ಕಾಂಗ್ರೆಸ್ ಸರ್ಕಾರದ ಬ್ರ್ಯಾಂಡ್ ಬೆಂಗಳೂರು ಯೋಜನೆ ಒಂದು ಹಗಲು ದರೋಡೆ!!: ಬಿಜೆಪಿ ಆರೋಪ

Brand Bengaluru initiative: ಬೆಂಗಳೂರಿನಲ್ಲಿ 190 ಕಿಮೀ ಉದ್ದದ ₹85,000 ಕೋಟಿ ವೆಚ್ಚದ ಸುರಂಗ ನಿರ್ಮಾಣವನ್ನು ಬಿಬಿಎಂಪಿಯಿಂದ ನಿರ್ಮಿಸುತ್ತಾರಂತೆ. ಇದು ಅನಾಯಾಸವಾಗಿ ಒಂದಷ್ಟು ಸುರಂಗ ತೋಡುವ ಕಂಪನಿಗಳಿಂದ ಅಡ್ವಾನ್ಸ್‌ ಕಮಿಷನ್‌ ಪಡೆಯುವ ಯೋಜನೆ ಹೊರತು ಮತ್ತೇನಲ್ಲವೆಂದು ಬಿಜೆಪಿ ಟೀಕಿಸಿದೆ.

Written by - Puttaraj K Alur | Last Updated : Oct 26, 2023, 04:06 PM IST
  • ಕಾಂಗ್ರೆಸ್ ಸರ್ಕಾರದ ಬ್ರ್ಯಾಂಡ್‌ ಬೆಂಗಳೂರು ಯೋಜನೆ ಒಂದು ಹಗಲು ದರೋಡೆ!!
  • ಇದು ಈಗಾಗಲೇ “ಬ್ರ್ಯಾಂಡ್‌” ಆಗಿರುವ ಬೆಂಗಳೂರನ್ನು “ಬ್ಯಾಡ್ ಬೆಂಗಳೂರು” ಮಾಡುವ ಕುತಂತ್ರ!!
  • ಬ್ರ್ಯಾಂಡ್‌‌ ಬೆಂಗಳೂರು ಯೋಜನೆಯಿಂದ ಬೆಂಗಳೂರಿಗೆ ಹಾಗೂ ಬೆಂಗಳೂರಿಗರಿಗೆ ನಯಾಪೈಸೆ ಲಾಭವಿಲ್ಲ
ಕಾಂಗ್ರೆಸ್ ಸರ್ಕಾರದ ಬ್ರ್ಯಾಂಡ್ ಬೆಂಗಳೂರು ಯೋಜನೆ ಒಂದು ಹಗಲು ದರೋಡೆ!!: ಬಿಜೆಪಿ ಆರೋಪ title=
ಬ್ರ್ಯಾಂಡ್‌ ಬೆಂಗಳೂರು ಯೋಜನೆ ಒಂದು ಹಗಲು ದರೋಡೆ!!

ಬೆಂಗಳೂರು: ‘ಸಂಪದ್ಭರಿತವಾಗಿದ್ದ ಕರ್ನಾಟಕವನ್ನು ಭರಪೂರವಾಗಿ ಲೂಟಿ ಹೊಡೆಯಲೆಂದೇ ರಾಜ್ಯದ ಜನತೆಯ ಕಿವಿ ಮೇಲೆ ಕಲರ್‌ ಕಲರ್‌ ಹೂವಿಟ್ಟು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರದ ಬ್ರ್ಯಾಂಡ್‌ ಬೆಂಗಳೂರು ಯೋಜನೆ ಒಂದು ಹಗಲು ದರೋಡೆ!! ಇದು ಈಗಾಗಲೇ “ಬ್ರ್ಯಾಂಡ್‌” ಆಗಿರುವ ಬೆಂಗಳೂರನ್ನು “ಬ್ಯಾಡ್ ಬೆಂಗಳೂರು” ಮಾಡುವ ಕುತಂತ್ರ!!’ವೆಂದು ಬಿಜೆಪಿ ಆರೋಪಿಸಿದೆ. ಈ ಬಗ್ಗೆ ಗುರುವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಬ್ರ್ಯಾಂಡ್‌‌ ಬೆಂಗಳೂರು ಹೆಸರಿನಲ್ಲಿ ಬೆಂಗಳೂರಿನಾದ್ಯಂತ ಪಿಕ್‌ನಿಕ್‌ ಮಾಡುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು, ಬೆಂಗಳೂರಿನ ಬ್ರ್ಯಾಂಡ್‌‌ ಕುಗ್ಗಿಸುವ ಯೋಜನೆಗಳನ್ನು ಕಾರ್ಯರೂಪಕ್ಕೆ ತರುತ್ತಿದ್ದಾರೆಯೇ ಹೊರತು, ಅವರ ಬ್ರ್ಯಾಂಡ್‌‌ ಬೆಂಗಳೂರು ಯೋಜನೆಯಿಂದ ಬೆಂಗಳೂರಿಗೆ ಹಾಗೂ ಬೆಂಗಳೂರಿಗರಿಗೆ ನಯಾಪೈಸೆ ಲಾಭವಿಲ್ಲ, ಬದಲಿಗೆ ನಷ್ಟವೇ ಅಧಿಕ!!’ವೆಂದು ಕುಟುಕಿದೆ.

‘ಅಸಲಿಗೆ ಬ್ರ್ಯಾಂಡ್‌‌ ಬೆಂಗಳೂರಿಗೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಘೋಷಿಸುತ್ತಿರುವ ಯೋಜನೆಗಳೆಲ್ಲವೂ ನಗರವನ್ನು ಬೇಕಾಬಿಟ್ಟಿಯಾಗಿ ಲೂಟಿ ಮಾಡುವ ಯೋಜನೆಗಳಾಗಿವೆ. ಆ ಎಲ್ಲಾ ಯೋಜನೆಗಳು ಕಾರ್ಯಗತವಾದರೆ ಅದರ ಲಾಭಾರ್ಥಿಗಳು ಕೇವಲ ಡಿಕೆಶಿ ಮತ್ತವರ ಪಟಾಲಂ. ಶಿವಕುಮಾರ್‌ ಅವರು ಈ 5 ತಿಂಗಳಲ್ಲಿ ಪಟಾಲಂ ಕಟ್ಟಿಕೊಂಡು ನಗರವನ್ನು ಐದಾರು ಬಾರಿ ತಿರುಗಿದ್ದಾರೆಯೇ ಹೊರತು, ಇದುವರೆಗೂ ನಗರದ ಅಭಿವೃದ್ಧಿಗೆ ನೀಲನಕ್ಷೆ ತಯಾರಿಸಲು ಸಾಧ್ಯವಾಗಿಲ್ಲ. ಇದು ಡಿಕೆಶಿಗೆ ಬೆಂಗಳೂರಿನ ಅಭಿವೃದ್ಧಿ ಬಗ್ಗೆ ಯಾವುದೇ ಪ್ರಾಮಾಣಿಕ ಕಾಳಜಿ ಇಲ್ಲ ಎಂಬುದರ ಸೂಚಕ’ವೆಂದು ಬಿಜೆಪಿ ಟೀಕಿಸಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಹೆಚ್ಚಿರುವ ವಿದ್ಯುತ್‌ ಬೇಡಿಕೆ ಪೂರೈಸಲು ಕ್ರಮವಹಿಸಿದ್ದೇವೆ: ಕೆ.ಜೆ. ಜಾರ್ಜ್‌

‘ಬೆಂಗಳೂರಿನಲ್ಲಿ 190 ಕಿಮೀ ಉದ್ದದ ₹85,000 ಕೋಟಿ ವೆಚ್ಚದ ಸುರಂಗ ನಿರ್ಮಾಣವನ್ನು ಬಿಬಿಎಂಪಿಯಿಂದ ನಿರ್ಮಿಸುತ್ತಾರಂತೆ. ಇದು ಅನಾಯಾಸವಾಗಿ ಒಂದಷ್ಟು ಸುರಂಗ ತೋಡುವ ಕಂಪನಿಗಳಿಂದ ಅಡ್ವಾನ್ಸ್‌ ಕಮಿಷನ್‌ ಪಡೆಯುವ ಯೋಜನೆ ಹೊರತು ಮತ್ತೇನಲ್ಲ. ಈಗಾಗಲೇ ನೆನೆಗುದಿಗೆ ಬಿದ್ದಿರುವ ಯೋಜನೆಗಳಿಗೆ ಅನುದಾನ ಇಲ್ಲ, ಪೌರ ಕಾರ್ಮಿಕರಿಗೆ ಸಂಬಳ ಸಹ ಕೊಡಲು ಸರ್ಕಾರದ ಬಳಿ ಹಣವಿಲ್ಲ, ಅಂತಹದರಲ್ಲಿ ಈಗ ಸುರಂಗ ಮಾರ್ಗ ಮಾಡುತ್ತೇವೆಂದು ಹೇಳುತ್ತಿರುವುದು ಜನತೆಯ ಕಿವಿ ಮೇಲಿಡುತ್ತಿರುವ ಮತ್ತೊಂದು ಹೂವು!! ಇನ್ನು ಬೆಂಗಳೂರಿನ ಅರ್ಕಾವತಿ ಮತ್ತು ಕುಮುದ್ವತಿ ನದಿ ಪಾತ್ರದ ಬಫರ್‌ ಜೋನ್‌ಗಳನ್ನು ಶೇ.50ರಷ್ಟು ಕಡಿಮೆ ಮಾಡಲು ಹೊರಟಿರುವ ಯೋಜನೆ ಸಹ ಡಿಕೆಶಿ ತಮ್ಮ ಜೇಬನ್ನು ತುಂಬಿಸಿಕೊಳ್ಳಲು ಹೊರಟಿರುವ ಮತ್ತೊಂದು ಯೋಜನೆ’ ಎಂದು ಬಿಜೆಪಿ ಟ್ವೀಟ್ ಮಾಡಿದೆ.

‘ಈಗಾಗಲೇ ಬಫರ್‌ ಜೋನ್‌ಗಳಲ್ಲಿ ಅನಧಿಕೃತವಾಗಿ ತಲೆ ಎತ್ತಿರುವ ಲೇಔಟ್‍ಗಳು, ಕಟ್ಟಡಗಳನ್ನು ಅಧಿಕೃತ ಮಾಡಿ, ಭೂಗಳ್ಳರಿಗೆ, ಲ್ಯಾಂಡ್‌ ಮಾಫಿಯಾದವರಿಗೆ ಬೆಂಗಳೂರನ್ನು ಬರೆದು ಕೊಡುವ ಹೊಸ ಮಾರ್ಗ. ಬೆಂಗಳೂರಿನ 10 ಎಕರೆ ಪ್ರದೇಶದಲ್ಲಿ ಸ್ಕೈಡೆಕ್‌ ನಿರ್ಮಾಣ ಮಾಡಲು ಹೊರಟಿರುವುದು ಸಹ, ಸಾರ್ವಜನಿಕರ ತೆರಿಗೆ ಹಣವನ್ನು  ಮನಸೋಯಿಚ್ಛೆ ಪೋಲು ಮಾಡಿ, ಮತ್ತೊಂದಿಷ್ಟು ಕಮಿಷನ್‌ ಹಾಗೂ ಬೆಲೆಬಾಳುವ ಜಾಗವನ್ನು ಹೊಡೆಯುವ ಯೋಜನೆ. ಇದರಿಂದ  ಬೆಂಗಳೂರು ನಗರದ ಮೂಲಭೂತಸೌಕರ್ಯಕ್ಕೆ ನಯಾಪೈಸೆ ಸಹಕಾರಿಯಲ್ಲ. ಇದು ಬೆಂಗಳೂರು ನಗರವನ್ನು ಅಂದಗಾಣಿಸುವ ಯೋಜನೆಯಲ್ಲ, ಬದಲಿಗೆ ಬೆಂಗಳೂರು ನಗರದ ಸೌಂದರ್ಯವನ್ನು ಮತ್ತು ಈಗಾಗಲೇ ಇರುವ ಮೂಲಸೌಕರ್ಯಗಳನ್ನು ಹಾಳು ಮಾಡುವ ಯೋಜನೆ!!’ ಎಂದು ಬಿಜೆಪಿ ಕುಟುಕಿದೆ.

ಇದನ್ನೂ ಓದಿ: ಹೌದು, ಸಿದ್ದರಾಮಯ್ಯಗೆ ನಾನೇ ವಿಲನ್: ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ

‘ಇದೆಲ್ಲಕ್ಕಿಂತ ಅಚ್ಚರಿಯೆಂದರೆ, ಕನಕಪುರವನ್ನು ಬೆಂಗಳೂರಿಗೆ ಸೇರಿಸುತ್ತಿರುವುದು, ಇದರಲ್ಲಿ ಕನಕಪುರದ ಜನರ ಹಿತದೃಷ್ಟಿಗಿಂತ ಡಿಕೆಶಿ ಅವರ ಸ್ವಾರ್ಥವೇ ಎದ್ದು ಕಾಣುತ್ತಿದೆ. “ರಿಪಬ್ಲಿಕ್‌ ಆಫ್‌ ಕನಕಪುರ” ಹೆಸರಿನಲ್ಲಿ ಬಹುತೇಕ ಕನಪುರವನ್ನೇ ಬೇನಾಮಿ ಹೆಸರಿನಲ್ಲಿ ಡಿಕೆ ಸಹೋದರರು ಖರೀದಿಸಿದ್ದಾರೆಂಬುದು ಕನಕಪುರದ ಪ್ರತಿ ಬಂಡೆಗಳಲ್ಲಿಯೂ ಕೇಳಿ ಬರುತ್ತಿರುವ ಪಿಸು ಪಿಸು-ಗುಸು ಗುಸು. ಈಗ ಕನಕಪುರವನ್ನು ಬೆಂಗಳೂರಿಗೆ ಸೇರಿಸಹೊರಟಿರುವುದು ಸಹ ತಮ್ಮ ಆಸ್ತಿ ಮೌಲ್ಯವನ್ನು ಹೆಚ್ಚಿಸಿಕೊಳ್ಳುವುದಲ್ಲದೆ ಮತ್ತೇನು..?? ಒಟ್ಟಿನಲ್ಲಿ ಡಿಸಿಎಂ ಡಿಕೆಶಿ ಅವರು ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗೆ ಯಾವುದೇ ಯೋಜಿತ ಹೊಸ ಚಿಂತನೆಯಿಲ್ಲದೆ, ರಿಯಲ್‌ ಎಸ್ಟೇಟ್‌ ಹಾಗೂ ಲ್ಯಾಂಡ್‌ ಮಾಫಿಯಾದವರ ಕೈಗೊಂಬೆಯಾಗಿ ಅದಕ್ಕೆ ಬ್ರ್ಯಾಂಡ್‌ ಬೆಂಗಳೂರು ಎಂಬ ಮುಖವಾಡ ತೊಟ್ಟಿದ್ದಾರೆ. ಬೆಂಗಳೂರಿನ ಅಭಿವೃದ್ಧಿ ಹೆಸರಿನಲ್ಲಿ ಬೆಂಗಳೂರನ್ನು ಇನ್ನೆಷ್ಟು “ಬ್ಯಾಡ್‌” ಮಾಡುತ್ತಾರೆಂಬುದೇ ಸದ್ಯ ಬೆಂಗಳೂರಿನ ನಿವಾಸಿಗಳಲ್ಲಿ ಮಡುಗಟ್ಟಿರುವ ಭಯ!!’ವೆಂದು ಬಿಜೆಪಿ ವ್ಯಂಗ್ಯವಾಡಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News