ಇಂದು 'ಹಿಂದುಳಿದ ವರ್ಗದವರ ದೇವರು' ಡಿ.ದೇವರಾಜ್ ಅರಸ್ ಅವರ 36ನೇ ಪುಣ್ಯಸ್ಮರಣೆ

"ಬಡತನ ನಿರ್ಮೂಲನೆ" ಅವರ ಮೊದಲ ಆದ್ಯತೆಯಾಗಿತ್ತು. "ಉಳುವವನಿಗೆ ಭೂಮಿ" ಅವರ ಮಹತ್ತರವಾದ ಯೋಜನೆ.

Last Updated : Jun 6, 2018, 08:39 AM IST
ಇಂದು 'ಹಿಂದುಳಿದ ವರ್ಗದವರ ದೇವರು' ಡಿ.ದೇವರಾಜ್ ಅರಸ್ ಅವರ 36ನೇ ಪುಣ್ಯಸ್ಮರಣೆ title=

ಇಂದು 'ಹಿಂದುಳಿದ ವರ್ಗದವರ ದೇವರು', 'ಹಿಂದುಳಿದ ವರ್ಗಗಳ ಹರಿಕಾರ' ಎಂದೇ ಕರೆಯಲಾಗುತ್ತಿದ್ದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ್ ಅರಸ್ ಅವರ 36ನೇ ಪುಣ್ಯ ಸ್ಮರಣೆಯ ದಿನ. ಅವರ ಚಿಂತನೆ ಮತ್ತು ಸಾಧನೆ ಎಲ್ಲರಿಗೂ ಪ್ರೇರಣೆಯಾಗಿದೆ. ಡಿ. ದೇವರಾಜ್ ಅರಸ್ ಅವರ ದೂರದೃಷ್ಟಿಯ ಆಡಳಿತದ ನಿರ್ಧಾರಗಳು, ಕ್ರಾಂತಿಕಾರಿ ಬದಲಾವಣೆಗೆ ನಾಂದಿಯಾಡವು. ಉಳುವವನಿಗೆ ಭೂಮಿ, ಹಾವನೂರು ಆಯೋಗದಂತಹ ಅವರ ಪ್ರಮುಖ ನಿರ್ಧಾರಗಳ ಪ್ರತಿಫಲ ಇಂದಿನ ಪೀಳಿಗೆಗೆ ಸಿಗುತ್ತಿದೆ. ಗೇಣಿ ಹೋರಾಟದ ಅನುಷ್ಠಾನ ಆಗದಿದ್ದರೆ, ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಹಾವನೂರು ಆಯೋಗ ರಚಿಸದಿದ್ದರೆ ಈವರೆವಿಗೂ ಬಹುಸಂಖ್ಯಾತರಿಗೆ ನ್ಯಾಯ ಸಿಗುತ್ತಿರಲಿಲ್ಲ. ಈ ಸಂದರ್ಭದಲ್ಲಿ ದಿವಂಗತ ಡಿ. ದೇವರಾಜ್ ಅರಸ್ ಅವರ ಕುರಿತು ಒಂದು ಒಂದಿಷ್ಟು ಮಾಹಿತಿ ನಿಮಗಾಗಿ...

ಡಿ.ದೇವರಾಜ್ ಅರಸ್ ಆಗಸ್ಟ್ 15, 1915 ರಂದು ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಕಲ್ಲಹಳ್ಳಿಯಲ್ಲಿ ಜನಿಸಿದರು. ತಂದೆ-ದೇವರಾಜ ಅರಸ್, ತಾಯಿ-ದೇವೀರ ಅಮ್ಮಣ್ಣಿ ಹಾಗೂ ಸಹೋದರ-ಕೆಂಪರಾಜ್ ಅರಸ್. ತಂದೆ ಭೂ-ಮಾಲೀಕರು, ತಾಯಿ-ಧಾರ್ಮಿಕ ಮತ್ತು ಸಾಂಪ್ರದಾಯಿಕ ಮಹಿಳೆ. ಇವರು ಬಹಳ ಶ್ರೀಮಂತ ಕುಟುಂಬದವರು ಹಾಗೂ ಒಡೆಯರ್ ಮನೆತನಕ್ಕೆ ದೂರದ ಸಂಬಂಧಿಕರಾಗಿದ್ದರು. ಅರಸ್ ತಮ್ಮ 15ನೇ ವಯಸ್ಸಿನಲ್ಲಿ 11ವರ್ಷದ ಚಿಕ್ಕಮ್ಮಣ್ಣಿಯವರನ್ನು ಮದುವೆಯಾದರು. ಅವರಿಗೆ ಚಂದ್ರ ಪ್ರಭಾ, ನಾಗರತ್ನಾ ಮತ್ತು ಭಾರತಿ ಮೂವರು ಪುತ್ರಿಯರು.

ಅರಸು ಸಮುದಾಯದ ಪುತ್ರರಿಗೆ ಯೋಗ್ಯವಾದ ಶಿಕ್ಷಣವನ್ನು ಒದಗಿಸಲು ಮೈಸೂರು ಮಹಾರಾಜರಿಂದ ಸ್ಥಾಪಿಸಲ್ಪಟ್ಟ ಮೈಸೂರಿನ ಅರಸು ಬೋರ್ಡಿಂಗ್ ಸ್ಕೂಲ್ನಲ್ಲಿ ದೇವರಾಜ್ ಅರಸ್ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಪಡೆದರು. ನಂತರ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿಎ ಪದವಿ ಪಡೆದರು. ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ ಕಲ್ಲಹಲ್ಲಿಗೆ ಹಿಂದಿರುಗಿದ ಅರಸ್ ಕೃಷಿಯಲ್ಲಿ ತೊಡಗಿದರು. ಆದರೆ ಸ್ವಭಾವತಃ ನಾಯಕತ್ವದ ಗುಣವನ್ನು ಹೊಂದಿದ್ದ ಅರಸ್ ನಂತರದ ದಿನಗಳಲ್ಲಿ ರಾಜಕೀಯಕ್ಕೆ ಧುಮುಕಿದರು. 

ಡಿ. ದೇವರಾಜ್ ಅರಸ್ ಅವರು ರಾಜ್ಯ ನೋಡಿದ ಶ್ರೇಷ್ಠ ಸಾಮಾಜಿಕ ಸುಧಾರಕರು. ಸತತ ಹತ್ತು ವರ್ಷ ಶಾಸಕರಾಗಿ ಆಯ್ಕೆಯಾಗಿದ್ದ ಅರಸು ಮಾರ್ಚ್ 20, 1972 – ಡಿಸೆಂಬರ್ 31, 1977 ಹಾಗೂ ಫೆಬ್ರವರಿ 28, 1978 – ಜನವರಿ 7, 1980 ಎರಡು ಬಾರಿ ಮುಖ್ಯಮಂತ್ರಿಯಾಗಿದ್ದರು. ಅವರ ಅಧಿಕಾರವಧಿಯಲ್ಲಿ ಸಮಾಜದಲ್ಲಿ ಕೆಳವರ್ಗ ಎಂದು ನೋಡಲಾಗುತ್ತಿದ್ದ ಪರಿಶಿಷ್ಟ ಜಾತಿ ಮತ್ತು ಇತರ ಹಿಂದುಳಿದ ಜಾತಿಗಳನ್ನು ಗುರಿಯಾಗಿಟ್ಟುಕೊಂಡು ಸುಧಾರಣೆಗಳನ್ನು ತರುತ್ತಿದ್ದರು. 

"ಬಡತನ ನಿರ್ಮೂಲನೆ" ಅವರ ಮೊದಲ ಆದ್ಯತೆ. ರಾಜ್ಯದಲ್ಲಿ ಸುಧಾರಣೆ ತರಲು ಶೈಕ್ಷಣಿಕ ಹಾಗೂ ತಂತ್ರಜ್ಞಾನ ಹೊಂದಿದ ಮಂತ್ರಿಮಂಡಲವನ್ನು ರಚಿಸಿದರು. "ಉಳುವವನಿಗೆ ಭೂಮಿ" ಅವರ ಮತ್ತೊಂದು ಮಹತ್ತರವಾದ ಯೋಜನೆ. 1973ರಲ್ಲಿ ಮೈಸೂರನ್ನು ಕರ್ನಾಟಕ ಎಂದು ನಾಮಕರಣ ಮಾಡಿದರು. ಅವರ ಕಾಲದಲ್ಲಿ 16,000 ನಿರುದ್ಯೋಗಿ ಪದವೀಧರರಿಗೆ ಉದ್ಯೋಗ ಒದಗಿಸಲಾಯಿತು. ಇವರ ಯೋಜನೆಗಳಿಂದಾಗಿ ಕೂಲಿ ಮಾಡುವವರು ಭೂ-ಮಾಲೀಕರಾದರು, ಬಡವರು-ಶ್ರೀಮಂತರ ನಡುವಿನ ಅಂತರ ಕಡಿಮೆಯಾಯಿತು. ನೀರಾವರಿ ಯೋಜನೆಗಳಿಂದಾಗಿ ರೈತ ಸಮುದಾಯಕ್ಕೆ ಬಹಳ ಅನುಕೂಲವಾಯಿತು. ಜನನಾಯಕ, ಬಡವರ ಧ್ವನಿ ಡಿ.ದೇವರಾಜ್ ಅರಸ್  ಜೂನ್ 6, 1982ರಲ್ಲಿ ನಿಧನರಾದರು. 

Trending News