ನಮ್ಮನ್ನು ಸ್ಮರಿಸದಿದ್ದರೆ ಕುಮಾರಸ್ವಾಮಿ ರಾಜಕಾರಣ ನಡೆಯಲ್ಲ: ಡಿಕೆ ಸುರೇಶ್

ಡಿಕೆ ಸಹೋದರರ ಗುಲಾಮರಾಗಬೇಡಿ ಎಂದು ಕುಮಾರಸ್ವಾಮಿ ಅವರು ಚನ್ನಪಟ್ಟಣದ ಅಧಿಕಾರಿಗಳಿಗೆ ತಿಳಿಸಿರುವ ಬಗ್ಗೆ ಕೇಳಿದಾಗ ಅವರು ಹೀಗೆ ಉತ್ತರಿಸಿದರು.

Written by - Prashobh Devanahalli | Last Updated : Jun 24, 2024, 06:18 PM IST
    • ಡಿಕೆ ಸಹೋದರರ ಗುಲಾಮರಾಗಬೇಡಿ ಎಂದ ಕುಮಾರಸ್ವಾಮಿ
    • ಕುಮಾರಸ್ವಾಮಿ ಅವರು ಪ್ರತಿ ವಿಚಾರದಲ್ಲೂ ನಮ್ಮ ಹೆಸರನ್ನು ಎಳೆದು ತರುತ್ತಾರೆ
    • ರಾಜಕಾರಣ ಹಾಗು ದಿನಚರಿ ನಡೆಯಲ್ಲ ಎಂದ ಡಿಸಿಎಂ ಡಿಕೆ ಸುರೇಶ್
ನಮ್ಮನ್ನು ಸ್ಮರಿಸದಿದ್ದರೆ ಕುಮಾರಸ್ವಾಮಿ ರಾಜಕಾರಣ ನಡೆಯಲ್ಲ: ಡಿಕೆ ಸುರೇಶ್ title=
File Photo

ಬೆಂಗಳೂರು: ಡಿಕೆ ಶಿವಕುಮಾರ್ ಹಾಗು ನನ್ನನ್ನು ಸ್ಮರಿಸದಿದ್ದರೆ ಕುಮಾರಸ್ವಾಮಿ ಅವರ ರಾಜಕಾರಣ ಹಾಗು ದಿನಚರಿ ನಡೆಯಲ್ಲ ಎಂದು ಡಿಸಿಎಂ ಡಿಕೆ ಸುರೇಶ್ ವಾಗ್ದಾಳಿ ನಡೆಸಿದರು. ಸದಾಶಿವನಗರ ನಿವಾಸದ ಬಳಿ ಡಿಕೆ ಸುರೇಶ್ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.

ಡಿಕೆ ಸಹೋದರರ ಗುಲಾಮರಾಗಬೇಡಿ ಎಂದು ಕುಮಾರಸ್ವಾಮಿ ಅವರು ಚನ್ನಪಟ್ಟಣದ ಅಧಿಕಾರಿಗಳಿಗೆ ತಿಳಿಸಿರುವ ಬಗ್ಗೆ ಕೇಳಿದಾಗ ಅವರು ಹೀಗೆ ಉತ್ತರಿಸಿದರು.

ಇದನ್ನೂ ಓದಿ: ಟೀಂ ಇಂಡಿಯಾದ ಮುಂದಿನ ನಾಯಕ ಈ ಸ್ಫೋಟಕ ಬ್ಯಾಟರ್: ರೋಹಿತ್ ಬಳಿಕ ಮತ್ತೆ ಆರಂಭಿಕನಿಗೆ ಕ್ಯಾಪ್ಟನ್ಸಿ ನೀಡಿದ BCCI!

"ಕುಮಾರಸ್ವಾಮಿ ಅವರು ಪ್ರತಿ ವಿಚಾರದಲ್ಲೂ ನಮ್ಮ ಹೆಸರನ್ನು ಎಳೆದು ತರುತ್ತಾರೆ. ಚನ್ನಪಟ್ಟಣ ತ್ಯಜಿಸಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಗೆದ್ದಿದ್ದಾರೆ. ಅವರು ಚನ್ನಪಟ್ಟಣದಲ್ಲಿ ಮಾಡಿರುವ ಕೆಲಸ ಕಾರ್ಯಗಳ ಬಗ್ಗೆ, ಸಭೆಗಳ ಬಗ್ಗೆ ಮಾಧ್ಯಮಗಳಲ್ಲಿ ದಾಖಲೆಗಳಿವೆ. ಅವರು ಚನ್ನಪಟ್ಟಣ ಎಷ್ಟು ಬಾರಿ ಬಂದಿದ್ದಾರೆ ಎಂಬ ದಾಖಲೆ ನಿಮ್ಮ ಬಳಿ ಇದೆ. ನೀವೇ ಪರಿಶೀಲನೆ ಮಾಡಿ ಜನರ ಮುಂದೆ ಇಡಿ" ಎಂದು ಮನವಿ ಮಾಡಿದರು.

ಸುಳ್ಳು ಹೇಳಿ ದಾರಿ ತಪ್ಪಿಸುವುದನ್ನು ಕಡಿಮೆ ಮಾಡಲಿ:

ಮುಂದೆ ನಮ್ಮ ಸರ್ಕಾರ ಬರುತ್ತದೆ ಎಂದು ಅಧಿಕಾರಿಗಳಿಗೆ ಬೆದರಿಸಿರುವ ಬಗ್ಗೆ ಕೇಳಿದಾಗ, "ಜನ ನರೇಂದ್ರ ಮೋದಿ ಅವರ ಸರ್ಕಾರಕ್ಕೆ ಆಶೀರ್ವಾದ ಮಾಡಿದ್ದು ಕುಮಾರಸ್ವಾಮಿ ಅವರು ಕೇಂದ್ರ ಮಂತ್ರಿಯಾಗಿದ್ದಾರೆ. ಅವರು ಜನರನ್ನು ಹಾಗು ಅಧಿಕಾರಿಗಳನ್ನು ಮೊದಲಿನಿಂದಲೂ ಬೆದರಿಸಿಕೊಂಡು ಬಂದಿದ್ದು, ಈಗಲೂ ಅದನ್ನೇ ಮಾಡುತ್ತಿದ್ದಾರೆ. ಇದು ಅವರಿಗೆ ಶೋಭೆ ತರುವುದಿಲ್ಲ. ಅವರು ಸುಳ್ಳು ಹೇಳಿ ಜನರ ದಾರಿ ತಪ್ಪಿಸುವುದನ್ನು ಕಡಿಮೆ ಮಾಡಿಕೊಳ್ಳಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ" ಎಂದು ತಿಳಿಸಿದರು.

ಎಲ್ಲಾ ಸಮುದಾಯಕ್ಕೂ ಡಿಸಿಎಂ ಹುದ್ದೆ ನೀಡಿ ಸಾಮಾಜಿಕ ನ್ಯಾಯ ಒದಗಿಸಬೇಕು:

ಪಕ್ಷದಲ್ಲಿ ಮೂವರು ಡಿಸಿಎಂ ಹುದ್ದೆ ಬೇಡಿಕೆ ಬಗ್ಗೆ ಚರ್ಚೆ ನಡೆಯುತ್ತಿರುವ ಬಗ್ಗೆ ಕೇಳಿದಾಗ, "ನನಗೆ ಆ ಬಗ್ಗೆ ಮಾಹಿತಿ ಇಲ್ಲ. ಪಕ್ಷ ತೀರ್ಮಾನ ಮಾಡಿ ಇನ್ನು ಐವರನ್ನು ಡಿಸಿಎಂ ಮಾಡಿದರೆ ಒಳ್ಳೆಯದು. ಎಂಟು ಬಾರಿ ಶಾಸಕರಾಗಿರುವ ರಾಮಲಿಂಗಾ ರೆಡ್ಡಿ, ಎಂಟು ವರ್ಷಗಳ ಕಾಲ ಪಕ್ಷದ ಅಧ್ಯಕ್ಷರಾಗಿದ್ದ ಪರಮೇಶ್ವರ್, ಪಕ್ಷದ ಕಾರ್ಯಾಧ್ಯಕ್ಷರಾಗಿ ಕೆಲಸ ಮಾಡಿರುವ ಸತೀಶ್ ಜಾರಕಿಹೊಳಿ, ಈಶ್ವರ್ ಖಂಡ್ರೆ, ಪ್ರಚಾರ ಸಮಿತಿ ಅಧ್ಯಕ್ಷರಾಗಿದ್ದ ಎಂ.ಬಿ ಪಾಟೀಲ್, ಒಕ್ಕಲಿಗ ಸಮುದಾಯದಲ್ಲಿ ಕೃಷ್ಣ ಭೈರೇಗೌಡ, ಮಂಡ್ಯದಿಂದ ಚೆಲುವರಾಯಸ್ವಾಮಿ, ದಿನೇಶ್ ಗುಂಡೂರಾವ್, ಆರ್.ವಿ ದೇಶಪಾಂಡೆ, ಕೆ.ಹೆಚ್ ಮುನಿಯಪ್ಪ  ಇದ್ದಾರೆ. ಹೀಗೆ ಎಲ್ಲಾ ಸಮುದಾಯಕ್ಕೂ ಡಿಸಿಎಂ ಹುದ್ದೆ ನೀಡಿ ಸಾಮಾಜಿಕ ನ್ಯಾಯ ಒದಗಿಸಬೇಕು. ಆ ಮೂಲಕ ಪಕ್ಷ ಬಲವರ್ಧನೆ ಮಾಡಬೇಕು. ಈ ಬಗ್ಗೆ ಪಕ್ಷದ ಹೈಕಮಾಂಡ್ ತೀರ್ಮಾನ ಮಾಡಬೇಕು" ಎಂದು ತಿಳಿಸಿದರು.

ಜನರ ತೀರ್ಮಾನದಂತೆ ಉಪಚುನಾವಣೆ ಅಭ್ಯರ್ಥಿ:

ಚನ್ನಪಟ್ಟಣ ಉಪಚುನಾವಣೆಯಲ್ಲಿ ಯಾರು ಅಭ್ಯರ್ಥಿಯಾಗಬೇಕು ಎಂದು ಕೇಳಿದಾಗ, "ಜನ ಯಾರನ್ನು ಬಯಸುತ್ತಾರೋ ಅವರು ಸ್ಪರ್ಧಿಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ತೀರ್ಪು ಅಂತಿಮ. ಅವರ ಸೂಚನೆಯಂತೆ ಪಕ್ಷ ನಡೆಯುತ್ತದೆ. ರಾಮನಗರ ಜಿಲ್ಲೆ ನಮ್ಮ ಸ್ವಂತ ಜಿಲ್ಲೆ. ಪಕ್ಷದ ಅಧ್ಯಕ್ಷರಾಗಿ, ಉಪಮುಖ್ಯಮಂತ್ರಿಯಾಗಿ ಶಿವಕುಮಾರ್ ಅವರ ಮೇಲೆ ಜವಾಬ್ದಾರಿ ಇದೆ. ಕ್ಷೇತ್ರದಲ್ಲಿ ಶಾಸಕರು ಇಲ್ಲದ ಕಾರಣ ಶಿವಕುಮಾರ್ ಅವರು ಜನರ ಸಮಸ್ಯೆ ಆಲಿಸುತ್ತಿದ್ದಾರೆ. ಜನ ಕೂಡ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದಾರೆ" ಎಂದು ತಿಳಿಸಿದರು.

ನಿಮ್ಮ ಮುಂದಿನ ನಡೆ ಏನು ಎಂದು ಕೇಳಿದಾಗ, "ಸಾಮಾನ್ಯ ಕಾರ್ಯಕರ್ತನಾಗಿ, ಕ್ಷೇತ್ರದ ಜನರ ಕಷ್ಟಸುಖ ಕೇಳುತ್ತಾ, ರಾಜ್ಯದ ಹಿತದೃಷ್ಟಿಯಿಂದ ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ" ಎಂದು ತಿಳಿಸಿದರು.

ಸೋತು ಒಂದು ತಿಂಗಳೂ ಆಗಿಲ್ಲ, ಮತ್ತೆ ಸ್ಪರ್ಧೆ ಮಾಡಿದರೆ ಜನ ನಗುತ್ತಾರೆ:

ಚನ್ನಪಟ್ಟಣದಲ್ಲಿ ಸುರೇಶ್ ಅವರು ಸ್ಪರ್ಧೆ ಮಾಡುವುದಿಲ್ಲವೇ ಎಂದು ಕೇಳಿದಾಗ, "ಜನ ನನ್ನನ್ನು ತಿರಸ್ಕಾರ ಮಾಡಿದ್ದಾರೆ. ನಾನು ಸೋತು ಇನ್ನು ಒಂದು ತಿಂಗಳೂ ಕಳೆದಿಲ್ಲ. ಮತ್ತೆ ಚುನಾವಣೆ ಸ್ಪರ್ಧೆ ಮಾಡಿದರೆ ಜನ ನಗುತ್ತಾರೆ. ಜನ ಹೇಳಬಹುದು. ಆದರೆ ಸ್ಪರ್ಧಿಸುವ ಮನಸ್ಥಿತಿ ನಮಗೂ ಇರಬೇಕು. ಜನ ನನಗೆ ವಿಶ್ರಾಂತಿ ಪಡೆಯಲು ಹೇಳಿದ್ದು, ಬೇರೆಯವರಿಗೆ ಕೆಲಸ ಮಾಡಲು ಹೇಳಿದ್ದಾರೆ. ಬೇರೆಯವರು ಕೆಲಸ ಮಾಡಲಿ, ನಾವು ಅವರಿಗೆ ಸಹಕಾರ ನೀಡುತ್ತೇವೆ. ಚನ್ನಪಟ್ಟಣದ ಜನ ನಮ್ಮ ಸ್ವಂತ ಜನ. ಮೊದಲಿಂದಲೂ ಅವರ ಜತೆ ಒಡನಾಟವಿದೆ. ವಿಶೇಷವಾಗಿ ಲೋಕಸಭೆಯಲ್ಲಿ ಈ ಜನ ಉತ್ತಮ ಬೆಂಬಲ ನೀಡಿದ್ದಾರೆ. ಚನ್ನಪಟ್ಟಣದಲ್ಲಿ ಪಕ್ಷಕ್ಕೆ ನೆಲೆ ಇದೆ. ಆದರೆ ಅಧಿಕಾರದ ಆಸೆಗೆ ಪಕ್ಷಾಂತರ ಮಾಡಿದ ಪರಿಣಾಮ ನಮಗೆ ಹಿನ್ನಡೆ ಆಗುತ್ತಿತ್ತು" ಎಂದು ತಿಳಿಸಿದರು.

ದೇವೇಗೌಡರ ಕುಟುಂಬದ ಬಗ್ಗೆ ಮಾತನಾಡಿದರೆ ತಪ್ಪಾಗುತ್ತದೆ:

ಸೂರಜ್ ರೇವಣ್ಣ ಅವರ ಪ್ರಕರಣದ ಬಗ್ಗೆ ಕೇಳಿದಾಗ, "ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ವಿಚಾರ. ಅವರ ಬಗ್ಗೆ ನಾವು ಮಾತನಾಡಿದರೆ ತಪ್ಪಾಗುತ್ತದೆ. ಹೀಗಾಗಿ ನೀವು ಮಾತನಾಡಬೇಡಿ. ರಾಜ್ಯದ ಜನ ಗಮನಿಸುತ್ತಿದ್ದು, ಕಾನೂನು ಕ್ರಮ ಕೈಗೊಳ್ಳಲಿದೆ" ಎಂದು ತಿಳಿಸಿದರು.

ಇದನ್ನೂ ಓದಿ: ಮಾಜಿ ಸಿಎಂ ಬಿಎಸ್ವೈ ಟೆಂಪಲ್ ರನ್: ಧರ್ಮಸ್ಥಳ-ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಭೇಟಿ

ಷಡ್ಯಂತ್ರಕ್ಕೆ ಹೆದರಲ್ಲ, ಓಡಿಹೋಗಲ್ಲ ಎಂಬ ಹೇಳಿಕೆ ಬಗ್ಗೆ ಕೇಳಿದಾಗ, "ಅವರು ಯಾವ ಕಾರಣಕ್ಕೆ, ಯಾರನ್ನು ಉದ್ದೇಶಿಸಿ ಹೇಳಿದ್ದಾರೆ ಗೊತ್ತಿಲ್ಲ. ಅವರ ರಕ್ಷಣೆಗಾಗಿ ಬೇರೆಯವರ ಮೇಲೆ ಹೇಳುವುದು ಅಭ್ಯಾಸವಾಗಿದೆ. ಬೇರೆಯವರ ಹೆಸರು ಹೇಳಿ ತಾವು ರಕ್ಷಣೆ ಪಡೆಯುವ ಕೆಲಸ ಮಾಡುತ್ತಿದ್ದಾರೆ" ಎಂದು ತಿಳಿಸಿದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News