ಹೊಸ ತಾಲ್ಲೂಕುಗಳ ಸೌಲಭ್ಯಕ್ಕೆ ಕ್ರಮ : ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ

ಶ್ರೀ ಎಂ.ಬಿ.ಪ್ರಕಾಶ್ ವರದಿಯ ಪ್ರಕಾರ ಹೊಸದಾಗಿ ರಚನೆಯಾದ ತಾಲ್ಲೂಕಿನಲ್ಲಿ ಕನಿಷ್ಟ 14 ಇಲಾಖೆಗಳು ಕಾರ್ಯನಿರ್ವಹಿಸಬೇಕಾಗುತ್ತದೆ.

Last Updated : Sep 20, 2018, 08:06 AM IST
ಹೊಸ ತಾಲ್ಲೂಕುಗಳ ಸೌಲಭ್ಯಕ್ಕೆ ಕ್ರಮ : ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ title=
File Image

ಬೆಂಗಳೂರು: ರಾಜ್ಯದಲ್ಲಿ ಈಗಾಗಲೇ ರಚನೆಯಾಗಿರುವ 50 ಹೊಸ ತಾಲ್ಲೂಕುಗಳಿಗೆ ವಿವಿಧ ಇಲಾಖೆಗಳ ಕಚೇರಿಯನ್ನು ಮಂಜೂರು ಮಾಡುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.  

ಬುಧವಾರ ಕಂದಾಯ ಇಲಾಖೆಯ ವಿವಿಧ ವಿಷಯಗಳ ಕುರಿತು ಅಧಿಕಾರಿಗಳ ಸಭೆಯಲ್ಲಿ ಚರ್ಚೆ ನಡೆಸಿದ ಸಿಎಂ ಕುಮಾರಸ್ವಾಮಿ, ಶ್ರೀ ಎಂ.ಬಿ.ಪ್ರಕಾಶ್ ವರದಿಯ ಪ್ರಕಾರ ಹೊಸದಾಗಿ ರಚನೆಯಾದ ತಾಲ್ಲೂಕಿನಲ್ಲಿ ಕನಿಷ್ಟ 14 ಇಲಾಖೆಗಳು ಕಾರ್ಯನಿರ್ವಹಿಸಬೇಕಾಗುತ್ತದೆ. ಹೊಸ ತಾಲ್ಲೂಕುಗಳಲ್ಲಿ ಉಳಿದ ಇಲಾಖೆಗಳ ತಾಲ್ಲೂಕು ಮಟ್ಟದ ಕಚೇರಿಗಳನ್ನು ಸ್ಥಾಪಿಸಲು ಸಹಮತಿ ನೀಡುವಂತೆ ಆರ್ಥಿಕ ಇಲಾಖೆಗೆ ಸಲ್ಲಿಸಿದ್ದ ಪ್ರಸ್ತಾವನೆಯ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಈ ಬಗ್ಗೆ ಆರ್ಥಿಕ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು. 

ಈ ಸಂದರ್ಭದಲ್ಲಿ ಹೊಸ ತಾಲ್ಲೂಕುಗಳಲ್ಲಿ ಮಿನಿ ವಿಧಾನಸೌಧ ನಿರ್ಮಾಣದ ಕುರಿತು ಸಹ ಚರ್ಚೆ ನಡೆಸಲಾಯಿತು. ಇದಲ್ಲದೆ ಹೊಸ ತಾಲ್ಲೂಕು ರಚನೆಯ ಬಗ್ಗೆ ಬಂದಿರುವ ಬೇಡಿಕೆಗಳಲ್ಲಿ ನಿಜವಾಗಿಯೂ ಅಗತ್ಯವಿರುವ ಸ್ಥಳವನ್ನು ಗುರುತಿಸುವಂತೆ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅವರಿಗೆ ತಿಳಿಸಿದರು. 

ಭೂ ಮಾಪನ ಇಲಾಖೆಯ ಕರ್ನಾಟಕ ಭೂ ಕಂದಾಯ ಕಾಯ್ದೆಯ 1964 ರ ಕಲಂ 94 (ಸಿ) ಅಡಿಯಲ್ಲಿ 26922 ಅರ್ಜಿಗಳನ್ನು ಹಾಗೂ ಮತ್ತು 94 (ಸಿ.ಸಿ) ಅಡಿಯಲ್ಲಿ  13971 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಸಾಮಾಜಿಕ ಭದ್ರತೆ ಪಿಂಚಣಿ ವಿತರಣೆಯಲ್ಲಿ  ವಿಳಂಬವಾಗುತ್ತಿರುವ ಕುರಿತು ಅಂಚೆ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. 

ರೈತರ ಆತ್ಮಹತ್ಯೆ ಪ್ರಕರಣದಲ್ಲಿ 2018ರ ಜೂನ್ ಅಂತ್ಯದವರೆಗೆ 35 ಪ್ರಕರಣಗಳಿಗೆ 5 ಲಕ್ಷ ರೂ. ಪರಿಹಾರ ನೀಡಲಾಗಿತ್ತು. 2018ರ ಆಗಸ್ಟ್ ಅಂತ್ಯಕ್ಕೆ ಈ ಪ್ರಕರಣಗಳ ವಿಲೇವಾರಿ ಚುರುಕುಗೊಂಡಿದ್ದು 114 ಪ್ರಕರಣಗಳಲ್ಲಿ 5 ಲಕ್ಷ ಪರಿಹಾರ ನೀಡಲಾಗಿದೆ. ರಾಜ್ಯದಲ್ಲಿ ಒಟ್ಟು 2742 ಕಂದಾಯ ಗ್ರಾಮಗಳನ್ನು ರಚಿಸಬೇಕಾಗಿದ್ದು, 1413 ಕಂದಾಯ ಗ್ರಾಮಗಳ ರಚನೆಗೆ ಪ್ರಾಥಮಿಕ ಅಧಿಸೂಚನೆ ನೀಡಲಾಗಿದ್ದು, 724 ಕಂದಾಯ ಗ್ರಾಮಗಳ ರಚನೆಗೆ ಅಧಿಸೂಚನೆ ಹೊರಡಿಸಲಾಗಿದೆ.  

ಇದಲ್ಲದೆ ಭೂಪರಿವರ್ತನೆ ಕಾಯ್ದೆಯನ್ನು ಸರಳಗೊಳಿಸಲು ಸೆಪ್ಟೆಂಬರ್ 17ರಂದು ಸುತ್ತೋಲೆ ಹೊರಡಿಸಲಾಗಿದೆ ಎಂದು ಸಚಿವ ಆರ್.ವಿ.ದೇಶಪಾಂಡೆ ಅವರು ಮುಖ್ಯಮಂತ್ರಿಗಳಿಗೆ ವಿವರಿಸಿದರು. ಸರಳೀಕರಣ ಪ್ರಕ್ರಿಯೆಯಲ್ಲಿ ಯಾವುದೇ ಲೋಪದೋಷವಿಲ್ಲದಂತೆ ಎಚ್ಚರವಹಿಸಲು ಮುಖ್ಯಮಂತ್ರಿಗಳು ಸೂಚಿಸಿದರು. 
ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ವಿವಿಧ ಐದು ಸೇವೆಗಳನ್ನು ಆನ್‍ಲೈನ್‍ನಲ್ಲಿ ಒದಗಿಸಲು ಸಿದ್ಧತೆ ನಡೆದಿದ್ದು, ಈ ಬಗ್ಗೆ ಕಾನೂನು ಇಲಾಖೆಯ ಸಲಹೆ ಪಡೆಯಲು ತೀರ್ಮಾನಿಸಲಾಯಿತು. 

ಸಭೆಯಲ್ಲಿ ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಡಾ||ಇ.ವಿ.ರಮಣರೆಡ್ಡಿ, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜಕುಮಾರ ಖತ್ರಿ , ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ(ವಿಪತ್ತು ನಿರ್ವಹಣೆ) ಗಂಗಾರಾಂ ಬಡೇರಿಯಾ, ಭೂ ಮಾಪನ ಇಲಾಖೆಯ ಆಯುಕ್ತ ಮುನೀಶ್ ಮೌದ್ಗಿಲ್,  ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಮಹಾಪರಿವೀಕ್ಷಕ ಡಾ|| ಕೆ.ವಿ.ತ್ರಿಲೋಕಚಂದ್ರ ಮತ್ತಿತರ ಹಿರಿಯ ಅಧಿಕಾರಿಗಳು ಹಾಜರಿದ್ದರು.

Trending News