ಸೈಬರ್ ಲ್ಯಾಬ್ ತೆರೆಯಲು ಇನ್‌ಫೋಸಿಸ್‌ನೊಂದಿಗೆ ಸರ್ಕಾರದ ಒಪ್ಪಂದ

ಇನ್‌ಫೋಸಿಸ್‌ ಹಿಂದಿನಿಂದಲೂ ಪೊಲೀಸ್ ಇಲಾಖೆಗೆ ಕಟ್ಟಡ ನಿರ್ಮಿಸಿಕೊಡುವ ಮೂಲಕ ಬೆಂಬಲ ನೀಡುತ್ತಾ ಬಂದಿದೆ. ಈಗ ಸೈಬರ್ ಲ್ಯಾಬ್, ತರಬೇತಿ ಕೇಂದ್ರ ನಿರ್ಮಿಸಲು ಮುಂದೆ ಬಂದಿರುವುದು ಇತರೆ ಕಾರ್ಪೋರೇಟ್ ಕಂಪನಿಗಳಿಗೆ ಮಾದರಿಯಾಗಿದೆ- ಡಾ.ಜಿ. ಪರಮೇಶ್ವರ್ 

Last Updated : Oct 3, 2018, 04:20 PM IST
ಸೈಬರ್ ಲ್ಯಾಬ್ ತೆರೆಯಲು ಇನ್‌ಫೋಸಿಸ್‌ನೊಂದಿಗೆ ಸರ್ಕಾರದ ಒಪ್ಪಂದ title=

ಬೆಂಗಳೂರು: ಸೈಬರ್ ಲ್ಯಾಬ್, ತರಬೇತಿ ಸಂಸ್ಥೆ ನಿರ್ಮಾಣ ಸಂಬಂಧ ಇನ್‌ಫೋಸಿಸ್‌ ಮುಖ್ಯಸ್ಥೆ ಸುಧಾಮೂರ್ತಿ ಹಾಗೂ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ಒಪ್ಪಂದಕ್ಕೆ ಸಹಿ ಹಾಕಿದರು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಒಪ್ಪಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಪರಮೇಶ್ವರ್, ಇನ್‌ಫೋಸಿಸ್‌ ಹಿಂದಿನಿಂದಲೂ ಪೊಲೀಸ್ ಇಲಾಖೆಗೆ ಕಟ್ಟಡ ನಿರ್ಮಿಸಿಕೊಡುವ ಮೂಲಕ ಬೆಂಬಲ ನೀಡುತ್ತಾ ಬಂದಿದೆ. ಈಗ ಸೈಬರ್ ಲ್ಯಾಬ್, ತರಬೇತಿ ಕೇಂದ್ರ ನಿರ್ಮಿಸಲು ಮುಂದೆ ಬಂದಿರುವುದು ಇತರೆ ಕಾರ್ಪೋರೇಟ್ ಕಂಪನಿಗಳಿಗೆ ಮಾದರಿಯಾಗಿದೆ ಎಂದರು. 

ಸರಕಾರ ಎಲ್ಲವನ್ನೂ ಮಾಡಲು ಸಾಧ್ಯವಾಗುವುದಿಲ್ಲ.‌ ಅನೇಕ ಕಡೆಯಿಂದ ಸಹಾಯ ಹಸ್ತ ಬೇಕಿದೆ. ಪೊಲೀಸ್ ಇಲಾಖೆಗೆ ಹೆಚ್ಚು ಸಹಾಯ ಸಿಗುತ್ತಿಲ್ಲ.‌ ಆಯವ್ಯಯದಲ್ಲೂ‌ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದೆ. ರಾಜ್ಯದಲ್ಲಿ ಕಾನೂನು‌ ಸುವ್ಯವಸ್ಥೆ ಕಾಪಾಡಲು ಪೊಲೀಸರಿಗೆ ಇನ್ನೂ ಪ್ರೋತ್ಸಾಹ ಸಿಗಬೇಕು. ಹೀಗಾಗಿ ಪೊಲೀಸ್ ಗೃಹ ಯೋಜನೆಯಡಿ ಮನೆ ಕಟ್ಟುವ ಕೆಲಸ ಶುರು ಮಾಡಿ ಮೂರನೇ ಹಂತಕ್ಕೆ ತಲುಪಿದ್ದೇವೆ. ಎಫ್ಐಆರ್ ದಾಖಲಾತಿ ಸೇರಿದಂತೆ ಪೊಲೀಸ್ ಇಲಾಖೆ ಸಂಪೂರ್ಣ ಆನ್‌ಲೈನ್ ತರುವ ಕೆಲಸ ಮಾಡಲಾಗುತ್ತಿದೆ. ಕರ್ನಾಟಕ ಪೊಲೀಸ್ ಇಡೀ‌ದೇಶಕ್ಕೆ ಮಾದರಿಯಾಗುವ ನಿಟ್ಟಿನಲ್ಲಿ ಮುಂದೆ ನುಗ್ಗುತ್ತಿದೆ ಎಂದರು. 

ಇನ್‌ಫೋಸಿಸ್‌ನಿಂದ ತರಬೇತಿ ಕೇಂದ್ರ ನಿರ್ಮಿಸಿ ಕೊಡಲಾಗುತ್ತಿದೆ.‌ ಇದಕ್ಕೆ ತಾಂತ್ರಿಕ ಪರಿಣಿತರ ಅಗತ್ಯವಿದ್ದು, ಪರಿಣಿತರು ಮುಂದೆ ಬರಬೇಕು. ಸೈಬರ್ ಸಂಬಂಧ ಹೆಚ್ಚುವ ಕ್ರೈ ತಡೆಯಲು ತಾಂತ್ರಿಕ ತರಬೇತಿ ಅತಿ ಅವಶ್ಯಕ. ಹೀಗಾಗಿ ಬೇರೆ ದೇಶದಿಂದಲೂ ಪರಿಣಿತರನ್ನು ಕರೆಸಿ ತರಬೇತಿ ಕೊಡಿಸಲಾಗುವುದು ಎಂದರು. 

ಇನ್‌ಫೋಸಿಸ್ ನಿರ್ಮಿಸುವ ತರಬೇತಿ ಕೇಂದ್ರಕ್ಕೆ 22 ಕೋಟಿ ರೂ.‌ವೆಚ್ಚ ತಗುಲಲಿದ್ದು, ಕೆಲವೇ ತಿಂಗಳಲ್ಲಿ ಪೂರ್ಣಗೊಳಿಸಲಾಗುತ್ತದೆ ಎಂದರು.

Trending News