ಬೆಂಗಳೂರು: ಕೊನೆಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚಾಮುಂಡೇಶ್ವರಿ ಕ್ಷೇತ್ರದಿಂದ ಮಾತ್ರ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಆ ಮೂಲಕ ಬಾದಾಮಿಯಿಂದ ಸ್ಪರ್ಧಿಸುತ್ತಾರೆ ಎನ್ನುವ ಎಲ್ಲ ಊಹಾಪೋಹಗಳಿಗೆ ತೆರೆಬಿದ್ದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿ ಸಮೀಕರಣದ ಲೆಕ್ಕಾಚಾರವನ್ನು ಇಟ್ಟುಕೊಂಡು ಚಾಮುಂಡೇಶ್ವರಿ ಕ್ಷೇತ್ರದ ಜೊತೆಗೆ ಬಾದಾಮಿಯಲ್ಲಿಯೂ ಸ್ಪರ್ಧಿಸುತ್ತಾರೆ ಎನ್ನವ ಸುದ್ದಿ ವ್ಯಾಪಕವಾಗಿ ಹರಡಿತ್ತು,ಆ ವಿಚಾರವಾಗಿ ಸ್ವತಃ ಸಿದ್ದರಾಮಯ್ಯ ನವರು ಬಾದಾಮಿಯ ಹಾಲಿ ಶಾಸಕ ಬಿ.ಬಿ.ಚಿಮ್ಮನಕಟ್ಟಿಯವರನ್ನು ಮತ್ತು ಆ ಭಾಗದ ನಾಯಕರನ್ನು ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದರು. ಇದಕ್ಕೆ ಪೂರಕವಾಗಿ ಕಾಂಗ್ರೆಸ್ ಹೈ ಕಮಾಂಡ್ ಕೂಡ ಸಮ್ಮತಿ ನೀಡಿತ್ತು. ಆದರೆ ಅಂತಿಮ ವೇಳೆಯಲ್ಲಿ ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿಯವರೊಂದಿಗೆ ಚರ್ಚಿಸಿ ಎಲ್ಲರ ಲೆಕ್ಕಾಚಾರವನ್ನು ಬುಡಮೇಲು ಮಾಡಿ ಕೇವಲ ಚಾಮುಂಡೇಶ್ವರಿ ಕ್ಷೇತ್ರದಿಂದ ಮಾತ್ರ ಸ್ಪರ್ಧಿಸುವ ಅಂತಿಮ ನಿರ್ಧಾರ ಕೈಕೊಂಡಿದ್ದಾರೆ.