ಬೆಂಗಳೂರು: ಕಳೆದ ಮಂಗಳವಾರ ರಾತ್ರಿ ಹತ್ಯೆಯಾದ ಪತ್ರಕರ್ತೆ, ವಿಚಾರವಾದಿ ಗೌರಿ ಲಂಕೇಶ್ ಅವರ ಹತ್ಯೆಯಲ್ಲಿ ಚುರುಕು ತನಿಖೆ ಕೈಗೊಂಡಿರುವ ಎಸ್ಐಟಿ ತಂಡ ಈಗ 3 ತಿಂಗಳ ಹಿಂದಿನ ದೃಶ್ಯಾವಳಿಗಳನ್ನು ಕಲೆಹಾಕಿ ಅನುಮಾನಾಸ್ಪದ ವ್ಯಕ್ತಿಯೋರ್ವನನ್ನು ವಶಕ್ಕೆ ಪಡೆದು ಅಜ್ಞಾತ ಸ್ಥಳದಲ್ಲಿ ಆಂಧ್ರಪ್ರದೇಶ ಮೂಲದ ವ್ಯಕ್ತಿಯ ವಿಚಾರಣೆ ನಡೆಸುತ್ತಿದೆ.
ಗೌರಿ ಲಂಕೇಶ್ ಅವರ ಕಚೇರಿ ಗಾಂಧಿ ಬಜಾರ್ ನಿಂದ ರಾಜರಾಜೇಶ್ವರಿನಗರದ ವರೆಗಿನ ಮೂರು ತಿಂಗಳ ಹಿಂದಿನ 1800 ದೃಶ್ಯಾವಳಿಗಳನ್ನು ಕಲೆಹಾಕಿ ಪರಿಶೀಲಿಸಿದ ಎಸ್ಐಟಿ ತಂಡಕ್ಕೆ ಅನುಮಾನಾಸ್ಪದ ವ್ಯಕ್ತಿಯ ಓಡಾಟದ ದೃಶ್ಯಗಳು ಪತ್ತೆಯಾಗಿದೆ. ಅಲ್ಲದೆ ಆತನ ಮೊಬೈಲ್ ಗೌರಿ ಲಂಕೇಶ್ ಕಚೇರಿ ಮತ್ತು ಮನೆಯ ಬಳಿ ಪತ್ತೆಯಾಗಿದೆ.
ಗೌರಿ ಹತ್ಯೆಗೂ ಮುನ್ನ ಎರಡು ಬಾರಿ ಆತನ ಮೊಬೈಲ್ ಸಿಗ್ನಲ್ ಗೌರಿ ಮನೆ ಬಳೆ ಪತ್ತೆಯಾಗಿದೆ. ನಂತರ ಎರಡು ಬಾರಿ ಫೋನ್ ಆಫ್ ಮಾಡಿ ಆನ್ ಮಾಡಿದ್ದಾನೆ. ಗೌರಿ ಹತ್ಯೆಯ ನಂತರ ಆತನ ಮೊಬೈಲ್ ಮೈಸೂರು ರಸ್ತೆ ಬಳಿ ಕಾರ್ಯನಿರ್ವಹಿಸುತ್ತಿದ್ದದ್ದನ್ನು ಕರೆಗಳ ಪರಿಶೀಲನೆ ವೇಳೆ ಪೊಲೀಸರು ಪತ್ತೆಹಚ್ಚಿದ್ದಾರೆ.
ಕರೆಗಳ ಪರಿಶೀಲನೆ ವೇಳೆ ಅನುಮಾನಾಸ್ಪದ ವ್ಯಕ್ತಿಯ ಚಲನವಲನಗಳನ್ನು ಪತ್ತೆಹಚ್ಚಿದ ಪೊಲೀಸರು ವ್ಯಕ್ತಿಯನ್ನು ಬಂದಿಸಿ ಗೌಪ್ಯ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.