ಬೆಂಗಳೂರು: ಡಿಸಿಎಂ ಡಿಕೆಶಿವಕುಮಾರ್ ಅವರು ಕನಕಪುರದ ಜನತೆಗೆ ಮಂಕುಬೂದಿ ಎರಚುವ ಹುನ್ನಾರ ನಡೆಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತಾಗಿ ಟ್ವೀಟ್ ಮಾಡಿರುವ ಅವರು "ಉಪ ಮುಖ್ಯಮಂತ್ರಿ ಡಿಕೆಶಿವಕುಮಾರ್ ಅವರು ರಾಮನಗರ ಜಿಲ್ಲೆಯಿಂದ ಕನಕಪುರ ತಾಲೂಕನ್ನು ಬೇರ್ಪಡಿಸಿ ಬೆಂಗಳೂರಿಗೆ ಸೇರಿಸುವೆ ಎಂದು ನೀಡಿರುವ ಹೇಳಿಕೆ ಸರಿಯಲ್ಲ. ಕನಕಪುರ ಸುತ್ತಮುತ್ತ ಇರುವ ತಮ್ಮ ಆಸ್ತಿಗಳ ಮೌಲ್ಯವನ್ನು ಹೆಚ್ಚಿಸಿಕೊಂಡು ತಮ್ಮ ಖಜಾನೆ ವೃದ್ಧಿ ಮಾಡಿಕೊಳ್ಳುವ ಏಕೈಕ ದುರುದ್ದೇಶದಿಂದ ಅವರು ಕನಕಪುರ ಜನರ ನೆಪ ಹೇಳಿಕೊಂಡು ಈ ಹೊಸ ನಾಟಕ ಶುರು ಮಾಡಿದ್ದಾರೆ.ಕನಕಪುರದವರು ರಾಮನಗರ ಜಿಲ್ಲೆಯವರಲ್ಲ, ಬೆಂಗಳೂರು ಜಿಲ್ಲೆಯವರು ಎಂಬುದನ್ನು ನೆನಪಿಟ್ಟುಕೊಳ್ಳಿ ಎನ್ನುವ ಅವರ ಮಾತು ರಾಮನಗರ ಜಿಲ್ಲೆಗೆ ಎಸಗುವ ಮಹಾದ್ರೋಹ. ಅಷ್ಟೇ ಅಲ್ಲ; ಕನಕಪುರ ಜನರಿಗೆ ಮಂಕುಬೂದಿ ಎರಚುವ ಹುನ್ನಾರ ಎಂದು ಆರೋಪಿಸಿದ್ದಾರೆ.
ನಿಮ್ಮ ಜೇಬಿಗೆ ನಾನು ನೇರವಾಗಿ ದುಡ್ಡು ಹಾಕಲು ಆಗುವುದಿಲ್ಲ, ಮನೆ ಕಟ್ಟಿಸಿಕೊಡಲು ಆಗುವುದಿಲ್ಲ ಎನ್ನುವ ಇವರು; ಇಷ್ಟು ದಿನ ಶಾಸಕರಾಗಿ, ಸಚಿವರಾಗಿ ಉಪ ಮುಖ್ಯಮಂತ್ರಿ ಆಗಿ ಮಾಡಿದ್ದೇನು? ತಮ್ಮ ಜೇಬು ತುಂಬಿಸಿಕೊಂಡಿದ್ದು, ತಮ್ಮ ಮನೆಯನ್ನು ಉದ್ಧಾರ ಮಾಡಿಕೊಂಡಿದ್ದಷ್ಟೇ. ಇಷ್ಟಕ್ಕೂ ಕನಕಪುರ ಸುತ್ತಮುತ್ತ ಯಾರ ಆಸ್ತಿಗಳಿವೆ? ಅದರಲ್ಲಿ ಬೇನಾಮಿಗಳು ಎಷ್ಟು? ಎಲ್ಲೆಲ್ಲಿ ಅಕ್ರಮವಾಗಿ ಬೇಲಿ ಹಾಕಲಾಗಿದೆ? ಅವೆಲ್ಲಾ ಅಕ್ರಮಗಳನ್ನು ಸಕ್ರಮ ಮಾಡಿಕೊಳ್ಳಲು ಬೆಂಗಳೂರು ಸೇರ್ಪಡೆಯ ನಾಟಕ! ಈಗಾಗಲೇ ಕನಕಪುರಕ್ಕೆ ಒಂದು ಮೆಡಿಕಲ್ ಕೊಟ್ಟಿದ್ದರೂ ರಾಮನಗರ ಮೆಡಿಕಲ್ ಕಾಲೇಜನ್ನು ಕದ್ದು ಒಯ್ಯವುದರ ಹಿಂದೆಯೂ ಇದೇ ದುಷ್ಟ ತಂತ್ರ ಅಡಗಿತ್ತು.ಕನಕಪುರಕ್ಕೆ 52 ಕೀ.ಮೀ. ದೂರದಲ್ಲಿದೆ ಬೆಂಗಳೂರು. 25 ಕೀ.ಮೀ. ದೂರದಲ್ಲಿದೆ ರಾಮನಗರ. ಜನರಿಗೆ ಯಾವುದು ಅನುಕೂಲ? ದಿನ ಬೆಳಗಾದರೆ ಕನಕಪುರದವರು ಬೆಂಗಳೂರಿಗೆ ಅಲೆಯಬೇಕೆ? ಉಪ ಮುಖ್ಯಮಂತ್ರಿಗಳ ಒಳ ಉದ್ದೇಶದ ಬಗ್ಗೆ ಅನೇಕ ಅನುಮಾನಗಳು ಸಹಜವಾಗಿಯೇ ಮೂಡುತ್ತವೆ ಎಂದು ಅವರು ಹೇಳಿದ್ದಾರೆ.
ಉಪ ಮುಖ್ಯಮಂತ್ರಿ @DKShivakumar ಅವರು ರಾಮನಗರ ಜಿಲ್ಲೆಯಿಂದ ಕನಕಪುರ ತಾಲೂಕನ್ನು ಬೇರ್ಪಡಿಸಿ ಬೆಂಗಳೂರಿಗೆ ಸೇರಿಸುವೆ ಎಂದು ನೀಡಿರುವ ಹೇಳಿಕೆ ಸರಿಯಲ್ಲ. ಕನಕಪುರ ಸುತ್ತಮುತ್ತ ಇರುವ ತಮ್ಮ ಆಸ್ತಿಗಳ ಮೌಲ್ಯವನ್ನು ಹೆಚ್ಚಿಸಿಕೊಂಡು ತಮ್ಮ ಖಜಾನೆ ವೃದ್ಧಿ ಮಾಡಿಕೊಳ್ಳುವ ಏಕೈಕ ದುರುದ್ದೇಶದಿಂದ ಅವರು ಕನಕಪುರ ಜನರ ನೆಪ ಹೇಳಿಕೊಂಡು ಈ ಹೊಸ ನಾಟಕ…
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) October 24, 2023
2006-2007ರಲ್ಲಿ ಕನಕಪುರ ಹೇಗಿತ್ತು? ಡಿಕೆಶಿ ಅವರು ನೆನಪು ಮಾಡಿಕೊಳ್ಳಬೇಕು. ಆಗಲೇ ಪಟ್ಟಣದ ಡಬಲ್ ರಸ್ತೆ ನಿರ್ಮಾಣ, ಕನಕಪುರ ಹೆಬ್ಬಾಗಿಲಿನಲ್ಲಿರುವ ಸೇತುವೆ ನಿರ್ಮಾಣಕ್ಕೆ ಯೋಜನೆ ಕೊಟ್ಟವನು ನಾನು. ಸಂಗಮದಲ್ಲಿ ಪ್ರವಾಹ ಬಂದಾಗಲೆಲ್ಲಾ ಅನೇಕರು ಹಗ್ಗ ಕಟ್ಟಿಕೊಂಡು ರಸ್ತೆ ದಾಟಲು ಹೋಗಿ ಸಾವನ್ನಪ್ಪುತ್ತಿದ್ದರು. ಇದನ್ನು ತಪ್ಪಿಸಲು ಅಲ್ಲಿ ಸೇತುವೆ ನಿರ್ಮಿಸಿ ಮಹದೇಶ್ವರ ಬೆಟ್ಟಕ್ಕೆ ಸುಲಭ ಸಂಪರ್ಕ ಕಲ್ಪಿಸುವ ಯೋಜನೆಗೆ ಇದೇ ಡಿ.ಕೆ.ಶಿವಕುಮಾರ್ ಅವರು 2006ರಲ್ಲಿಯೇ ವಿರೋಧ ಮಾಡಿದ್ದರು! ಈಗ ಕನಕಪುರವನ್ನು ಬೆಂಗಳೂರು ಜಿಲ್ಲೆಗೆ ಸೇರಿಸುವ ಮಾತು!! ನದಿಯಲ್ಲಿ ಜನರು ಕೊಚ್ಚಿಕೊಂಡು ಹೋಗಿ ಸತ್ತರೂ ಪರವಾಗಿಲ್ಲ. ಆದರೆ, ಇವರ ರಿಯಲ್ ಎಸ್ಟೇಟ್ ವ್ಯವಹಾರ ಪೊಗದಸ್ತಾಗಿ ಸಾಗಬೇಕು. ಸದ್ಯ ಬೆಂಗಳೂರಿನಿಂದ ಕನಕಪುರಕ್ಕೆ ಸುರಂಗ ಕೊರೆಸುವೆ ಎಂದು ಹೇಳಲಿಲ್ಲ.. ಅದೇ ನಮ್ಮ ಪುಣ್ಯ ಎಂದು ಟೀಕಿಸಿದ್ದಾರೆ.
ಕನಕಪುರ ಮೆಡಿಕಲ್ ಕಾಲೇಜು ಚಿಕ್ಕಬಳ್ಳಾಪುರ ಪಾಲಾದ ಮೇಲೆ ಮೈತ್ರಿ ಸರಕಾರದ ಅವಧಿಯಲ್ಲಿ ಕನಕಪುರಕ್ಕೆ ಮತ್ತೊಂದು ಮೆಡಿಕಲ್ ಕಾಲೇಜ್ ಮಂಜೂರು ಮಾಡಿದ್ದೆ. ಆದರೆ, ಇದೇ ಮಹಾನುಭಾವರೇ ಮೈತ್ರಿ ಸರಕಾರವನ್ನು ತೆಗೆದ ಪರಿಣಾಮ ಆ ಯೋಜನೆ ನೆನೆಗುದಿಗೆ ಬಿತ್ತು.ಯೋಜನೆಯೂ, ಅದರ 350 ಕೋಟಿ ರೂ.ಗಳಿಗೂ ಹೆಚ್ಚಿನ ಅನುದಾನವೂ ಅಲ್ಲಿಯೇ ಉಳಿಯಿತು.ಉಪ ಮುಖ್ಯಮಂತ್ರಿ ಆದವರು ಆ ಯೋಜನೆಯನ್ನು ಪೂರ್ಣಗೊಳಿಸಬೇಕೆ? ಅಥವಾ ರಾಮನಗರ ಮೆಡಿಕಲ್ ಕಾಲೇಜ್ ಅನ್ನು ಹೈಜಾಕ್ ಮಾಡಲು ಹುನ್ನಾರ ನಡೆಸಬೇಕೇ? ಎಂದು ಅವರು ಪ್ರಶ್ನಿಸಿದ್ದಾರೆ.
ರಾಮನಗರ ಜಿಲ್ಲೆ ಕನಕಪುರ, ರಾಮನಗರ, ಚನ್ನಪಟ್ಟಣ, ಮಾಗಡಿ ಕ್ಷೇತ್ರಗಳ ಜನರ ಬಹುಕಾಲದ ಕನಸು. ಆ ಕನಸನ್ನು ನಾನು ನನಸು ಮಾಡಿದ್ದೇನೆ. ಈಗ ತಮ್ಮ ಸ್ವಾರ್ಥಕ್ಕಾಗಿ ರಾಮನಗರ ಜಿಲ್ಲೆ ಜನರ ಬೆನ್ನಿಗೆ ಚೂರಿ ಹಾಕಿ ಕನಕಪುರದ ಜನರ ಹಿತಕ್ಕೆ ಕೊಡಲಿಪೆಟ್ಟು ಹಾಕುವ ಹುನ್ನಾರ ನಡೆದಿದೆ. ಇದನ್ನು ಸಹಿಸುವ ಪ್ರಶ್ನೆಯೇ ಇಲ್ಲ. ಕನಕಪುರ ಸೇರಿ 4 ವಿಧಾನಸಭೆ ಕ್ಷೇತ್ರಗಳ ಜನರೂ ಒಟ್ಟಾಗಿ ಒಂದೇ ಜಿಲ್ಲೆಯಲ್ಲಿ ಉಳಿಯಲಿದ್ದಾರೆ. ಡಿ.ಕೆ.ಶಿವಕುಮಾರ್ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.