ವೋಟಿಗಾಗಿ ಬಸವಣ್ಣನ ಹೆಸರು ಬಳಸಬೇಡಿ, ಅವರ ವಚನಗಳನ್ನು ಪಾಲಿಸಿ: ರಾಹುಲ್ ಗಾಂಧಿ

ಬಸವಣ್ಣ ಅವರ ಹೆಸರನ್ನು ಕೇವಲ ವೋಟಿಗಾಗಿ ಬಳಸಿಕೊಳ್ಳಬೇಡಿ. ಅವರ ಮಾತುಗಳನ್ನು, ವಚನಗಳನ್ನು ಪಾಲಿಸಿ ಎಂದು ಹೇಳುವ ಮೂಲಕ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕಿವಿಮಾತು ಹೇಳಿದರು.  

Last Updated : Feb 24, 2018, 06:11 PM IST
ವೋಟಿಗಾಗಿ ಬಸವಣ್ಣನ ಹೆಸರು ಬಳಸಬೇಡಿ, ಅವರ ವಚನಗಳನ್ನು ಪಾಲಿಸಿ: ರಾಹುಲ್ ಗಾಂಧಿ title=

ಬೆಳಗಾವಿ : ಬಸವಣ್ಣ ಅವರ ಹೆಸರನ್ನು ಕೇವಲ ವೋಟಿಗಾಗಿ ಬಳಸಿಕೊಳ್ಳಬೇಡಿ. ಅವರ ಮಾತುಗಳನ್ನು, ವಚನಗಳನ್ನು ಪಾಲಿಸಿ ಎಂದು ಹೇಳುವ ಮೂಲಕ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕಿವಿಮಾತು ಹೇಳಿದರು.

ರಾಜ್ಯದಲ್ಲಿ ಇಂದಿನಿಂದ 2 ನೇ ಹಂತದ ಜನಾಶೀರ್ವಾದ ಯಾತ್ರೆಯನ್ನು ಆರಂಭಿಸಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅಥಣಿಯಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಭಾಗವಹಿಸಿ ವಚನಕಾರ ಬಸವಣ್ಣನವರ ವಚನಗಳನ್ನು ನೆನೆದು, ನುಡಿದಂತೆ ನಡೆಯುತ್ತಿರುವುದಾಗಿ ಹೇಳಿದರು.

ಕನ್ನಡದಲ್ಲಿಯೇ ಭಾಷಣ ಆರಂಭಿಸಿದ ರಾಹುಲ್ ಗಾಂಧಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದುಕೊಳ್ಳುತ್ತಿದೆ. ಅದಕ್ಕೆಂದೇ ಬಡವರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ, ಪ್ರತಿ ಬಡವರ ಖಾತೆಗೆ 15 ಲಕ್ಷ ರೂ. ಹಾಕುವುದಾಗಿ ಹೇಳಿದ, 20 ಲಕ್ಷ ಯುವಕರಿಗೆ ಉದ್ಯೋಗ ನೀಡುವುದಾಗಿ ಹೇಳಿದ್ದ ಬಿಜೆಪಿ ಸರ್ಕಾರ ಮಾಡಿದ್ದೇನು? ಎಂದು ಹೇಳುತ್ತಾ ಪ್ರಧಾನಿ ಮೋದಿ ಅವರೇ, ನೀವು ನುಡಿದಂತೆ ನಡೆದಿದ್ದೀರಾ? ಎಂದು ಪ್ರಶ್ನಿಸಿದರು. 

ಬಸವಣ್ಣನವರು ಕಾಯಕವೇ ಕೈಲಾಸ ಮತ್ತು ಸಮಾಜದಲ್ಲಿ ಎಲ್ಲರೂ ಸಮಾನರು ಎಂದು ಹೇಳಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ಮಹಿಳೆಯರಿಗಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಇದರ ಫಲವಾಗಿ ಇತರ ರಾಜ್ಯಗಳಿಗಿಂತಲೂ ಕರ್ನಾಟಕ ಮಹಿಳಾ ಸಬಲೀಕರಣದಲ್ಲಿ ಮುಂದಡಿಯಿಟ್ಟಿದೆ ಎಂದು ಹೇಳಿದರು.

ಮುಂದುವರೆದು ಮಾತನಾಡಿದ ಅವರು, ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ ಕುರಿತು ಆಕ್ರೋಶ ವ್ಯಕ್ತ ಪಡಿಸುತ್ತಾ ನರೇಂದ್ರ ಮೋದಿ ಅವರು ದೇಶವನ್ನು ಲೂಟಿ ಮಾಡುವವರಿಗೆ ಅವಕಾಶ ಮಾಡಿಕೊಡುತ್ತಿದ್ದಾರೆ ಎಂದು ಆರೋಪಿಸಿದರು. ಇನ್ನುಳಿದಂತೆ ಈ ಹಿಂದೆ ಇತರ ಸಮಾವೇಶಗಳಲ್ಲಿ ಭಾಷಣ ಮಾಡಿದ್ದ ಅಂಶಗಳೇ ಇಲ್ಲಿಯೂ ಪುನರಾವರ್ತನೆಯಾದರೂ, ವಚನಕಾರರಾದ ಶಿಶುನಾಳ ಷರೀಫ, ಅಕ್ಕಮಹಾದೇವಿ, ಗಂಗಾಂಬಿಕೆ, ಬಸವಣ್ಣನವರ ಹೆಸರು ಪ್ರಸ್ತಾಪಿಸಿದ್ದು ವಿಶೇಷವಾಗಿತ್ತು. 

ಸುಮಾರು 2 ಲಕ್ಷಕ್ಕೂ ಅಧಿಕ ಜನ ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ರಾಜ್ಯಾಧ್ಯಕ್ಷ ಜಿ.ಪರಮೇಶ್ವರ್ ಸೇರಿದಂತೆ ಪಕ್ಷದ ಅನೇಕ ನಾಯಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 

Trending News