ಬೆಂಗಳೂರು: ಅತೃಪ್ತ ಶಾಸಕರ ರಾಜೀನಾಮೆ ವಿಚಾರ ಶೀಘ್ರ ಇತ್ಯರ್ಥಕ್ಕೆ ರಾಜ್ಯಪಾಲರು ಸ್ಪೀಕರ್ ರಮೇಶ್ ಕುಮಾರ್ ಮೇಲೆ ಒತ್ತಡ ಹೇರುತ್ತಿದ್ದಾರೆ. ಈ ಮೂಲಕ ಬಿಜೆಪಿ ಏಜೆಂಟ್ ರೀತಿಯಲ್ಲಿ ರಾಜ್ಯಪಾಲರು ವರ್ತಿಸುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಗಂಭೀರ ಆರೋಪ ಮಾಡಿದ್ದಾರೆ.
ಕೆ.ಕೆ. ಗೆಸ್ಟ್ ಹೌಸ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಸ್ಪೀಕರ್ ರಮೇಶ್ ಕುಮಾರ್ ಅವರು ಎಷ್ಟು ರಾಜೀನಾಮೆಗಳು ಕ್ರಮಬದ್ಧವಾಗಿವೆ ಎಂಬುದನ್ನು ಸ್ಪಷ್ಟಪಡಿಸಿ ಆ ಶಾಸಕರ ವಿಚಾರಣೆಗೆ ಸಮಯವನ್ನೂ ನೀಡಿದ್ದಾರೆ. ಆದಾಗ್ಯೂ, ರಾಜ್ಯಪಾಲರು ರಾಜೀನಾಮೆ ಸ್ವೀಕರಿಸುವಂತೆ ಒತ್ತಡ ಹೇರುತ್ತಿರುವುದು ಸರಿಯಲ್ಲಿ. ಈ ಮೂಲಕ ಬಿಜೆಪಿ ರಾಜಭವನವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಕಿಡಿ ಕಾರಿದರು.
ಶಾಸಕರು ಅನರ್ಹರಾದರೆ ಅಮಿತ್ ಷಾ ಸಹ ಮಾತಾಡಿಸಲ್ಲ
ಅತೃಪ್ತ ಶಾಸಕರು ರಾಜೀನಾಮೆಯನ್ನು ಹಿಂತೆಗೆದುಕೊಳ್ಳಿ. ಯಾವುದೇ ಆಮಿಷಗಳಿಗೆ ಬಲಿಯಾಗಬೇಡಿ. ಬಿಜೆಪಿ ಕುತಂತ್ರಕ್ಕೇನಾದರೂ ಬಲಿಯಾಗಿ ಅನರ್ಹಗೊಂಡರೆ ಮುಂದೆ ಅಮಿತ್ ಶಾ ಸಹ ನಿಮ್ಮನ್ನು ಮಾತನಾಡಿಸುವುದಿಲ್ಲ. ಈ ಬಗ್ಗೆ ಎಚ್ಚರದಿಂದಿರಿ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಬಿಜೆಪಿಯವರು ಸಾಚಾಗಳಾ?
ಅಷ್ಟಕ್ಕೂ ಆಪರೇಶನ್ ಕಮಲಕ್ಕೆ ಕೋಟಿ ಕೋಟಿ ಹಣ ಬಿಜೆಪಿಗೆ ಎಲ್ಲಿಂದ ಬರುತ್ತೆ? ಬಿಜೆಪಿ ಅವರ ಜೊತೆ ಇರೋರೆಲ್ಲ ಸಾಚಾಗಳಾ? ಹಾಗಾದ್ರೆ ನಾವೆಲ್ಲಾ ಏನ್ ಕೆಟ್ಟವರಾ ಎಂದು ದಿನೇಶ್ ಗುಂಡೂರಾವ್ ಕಿಡಿ ಕಾರಿದರು.