ಬಳ್ಳಾರಿ: ಭಾರೀ ಕುತೂಹಲ ಮೂಡಿಸಿದ್ದ ಜಿದ್ದಾಜಿದ್ದಿನ ಲೋಕಸಭಾ ಕ್ಷೇತ್ರ ಬಳ್ಳಾರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಬಿಜೆಪಿ ಕೋಟೆಯನ್ನು ಕಾಂಗ್ರೆಸ್ ತನ್ನದಾಗಿಸಿಕೊಂಡಿದೆ.
ಹಲವು ವರ್ಷಗಳಿಂದ ಬಳ್ಳಾರಿಯನ್ನು ಭದ್ರ ಕೋಟೆ ಮಾಡಿಕೊಂಡಿದ್ದ ಬಿಜೆಪಿಗೆ ಪ್ರತ್ಯುತ್ತರ ನೀಡಿರುವ ಕಾಂಗ್ರೆಸ್ ಎರಡು ಲಕ್ಷ ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ 5,54,139 ಮತ ಪಡೆದು ಗೆಲುವು ಸಾಧಿಸಿದ್ದರೆ, ಬಿಜೆಪಿಯ ಜೆ.ಶಾಂತಾ 3,39,313 ಮತ ಗಳಿಸಿ ಪರಾಜಯಗೊಂಡಿದ್ದಾರೆ. ಈ ಮೂಲಕ 2,14,826 ಮತಗಳ ಅಂತರದಿಂದ ವಿ.ಎಸ್.ಉಗ್ರಪ್ಪ ಭರ್ಜರಿ ಗೆಲುವು ಸಾಧಿಸಿದ್ದಾರೆ.
1951ರಿಂದ 2000ನೇ ಇಸವಿವರೆಗೆ ಬಳ್ಳಾರಿ ಕ್ಷೇತ್ರ ಕಾಂಗ್ರೆಸ್ ಪಕ್ಷದ ಭದ್ರ ಕೋಟೆಯಾಗಿತ್ತು. 2004ರಲ್ಲಿ ಬಿಜೆಪಿ ಅಭ್ಯರ್ಥಿ ಗಣಿಧಣಿ ಗಾಲಿ ಜನಾರ್ದನ ರೆಡ್ಡಿ ಗೆಲುವು ಸಾಧಿಸಿ ಕಾಂಗ್ರೆಸ್ ಕೋಟೆಗೆ ಲಗ್ಗೆ ಇಟ್ಟಿದ್ದರು. ತದನಂತರ 2009ರಲ್ಲಿ ರೆಡ್ಡಿ ಸಹೋದರಿ ಜೆ.ಶಾಂತಾ ಬಿಜೆಪಿ ಸಂಸದೆಯಾಗಿ ಆಯ್ಕೆಯಾಗಿದ್ದರು, 2014ರಲ್ಲಿ ರೆಡ್ಡಿ ಆಪ್ತ ಗೆಳೆಯ ಬಿ.ಶ್ರೀರಾಮುಲು ಬಿಜೆಪಿಯ ಸಂಸದರಾಗಿದ್ದರು. ಮೊಳಕಾಲ್ಮೂರು ವಿಧಾನಸಭಾ ಚುನಾವಣೆಯಲ್ಲಿ ಶ್ರೀರಾಮುಲು ಗೆಲುವು ಸಾಧಿಸಿದ್ದ ಹಿನ್ನೆಲೆಯಲ್ಲಿ ಸಂಸದ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು.
ಇದೀಗ ದೀರ್ಘಕಾಲದ ಬಳಿಕ ಪ್ರತಿಷ್ಠೆಯ ಕಣವಾಗಿದ್ದ ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿಎಸ್ ಉಗ್ರಪ್ಪ ಗೆಲುವು ಸಾಧಿಸುವ ಮೂಲಕ ಗಣಿನಾಡನ್ನು ಕೈವಶ ಮಾಡಿಕೊಂಡಿದೆ. ಈ ಮೂಲಕ ಬರೊಬ್ಬರಿ ಒಂದು ದಶಕದ ನಂತರ ಕಾಂಗ್ರೆಸ್'ಗೆ ಬಳ್ಳಾರಿಯಲ್ಲಿ ಭದ್ರವಾದ ನೆಲೆ ಕಂಡುಕೊಳ್ಳುವುದಕ್ಕೆ ಸಾಧ್ಯವಾಗಿದೆ.