ ಆರೋಪವನ್ನು ಸಿಬಿಐಗೆ ಒಪ್ಪಿಸಬೇಕೆಂದು ನಾನು ಹೇಳಿಯೇ ಇಲ್ಲ, ಸಿಎಂ ಯಡಿಯೂರಪ್ಪ ಅವರು ನಾನು ಸಿಬಿಐಗೆ ವಹಿಸಲು ಒತ್ತಾಯಿಸಿದ್ದೇನೆ ಎಂದು ಹೇಳಿರುವುದು ಅಪ್ಪಟ ಸುಳ್ಳು ಎಂದು ಮಾಜಿ ಸಿಎಂ ಹಾಗೂ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಬಾದಾಮಿಯಲ್ಲಿ ಪ್ರವಾಹ ಪರಿಸ್ಥಿತಿ ಅವಲೋಕಿಸಲು ಸೋಮವಾರ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಿದ್ದರಾಮಯ್ಯ ಅವರು ಮಾಧ್ಯಮ ಹೇಳಿಕೆ ನೀಡಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಫೋನ್ ಕದ್ದಾಲಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ನಾನು ಹೇಳಿದ್ದೇನೆ ಎಂದು ಹೇಳಿರುವುದು ಅಪ್ಪಟ ಸುಳ್ಳು, ನಾನು ಹಾಗೆ ಒತ್ತಾಯಿಸಿರುವುದನ್ನು ಅವರು ಸಾಬೀತು ಪಡಿಸಲಿ. ಒಬ್ಬ ಮುಖ್ಯಮಂತ್ರಿ ಈ ರೀತಿಯ ಬೇಜವಾಬ್ದಾರಿ ಹೇಳಿಕೆ ನೀಡಬಾರದು. ಪೋನ್ ಕದ್ದಾಲಿಕೆ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಯಲಿ ಎಂದಷ್ಟೇ ನಾನು ಹೇಳಿದ್ದೆ ಎಂದು ಸ್ಪಷ್ಟಪಡಿಸಿದ್ದಾರೆ.
ಅಮಿತ್ ಶಾ ಅವರ ಆದೇಶದ ಮೇರೆಗೆ ಸಿಬಿಐ ತನಿಖೆಗೆ ಆದೇಶ
ಬಿ.ಎಸ್.ಯಡಿಯೂರಪ್ಪನವರು ಫೋನ್ ಕದ್ದಾಲಿಕೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿದ್ದು ನನ್ನ ಕೋರಿಕೆ ಮೇಲೆ ಅಲ್ಲ. ನನಗಿರುವ ಮಾಹಿತಿ ಪ್ರಕಾರ ಗೃಹಸಚಿವ ಅಮಿತ್ ಶಾ ಅವರ ಆದೇಶದ ಮೇರೆಗೆ ಅವರು ಈ ನಿರ್ಧಾರವನ್ನು ಕೈಗೊಂಡಿದ್ದಾರೆ. ಮುಖ್ಯಮಂತ್ರಿಗಳು ಈ ಸತ್ಯವನ್ನು ಒಪ್ಪಿಕೊಳ್ಳುವ ಧೈರ್ಯ ತೋರಿಸಲಿ ಎಂದು ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.
'ಆಪರೇಶನ್ ಕಮಲ'ದ ಬಗ್ಗೆ ಸಿಬಿಐ ತನಿಖೆ ಆಗಲಿ
ಮುಖ್ಯಮಂತ್ರಿ ಯಡಿಯೂರಪ್ಪ ಅವರು ನನ್ನ ಸಲಹೆ ಕೇಳೋದಾದ್ರೆ, ಮೊದಲು 'ಆಪರೇಷನ್ ಕಮಲ'ವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು. ತಮ್ಮನ್ನು ಖರೀದಿಸಲು ದುಡ್ಡಿನ ಭರವಸೆ ನೀಡಿರುವುದನ್ನು ಕೆಲವು ಕಾಂಗ್ರೆಸ್ ಶಾಸಕರೇ ಒಪ್ಪಿಕೊಂಡಿದ್ದಾರೆ. ಜೆಡಿಎಸ್ ಶಾಸಕರ ಖರೀದಿ ವ್ಯವಹಾರದಲ್ಲಿ ಮುಖ್ಯಮಂತ್ರಿಗಳೇ ಭಾಗಿಯಾಗಿದ್ದ ಆಡಿಯೋ ಇದೆ. ಆ ಬಗ್ಗೆಯೂ ತನಿಖೆ ನಡೆಯಲಿ ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಸಿಬಿಐ ಬಗ್ಗೆ ಬಿಜೆಪಿಗೆ ಇದ್ದಕ್ಕಿದ್ದಂತೆ ಇಷ್ಟೊಂದು ವಿಶ್ವಾಸ-ಗೌರವ ಯಾಕೆ?
ಸಿಬಿಐ ಕೇಂದ್ರೀಯ ತನಿಖಾ ಸಂಸ್ಥೆ, ಅದರ ಮೂಲಕ ತನಿಖೆಗೆ ನನ್ನ ವಿರೋಧ ಇಲ್ಲ. ಆದರೆ ಅದು ನೇರವಾಗಿ ಗೃಹ ಸಚಿವರ ಅಡಿಯಲ್ಲಿ ಕೆಲಸ ಮಾಡುವ ಸಂಸ್ಥೆ. ಕಳೆದ 5 ವರ್ಷಗಳಲ್ಲಿ ಬಿಜೆಪಿ ತಮ್ಮ ರಾಜಕೀಯ ವಿರೋಧಿಗಳ ದಮನಕ್ಕೆ ಸ್ವಾಯತ್ತ ಸಂಸ್ಥೆಗಳನ್ನು ಹೇಗೆ ದುರ್ಬಳಕೆ ಮಾಡಿಕೊಂಡಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಇದಕ್ಕಾಗಿಯಷ್ಟೇ ನಮ್ಮ ಆಕ್ಷೇಪ. ಹಿಂದೆ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಸಿಬಿಐ ಅನ್ನು 'ಚೋರ್ ಬಚಾವೋ ಸಂಸ್ಥೆ' ಎಂದು ಗೇಲಿ ಮಾಡುತ್ತಿದ್ದ ಬಿಜೆಪಿ ನಾಯಕರಿಗೆ ಈಗ ಅದರ ಬಗ್ಗೆ ಇಷ್ಟೊಂದು ವಿಶ್ವಾಸ-ಗೌರವ ಯಾಕೆ ಹುಟ್ಟಿಕೊಂಡಿರುವುದೇಕೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಅಧಿಕಾದಲ್ಲಿದ್ದಾಗ ಗಣಿ ಹಗರಣವೂ ಸೇರಿದಂತೆ ಯಾವ ಹಗರಣಗಳನ್ನು ಸಿಬಿಐ ತನಿಖೆಗೆ ಒಪ್ಪಿಸಲಿಲ್ಲ. ಪೋನ್ ಕದ್ದಾಲಿಕೆ ಆರೋಪದ ತನಿಖೆಯನ್ನು ನಮ್ಮದೇ ಸಿಐಡಿಗೆ ಒಪ್ಪಿಸಬಹುದಿತ್ತಲ್ಲಾ? ಈಗ ಸಿಬಿಐ ಬಗ್ಗೆ ಎಲ್ಲಿಂದ ನಂಬಿಕೆ ಬಂತು? ಇದರ ಹಿಂದಿರುವ ರಹಸ್ಯವೇನು? ಈ ಎಲ್ಲದರ ಬಗ್ಗೆ ಸಿಎಂ ಉತ್ತರಿಸಲಿ ಎಂದು ಕಾಂಗ್ರೆಸ್ ನಾಯಕ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.