ಬೆಂಗಳೂರು: ಪುಲ್ವಾಮಾ ಉಗ್ರರ ಆತ್ಮಾಹುತಿ ದಾಳಿಗೆ ಬಲಿಯಾದ ಮಂಡ್ಯದ ವೀರಯೋಧ ಎಚ್. ಗುರು ಅವರ ಹುಟ್ಟೂರು ಮದ್ದೂರು ತಾಲೂಕು ಗುಡಿಗೆರೆಯ ಗರೀಬಿ ಕಾಲನಿಗೆ ಪಾರ್ಥಿವ ಶರೀರ ಶನಿವಾರ ಆಗಮಿಸಲಿದ್ದು, ಅಂತ್ಯ ಸಂಸ್ಕಾರದಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಕೂಡಾ ಪಾಲ್ಗೊಳ್ಳಲಿದ್ದಾರೆ.
ಮಂಡ್ಯ ಜಿಲ್ಲೆಯ ಹುತಾತ್ಮ ಯೋಧ ಎಚ್. ಗುರು ಅವರ ಪಾರ್ಥೀವ ಶರೀರವನ್ನು ಇಂದು ಬೆಳಿಗ್ಗೆ 11:30 ಕ್ಕೆ ಹೆಚ್ಎಎಲ್ ವಿಮಾನ ನಿಲ್ದಾಣಕ್ಕೆ ತರಲಾಗುವುದು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹುತಾತ್ಮ ಯೋಧ ಗುರುಗೆ ಗೌರವ ಅರ್ಪಿಸಲಿದ್ದಾರೆ. ಬಳಿಕ ಗುರು ಅವರ ಪಾರ್ಥೀವ ಶರೀರ ಮಧ್ಯಾಹ್ನ 2ಕ್ಕೆ ಗುಡಿಗೆರೆ ತಲುಪಲಿದ್ದು, ಅಲ್ಲಿ ನಡೆಯಲಿರುವ ಅಂತ್ಯಕ್ರಿಯೆಯಲ್ಲಿ ಸಿಎಂ ಪಾಲ್ಗೊಳ್ಳಲಿದ್ದಾರೆ.
ಪುಲ್ವಾಮಾ ಉಗ್ರ ದಾಳಿ ಹಿನ್ನೆಲೆಯಲ್ಲಿ ಶನಿವಾರ ಹಾಗೂ ಭಾನುವಾರ ನಿಗದಿಯಾಗಿದ್ದ ಎಲ್ಲ ಪ್ರಮುಖ ಕಾರ್ಯಕ್ರಮಗಳನ್ನು ರದ್ದುಪಡಿಸಿಕೊಂಡಿರುವ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ತಮಿಳುನಾಡು ಹಾಗೂ ಕರ್ನಾಟಕದ ಹುತಾತ್ಮ ಯೋಧರ ಅಂತಿಯ ಸಂಸ್ಕಾರದಲ್ಲಿ ಭಾಗಿಯಾಗಲಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.
All prior commitments of Defence Minister Nirmala Sitharaman for tomorrow and day after tomorrow have been cancelled. She will go to Tamil Nadu and Karnataka to pay last respects to the CRPF jawans of the two states, who lost their lives in #PulwamaTerrorAttack. (file pic) pic.twitter.com/qU7hlJY7Xf
— ANI (@ANI) February 15, 2019
ಗುರುವಾರ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದ ಅವಂತಿಪೊರದಲ್ಲಿ ನಡೆದ ರಣಹೇಡಿಗಳ ಹೇಯಕೃತ್ಯದಿಂದ 44 ಸೈನಿಕರು ಹುತಾತ್ಮರಾಗಿದ್ದರು. ಈ ಕೃತ್ಯ ಭಾರತದ ಇತಿಹಾಸದಲ್ಲೇ ಅತ್ಯಂತ ಹೇಯ ಎನ್ನಿಸಿದೆ. ಈ ಕೃತ್ಯಕ್ಕೆ ಪ್ರತೀಕಾರ ತೀರಿಸಿಕೊಳ್ಳುತ್ತೇವೆ ಎಂದು ಸಿಆರ್ ಪಿಎಫ್(ಕೇಂದ್ರ ಮೀಸಲು ಪೊಲೀಸ್ ಪಡೆ) ಟ್ವೀಟ್ ಸಹ ಮಾಡಿದೆ. ಇನ್ನು ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಗೆ ಸಂಬಂಧಿಸಿದಂತೆ ಏಳು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಿಆರ್ಪಿಎಫ್ ಯೋಧರನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನದ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆ ಈ ದಾಳಿ ನಡೆಸಿದೆ ಎನ್ನಲಾಗಿದ್ದು, ಕಮ್ರಾನ್ ಎಂಬ ವ್ಯಕ್ತಿ ಇಡೀ ದಾಳಿಯ ಸಂಚು ರೂಪಿಸಿದ್ದ ಎನ್ನಲಾಗಿದೆ. ಈಗಾಗಲೇ ರಾಷ್ಟ್ರೀಯ ಭದ್ರತಾ ಪಡೆಯ ವಿಶೇಷ ತಂಡವೂ ಸಿಬ್ಬಂದಿ ಸಹ ಘಟನಾ ಸ್ಥಳಕ್ಕೆ ಧಾವಿಸಿದ್ದು, ಕಾರ್ಯಾಚರಣೆ ಆರಂಭಿಸಿದೆ.