ನವದೆಹಲಿ: ನಾಡಪ್ರಭು ಕೆಂಪೇಗೌಡ ಅಧ್ಯಯನ ಕೇಂದ್ರ ಸ್ಥಾಪಿಸಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಹೊರಡಿಸಿದ್ದ ಆದೇಶವನ್ನು ಈಗಿನ ಯಡಿಯೂರಪ್ಪನವರ ಸರ್ಕಾರ ಹಿಂಪಡೆದಿರುವ ನಿರ್ಧಾರವನ್ನು ಮಾಜಿ ಸಚಿವ ಡಿ.ಕೆ. ಶಿವಕುಮಾರ್(DK Shivakumar) ಖಂಡಿಸಿದ್ದಾರೆ.
ಈ ವಿಚಾರವಾಗಿ ಬುಧವಾರ ರಾತ್ರಿ ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಡಿ.ಕೆ. ಶಿವಕುಮಾರ್, 'ಕೆಂಪೇಗೌಡ ಅವರ ಹೆಸರಿನಲ್ಲಿ ಅಧ್ಯಯನ ಕೇಂದ್ರ ಸ್ಥಾಪನೆ ನಾಡನ್ನು ಕಟ್ಟಿದ ಮಹಾನ್ ವ್ಯಕ್ತಿಗೆ ಸಲ್ಲಿಸುವ ಗೌರವ ಈ ವಿಚಾರದಲ್ಲೂ ಯಡಿಯೂರಪ್ಪ ಸರ್ಕಾರ ರಾಜಕೀಯ ಮಾಡುತ್ತಿರುವುದು ನಾಚಿಕೆಗೇಡಿನ ವಿಚಾರ' ಎಂದು ಗುಡುಗಿದರು.
'ವಿಶ್ವಮಾನ್ಯ ಬೆಂಗಳೂರು ನಗರವನ್ನು ಕಟ್ಟಿ ಜಾಗತಿಕ ಭೂಪಟದಲ್ಲಿ ಗುರುತಿಸುವಂತಹ ಕೆಲಸ ಮಾಡಿದ ನಾಡಪ್ರಭು ಕೆಂಪೇಗೌಡ(Kempegowda)ರ ಹೆಸರಿನಲ್ಲಿ ನಾನು ಹಿಂದೆ ಕನ್ನಡ ಮತ್ತು ಸಂಸ್ಕೃತಿ ಸಚಿವನಾಗಿದ್ದಾಗ ನಮ್ಮ ಸರ್ಕಾರ ಕೆಂಪೇಗೌಡ ಅಧ್ಯಯನ ಕೇಂದ್ರ ರಚನೆ ಮಾಡಿ ಆದೇಶ ಹೊರಡಿಸಿತ್ತು. ಅಲ್ಲದೆ ಅದಕ್ಕೆ ಅಗತ್ಯ ಹಣಕಾಸನ್ನು ಕೂಡ ಬಿಡುಗಡೆ ಮಾಡಿತ್ತು'. ಆದರೆ ದ್ವೇಷದ ರಾಜಕಾರಣ ಮುಂದುವರೆಸಿರುವ ಯಡಿಯೂರಪ್ಪನವರ ಸರ್ಕಾರ ಈಗ ಈ ಆದೇಶವನ್ನೂ ರದ್ದು ಮಾಡಿದೆ. ನಮ್ಮ ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆಗೆ ಅಭೂತಪೂರ್ವ ಕೊಡುಗೆ ನೀಡಿದ್ದ ಹೆಮ್ಮೆಯ ವ್ಯಕ್ತಿ ಕೆಂಪೇಗೌಡರಿಗೆ ಗೌರವ ಸೂಚಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿತ್ತು. ಆದರೆ ಬಿಜೆಪಿ ಸರ್ಕಾರ ಅದನ್ನು ಹಿಂಪಡೆದಿರುವುದು ಖಂಡನೀಯ ಹಾಗೂ ಕೆಂಪೇಗೌಡರಿಗೆ ಮಾಡಿದ ಅಪಮಾನ ಎಂದು ಡಿಕೆಶಿ ಕಿಡಿ ಕಾರಿದರು.
ಸರ್ಕಾರದ ಈ ನಿರ್ಧಾರ ಕೇವಲ ಒಂದು ಸಮುದಾಯದ ವಿರುದ್ಧ ಮಾಡಿರುವ ಪ್ರಹಾರ ಮಾತ್ರವಲ್ಲ. ಇಡೀ ನಾಡಿಗೆ ಮಾಡಿರುವ ಅವಮಾನ ಎಂದವರು ವಾಗ್ಧಾಳಿ ನಡೆಸಿದರು.
ಈ ವಿಷಯದಲ್ಲಿ ಸರ್ಕಾರ ಕೂಡಲೇ ದ್ವೇಷದ ರಾಜಕಾರಣವನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದ ಡಿ.ಕೆ. ಶಿವಕುಮಾರ್, ತಮ್ಮ ಈ ನಿರ್ಧಾರವನ್ನು ಹಿಂಪಡೆದು, ಕೆಂಪೇಗೌಡರ ಹೆಸರಿನಲ್ಲಿ ಅಧ್ಯಯನ ಕೇಂದ್ರ ರಚನೆಗೆ ಮರು ಆದೇಶ ಹೊರಡಿಸಬೇಕು. ಇಲ್ಲವಾದರೆ ನಾವು ಈ ವಿಚಾರವಾಗಿ ಬೀದಿಗಿಳಿದು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆಯ ಸಂದೇಶ ರವಾನಿಸಿದರು.