ಬೆಂಗಳೂರು : ಕರ್ನಾಟಕದಲ್ಲಿ ತಂತ್ರಜ್ಞಾನ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ರಾಜ್ಯದ ಗ್ರಾಮಗಳು ಮತ್ತು ನಗರಗಳ ಡಿಜಿಟಲ್ ಅಂತರವನ್ನು ಕಡಿಮೆ ಮಾಡಲು ಪ್ರಸಕ್ತ ಸಾಲಿನಲ್ಲಿ ರಾಜ್ಯದ 2500 ಗ್ರಾಮ ಪಂಚಾಯಿತಿಗಳಿಗೆ ಉಚಿತ ವೈಫೈ ವ್ಯವಸ್ಥೆ ಕಲ್ಪಿಸುವ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಲಾಗಿದೆ.
ಬೆಂಗಳೂರು ಅರಮನೆ ಆವರಣದಲ್ಲಿ ನಡೆಯುತ್ತಿರುವ ‘ಬೆಂಗಳೂರು ಟೆಕ್ ಸಮಾವೇಶದಲ್ಲಿ ವೈಫೈ ಸೌಲಭ್ಯ ನೀಡುವ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಚಾಲನೆ ನೀಡಿದ್ದಾರೆ.
ಪ್ರಸಕ್ತ ವರ್ಷ 2500 ಗ್ರಾಮ ಪಂಚಾಯತಿಗಳಿಗೆ ವೈಫೈ ಸೌಲಭ್ಯ ಕಲ್ಪಿಸಲು ಉದ್ದೇಶಿಸಲಾಗಿದ್ದು, ಆ ಪೈಕಿ 500 ಗ್ರಾಮ ಪಂಚಾಯತಿಗಳಿಗೆ ಪ್ರಥಮ ಹಂತದಲ್ಲಿ ವೈಫೈ ಸಂಪರ್ಕ ಕಲ್ಪಿಸುವ ಯೋಜನೆಗೆ ಚಾಲನೆ ನೀಡಲಾಗಿದೆ. ಇದರಿಂದ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಂದು ಕಿ.ಮೀ.ವ್ಯಾಪ್ತಿವರೆಗೆ ವೈಫೈ ಸೌಲಭ್ಯ ಸಿಗಲಿದೆ. ಗ್ರಾಮ ಪಂಚಾಯಿತಿಗಳಿಗೆ ವೈಫೈ ಸೌಲಭ್ಯ ಕಲ್ಪಿಸುವುದರಿಂದ ಡಿಜಿಟಲ್ ತಂತ್ರಜ್ಞಾನ ಅಸಮಾನತೆ ದೂರವಾಗಿ ನಗರ ಮತ್ತು ಪಟ್ಟಣಗಳ ಉದ್ಯಮಿಗಳನ್ನು ಸಂಪರ್ಕಿಸಲು ಅನುಕೂಲವಾಗುತ್ತದೆ ಎಂದು ಇದೇ ಸಂದರ್ಭದಲ್ಲಿ ಸಿಎಂ ತಿಳಿಸಿದರು.
ಇದರೊಂದಿಗೆ ನವ ಉದ್ಯಮಗಳ ಸ್ಥಾಪನೆಗೆ ಅಗತ್ಯವಾದ ಅನುದಾದ ನೆರವು ಒದಗಿಸುವುದು, ಮಂಗಳೂರು, ಕಲಬುರಗಿ, ಹುಬ್ಬಳ್ಳಿ-ಧಾರವಾಡದಲ್ಲಿ ಕೌಶಲಾಭಿವೃದ್ಧಿ ಕೇಂದ್ರಗಳು ಮತ್ತು ಇನ್ಕ್ಯುಬೇಶನ್(Incubation) ಕೇಂದ್ರಗಳ ಸ್ಥಾಪನೆಗೆ ನಿರ್ಧರಿಸಲಾಗಿದೆ.
ಅಷ್ಟೇ ಅಲ್ಲದೆ ವಿಮಾನಯಾನ, ರಕ್ಷಣಾ ವಲಯ ಹಾಗೂ ಅಂತರ್ಜಾಲ ಕ್ಷೇತ್ರದಲ್ಲಿ ಕಾರ್ಯಕ್ಷಮತಾ ಕೇಂದ್ರಗಳ ಸ್ಥಾಪನೆ, ದತ್ತಾಂಶ ವಿಜ್ಞಾನ, ಆರ್ಟಿಫಿಶಿಯಲ್ ಇಂಟಲಿಜೆನ್ಸ್, ಯಾಂತ್ರಿಕ ವಿಜ್ಞಾನ ಮತ್ತು ಸೈಬರ್ ಸುರಕ್ಷತೆಗೆ ಒತ್ತುನೀಡಲು ಸರ್ಕಾರ ನಿರ್ಧರಿಸಿದೆ ಎಂದು ಸಿದ್ದರಾಮಯ್ಯ ವಿವರಿಸಿದ್ದಾರೆ.