"ಸಂವಿಧಾನದ ರಕ್ಷಣೆಗೆ ಕಾಂಗ್ರೆಸ್ ನವರು ಎಲ್ಲ ಹೋರಾಟಗಳಿಗೂ ಸಿದ್ಧರಾಗಬೇಕಿದೆ"

  ಭಾರತದ ದೀನದಲಿತರ ಹಾಗೂ ಬಡವರ ಏಳಿಗೆಗಾಗಿ, ಭ್ರಷ್ಟಾಚಾರ ನಿಗ್ರಹಕ್ಕಾಗಿ ಹಾಗೂ ದೇಶವನ್ನು ಅಭಿವೃದ್ಧಿಯ ಪಥದಲ್ಲಿ ನಡೆಸುವ ಸಲುವಾಗಿ ಭಾರತದಲ್ಲಿ ಬಿಜೆಪಿಯೇತರ ಸರ್ಕಾರ ಬರಲೇಬೇಕು. ಬರುವ ಲೋಕಸಭೇಯಲ್ಲಿ ಎಲ್ಲರೂ ಒಗ್ಗಟ್ಟಾಗಿ, ಸ್ವಾತಂತ್ರ್ಯ ಹೋರಾಟದಲ್ಲಿ ಹೋರಾಡಿದಂತೆ ಬಿಜೆಪಿಯನ್ನು ಹೋಗಲಾಡಿಸಲು ಕಾಂಗ್ರೆಸ್ ಕಾರ್ಯಕರ್ತರು ಪಕ್ಷವನ್ನು ಲೋಕಸಭಾ ಚುನಾವಣೆಯಲ್ಲಿ ಗೆಲ್ಲಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಮನವಿ ಮಾಡಿದರು.

Written by - Manjunath N | Last Updated : Jun 26, 2023, 02:08 AM IST
  • 40 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಮೋದಿಯಂತಹ ಸುಳ್ಳು ಹೇಳುವ ಪ್ರಧಾನಿಯನ್ನು ನಾನು ನೋಡಿರಲಿಲ್ಲ.
  • ಚುನಾವಣೆಯ ಸಂದರ್ಭದಲ್ಲಿ ವಿದೇಶದಲ್ಲಿರುವ ಕಪ್ಪುಹಣವನ್ನು ತಂದು, ದೇಶದ ಪ್ರತಿಯೊಬ್ಬರಿಗೂ 15 ಲಕ್ಷ ನೀಡುತ್ತೇವೆಂಬ ಅವರ ಮಾತು ಸುಳ್ಳಾಯಿತು.
  • 9 ವರ್ಷದಲ್ಲಿ 18 ಕೋಟಿ ಉದ್ಯೋಗ ಸೃಷ್ಟಿಸಬೇಕಿತ್ತು, ಹೊಸ ಉದ್ಯೋಗ ಸೃಷ್ಟಿಸುವ ಬದಲು ಇರುವ ಉದ್ಯೋಗವನ್ನು ಯುವಕರು ಕಳೆದುಕೊಳ್ಳುತ್ತಿದ್ದಾರೆ.
"ಸಂವಿಧಾನದ ರಕ್ಷಣೆಗೆ ಕಾಂಗ್ರೆಸ್ ನವರು ಎಲ್ಲ ಹೋರಾಟಗಳಿಗೂ ಸಿದ್ಧರಾಗಬೇಕಿದೆ" title=

 ಸಾಂಗ್ಲಿ:  ಭಾರತದ ದೀನದಲಿತರ ಹಾಗೂ ಬಡವರ ಏಳಿಗೆಗಾಗಿ, ಭ್ರಷ್ಟಾಚಾರ ನಿಗ್ರಹಕ್ಕಾಗಿ ಹಾಗೂ ದೇಶವನ್ನು ಅಭಿವೃದ್ಧಿಯ ಪಥದಲ್ಲಿ ನಡೆಸುವ ಸಲುವಾಗಿ ಭಾರತದಲ್ಲಿ ಬಿಜೆಪಿಯೇತರ ಸರ್ಕಾರ ಬರಲೇಬೇಕು. ಬರುವ ಲೋಕಸಭೇಯಲ್ಲಿ ಎಲ್ಲರೂ ಒಗ್ಗಟ್ಟಾಗಿ, ಸ್ವಾತಂತ್ರ್ಯ ಹೋರಾಟದಲ್ಲಿ ಹೋರಾಡಿದಂತೆ ಬಿಜೆಪಿಯನ್ನು ಹೋಗಲಾಡಿಸಲು ಕಾಂಗ್ರೆಸ್ ಕಾರ್ಯಕರ್ತರು ಪಕ್ಷವನ್ನು ಲೋಕಸಭಾ ಚುನಾವಣೆಯಲ್ಲಿ ಗೆಲ್ಲಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಮನವಿ ಮಾಡಿದರು.

ಅವರು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಪಕ್ಷದ "ಮಹಾ ನಿರ್ಧಾರ" ಸಮಾವೇಶವನ್ನು ಉದ್ಘಾಟಿಸಿ, ಮಾತನಾಡುತ್ತಿದ್ದರು.

40 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಮೋದಿಯಂತಹ ಸುಳ್ಳು ಹೇಳುವ ಪ್ರಧಾನಿಯನ್ನು ನಾನು ನೋಡಿರಲಿಲ್ಲ. ಚುನಾವಣೆಯ ಸಂದರ್ಭದಲ್ಲಿ ವಿದೇಶದಲ್ಲಿರುವ ಕಪ್ಪುಹಣವನ್ನು ತಂದು, ದೇಶದ ಪ್ರತಿಯೊಬ್ಬರಿಗೂ 15 ಲಕ್ಷ ನೀಡುತ್ತೇವೆಂಬ ಅವರ ಮಾತು ಸುಳ್ಳಾಯಿತು. 9 ವರ್ಷದಲ್ಲಿ 18 ಕೋಟಿ ಉದ್ಯೋಗ ಸೃಷ್ಟಿಸಬೇಕಿತ್ತು, ಹೊಸ ಉದ್ಯೋಗ ಸೃಷ್ಟಿಸುವ ಬದಲು ಇರುವ ಉದ್ಯೋಗವನ್ನು ಯುವಕರು ಕಳೆದುಕೊಳ್ಳುತ್ತಿದ್ದಾರೆ. ಅವರು ಅಚ್ಛೇ ದಿನ್ ಆಯೇಗಾ ಎಂಬ ಮಾತು ಹೇಳಿದ್ದರು. ಇಂದು ಪೆಟ್ರೋಲ್, ಡೀಸೆಲ್, ಗ್ಯಾಸ್, ಗೊಬ್ಬರ, ಕಬ್ಬಿಣ, ಸಿಮೆಂಟು, ಆಹಾರ ಪದಾರ್ಥಗಳೂ ಸೇರಿದಂತೆ ಎಲ್ಲದರ ಬೆಲೆ ಹೆಚ್ಚಾಗಿದೆ. ನರೇಂದ್ರ ಮೋದಿಯವರು ನ ಖಾವೋಂಗ, ನ ಖಾನೆ ದೂಂಗ ಎಂದರು. ಆದರೆ ಕರ್ನಾಟಕದಲ್ಲಿ 40 % ಭ್ರಷ್ಟಾಚಾರ ರಾರಾಜಿಸಿತು. ಆ ಮಾತು ಏನಾಯಿತು ಎಂದು ಪ್ರಶ್ನಿಸಿದರು.

ಸಾಂಗ್ಲಿ ಜಿಲ್ಲೆ ಕಾಂಗ್ರೆಸ್ ನ ಭದ್ರ ಕೋಟೆಯಾಗಿದ್ದು, ಪ್ರಮುಖ ರಾಷ್ಟ್ರನಾಯಕರನ್ನು ದೇಶಕ್ಕೆ ನೀಡಿದೆ. ಅಂಬೇಡ್ಕರ್ ಅವರು ಭಾರತದ ಸಂವಿಧಾನದ ಕರ್ತೃ. ಈ ಸಂವಿಧಾನವಿರದಿದ್ದರೆ ಸಮಾಜದ ಶೋಷಿತರು, ದೀನದಲಿತರು, ಅಲ್ಪಸಂಖ್ಯಾತರೂ ದೇಶದ ರಾಜಕಾರಣದಲ್ಲಿ, ಸಾಮಾಜಿಕವಾಗಿ, ಆರ್ಥಿಕವಾಗಿ ಮುಂದೆ ಬರಲು ಸಾಧ್ಯವಾಗುತ್ತಿರಲಿಲ್ಲ. ಎಲ್ಲರಿಗೂ ಸಮಾನತೆಯನ್ನು ಬೋಧಿಸುವ ಸಂವಿಧಾನ ಸಮಸಮಾಜದ ನಿರ್ಮಾಣಕ್ಕೆ ಒತ್ತು ನೀಡುತ್ತದೆ. ಸಾಮಾಜಿಕ ನ್ಯಾಯ, ಸರ್ವರಿಗೂ ಸಮಪಾಲು, ಸಮಬಾಳು ನಮ್ಮ ಸಂವಿಧಾನ ಒದಗಿಸಿಕೊಟ್ಟಿದೆ. ಕಾಂಗ್ರೆಸಿಗರು ಸಂವಿಧಾನವನ್ನು ಬದಲಾಯಿಸಲು ಬಿಡಬಾರದು ಎಂಬ ಶಪಥ ಮಾಡಬೇಕು. ಸಂವಿಧಾನ ಉಳಿದರೆ ಮಾತ್ರ ನಾವೆಲ್ಲರೂ ಉಳಿಯಬಹುದು. ಸಂವಿಧಾನದ ರಕ್ಷಣೆಗೆ ಕಾಂಗ್ರೆಸ್ ನವರು ಎಲ್ಲ ಹೋರಾಟಗಳಿಗೂ ಸಿದ್ಧರಾಗಬೇಕಿದೆ ಎಂದು ತಿಳಿಸಿದರು.

ಕೋಮುವಾದಿ ಭಾರತೀಯ ಜನತಾ ಪಕ್ಷ ಸಂವಿಧಾನವನ್ನು ವಿರೋಧಿಸುತ್ತದೆ. ಸಾರ್ವಕರ್, ಗೋಲ್ವಾಕರ್ ಅವರು ಸಂವಿಧಾನವನ್ನು ಅಂದೇ ವಿರೋಧಿಸಿದ್ದರು. ಧರ್ಮಗಳ ನಡುವೆ ಸಂಘರ್ಷಗಳಿಂದ ದೀನದಲಿತರು, ಅಲ್ಪಸಂಖ್ಯಾತರು ಆತಂಕದಲ್ಲಿ ಬದುಕುವಂತಾಗಿದೆ. ಸಂಘ ಪರಿವಾರದವರು ಈಕೆಲಸವನ್ನು ಮಾಡುತ್ತಿದ್ದಾರೆ. ಭಾರತದಲ್ಲಿ ಹಾಗೂ ಮಹಾರಾಷ್ಟ್ರದಲ್ಲಿ ಭಾರತೀಯ ಜನತಾ ಪಕ್ಷ ಆಡಳಿತದಲ್ಲಿದ್ದು, ಅವರನ್ನು ಕಿತ್ತೊಗೆಯಬೇಕಾದ ಜವಾಬ್ದಾರಿ ಕಾಂಗ್ರೆಸ್‍ನ ಮೇಲಿದೆ. ಪ್ರಜಾತಂತ್ರದ ರಕ್ಷಣೆಗಾಗಿ ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ನಾವೆಲ್ಲರೂ ಸಿದ್ದಗೊಳ್ಳಬೇಕಿದೆ ಎಂದು ಆಗ್ರಹಿಸಿದರು.

ಆಪರೇಷನ್ ಕಮಲ ಮೂಲಕ 2008 ಹಾಗೂ 2018 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿತು. ಭಾಜಪ ಎಂದರೆ ಭ್ರಷ್ಟಾಚಾರ. ಕರ್ನಾಟಕದಲ್ಲಿ ಗುತ್ತಿಗೆದಾರರ ಸಂಘ 40% ಭ್ರಷ್ಟಾಚಾರದ ಸರ್ಕಾರ ಎಂದು ಕರೆಯಿತು. ಭಾಜಪ ಎಂದಿಗೂ ಬಡವರ ಪರ ಕೆಲಸವನ್ನು ಮಾಡಿಲ್ಲ ಎಂದು ಕಿಡಿ ಕಾರಿದರು.

ಕಾಂಗ್ರೆಸ್ ಪಕ್ಷ ಕರ್ನಾಟಕದ ಜನರಿಗೆ 5 ಗ್ಯಾರೆಂಟಿಗಳನ್ನು ನೀಡಿದ್ದು, ಅಧಿಕಾರಕ್ಕೆ ಬಂದ ದಿನವೇ 5 ಗ್ಯಾರೆಂಟಿಗಳನ್ನು ಜಾರಿಗೊಳಿಸುವ ತೀರ್ಮಾನವನ್ನು ಮಾಡಲಾಯಿತು. ರಾಜ್ಯದೊಳಗೆ ಎಲ್ಲ ಮಹಿಳೆಯರು ಸರ್ಕಾರಿ ಬಸ್‍ನಲ್ಲಿ ಉಚಿತವಾಗಿ ಪ್ರಯಾಣಿಸುವ ಶಕ್ತಿ ಯೋಜನೆಯನ್ನು ಜಾರಿಗೊಳಿಸಿದೆ. ಪ್ರತಿ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು 2000 ರೂ. ನೀಡುವ ಗೃಹಜ್ಯೋತಿ ಕಾರ್ಯಕ್ರಮವನ್ನು ಜಾರಿಗೊಳಿಸಿದೆ. ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ, ಅನ್ನಭಾಗ್ಯ ಯೋಜನೆಯಡಿ ಏಳು ಕೆಜಿ ಅಕ್ಕಿಯನ್ನು ನೀಡಲಾಗುತ್ತಿತ್ತು. ಈ ಬಾರಿಯೂ ರಾಜ್ಯದ ಬಿಪಿಎಲ್ ಕಾರ್ಡ್ ಹಾಗೂ ಅಂತ್ಯೋದಯ ಕಾರ್ಡ್‍ದಾರರಿಗೆ 10 ಕೆಜಿ ಅಕ್ಕಿಯನ್ನು ನೀಡುವ ಅನ್ನಭಾಗ್ಯ ಯೋಜನೆಯನ್ನು ಅನುಷ್ಠಾನಗೊಳಿಸಲಿದೆ. ಅನ್ನಭಾಗ್ಯ ಯೋಜನೆಗೆ ಎಫ್ ಸಿ ಐ ಅಕ್ಕಿಯನ್ನು ನೀಡುವುದಾಗಿ ಮೊದಲು ಒಪ್ಪಿತ್ತು, ನಂತರ ಕೇಂದ್ರ ಸರ್ಕಾರದ ನೀತಿಯಿಂದ ಕಾಂಗ್ರೆಸ್ ಸರ್ಕಾರಕ್ಕೆ ಅಕ್ಕಿ ನೀಡಬಾರದು ಎಂದು ಸೂಚನೆ ನೀಡಿತು. ಅಕ್ಕಿ ದಾಸ್ತಾನಿದ್ದರೂ ಅಕ್ಕಿ ನೀಡುವುದಿಲ್ಲ ಎಂದು ಕೇಂದ್ರ ಸರ್ಕಾರದ ದ್ವೇಷದ ರಾಜಕಾರಣವನ್ನು ಮಾಡಿದೆ. ಕೇಂದ್ರ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿದರೂ , ಕರ್ನಾಟಕಕ್ಕೆ ಅಕ್ಕಿ ನೀಡಲು ಒಪ್ಪುತ್ತಿಲ್ಲ. ಈ ಮೂಲಕ ಭಾರತೀಯ ಜನತಾ ಪಕ್ಷದವರು ಬಡವರ ವಿರೋಧಿಗಳು ಎಂಬುದು ನಿರೂಪಿತವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕದಲ್ಲಿರುವ ನಿರುದ್ಯೋಗಿ ಪದವೀಧರ ಯುವಕರಿಗೆ ತಿಂಗಳಿಗೆ 3 ಸಾವಿರ ರೂ ಹಾಗೂ ಡಿಪ್ಲೊಮಾ ಪದವೀಧರರಿಗೆ 1,500 ರೂ.ಗಳನ್ನು 24 ತಿಂಗಳವರೆಗೆ ನೀಡುವ ಯುವನಿಧಿ ಯೋಜನೆಯನ್ನು ಜಾರಿಗೊಳಿಸಲಾಗುವುದು. ಕರ್ನಾಟಕದಲ್ಲಿ ಕಾಂಗ್ರೆಸ್ ಸೋಲಿಸಲು ಪ್ರಧಾನಿ ಮೋದಿಯವರು ಹಾಗೂ ಕೇಂದ್ರ ಮಂತ್ರಿಮಂಡಲದ ಅನೇಕರು ರಾಜ್ಯಕ್ಕೆ ಭೇಟಿ ನೀಡಿದರು. ಆದರೂ ಕರ್ನಾಟಕದಲ್ಲಿ ಭಾಜಪ ಸೋತಿರುವುದು ನರೇಂದ್ರ ಮೋದಿಯವರ ಜನಪ್ರಿಯತೆ ಮಸುಕ್ಕಾಗುತ್ತಿದೆ ಎಂಬುದನ್ನು ಸಂಕೇತಿಸುತ್ತಿದೆ. ರಾಜ್ಯದ ಭಾಜಪ ಭ್ರಷ್ಟದಾಚಾರದಲ್ಲಿ ಮುಳುಗಿ, ಜನವಿರೋಧಿಯಾಗಿತ್ತು. ಕೇವಲ ಪ್ರಧಾನಿ ಮೋದಿಯವರನ್ನು ನಂಬಿ ಚುನಾವಣೆ ಗೆಲ್ಲಬಹುದೆಂಬ ಭಾಜಪದ ನಂಬಿಕೆ ಹುಸಿಯಾಯಿತು ಎಂದು ಟೀಕಿಸಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News