ಪ್ರಧಾನಿ‌ ಮೋದಿ ಭೇಟಿ ಮಾಡಿದ ಸಿಎಂ ಯಡಿಯೂರಪ್ಪ

ದೆಹಲಿಯ ಸಂಸತ್ ಭವನದಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿಯಾದ ಬಿ.ಎಸ್. ಯಡಿಯೂರಪ್ಪ ಸುಮಾರು ಅರ್ಧ ಗಂಟೆಗಳ ಕಾಲ ಚರ್ಚೆ ನಡೆಸಿದರು.

Written by - Yashaswini V | Last Updated : Sep 18, 2020, 11:10 AM IST
  • ದೆಹಲಿಯ ಸಂಸತ್ ಭವನದಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿಯಾದ ಬಿ.ಎಸ್. ಯಡಿಯೂರಪ್ಪ ಸುಮಾರು ಅರ್ಧ ಗಂಟೆಗಳ ಕಾಲ ಚರ್ಚೆ ನಡೆಸಿದರು.
  • ಇದಕ್ಕೂ ಮುನ್ನ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 120 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ರಾಜ್ಯದ ರಾಯಭಾರಿ ಕಚೇರಿ ಎಂದೇ ಬಣ್ಣಿಸಲಾಗುವ ಕರ್ನಾಟಕ ಭವನ-1 "ಕಾವೇರಿ" ಕಟ್ಟಡದ ಪುನನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು
ಪ್ರಧಾನಿ‌ ಮೋದಿ ಭೇಟಿ ಮಾಡಿದ ಸಿಎಂ ಯಡಿಯೂರಪ್ಪ  title=
File Image

ನವದೆಹಲಿ: ಶುಕ್ರವಾರ ದೆಹಲಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yediyurappa) ಅವರು ರಾಜ್ಯದ ಅಭಿವೃದ್ಧಿ ಕುರಿತು ಚರ್ಚಿಸಿದರು.

ದೆಹಲಿಯ ಸಂಸತ್ ಭವನದಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿಯಾದ ಬಿ.ಎಸ್. ಯಡಿಯೂರಪ್ಪ ಸುಮಾರು ಅರ್ಧ ಗಂಟೆಗಳ ಕಾಲ ಚರ್ಚೆ ನಡೆಸಿದರು. ಈ ವೇಳೆ ರಾಜ್ಯಕ್ಕೆ ಜಿಎಸ್ ಟಿ (GST) ಪರಿಹಾರ ಪ್ರಮಾಣವನ್ನು ಹೆಚ್ಚಿಸುವಂತೆ ಹಾಗೂ ಇತರೆ ಬಾಕಿ ಹಣ ಬಿಡುಗಡೆ ಮಾಡುವಂತೆ ವಿನಂತಿಸಿಕೊಂಡರು.

ಇದಕ್ಕೂ ಮುನ್ನ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 120 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ರಾಜ್ಯದ ರಾಯಭಾರಿ ಕಚೇರಿ ಎಂದೇ ಬಣ್ಣಿಸಲಾಗುವ ಕರ್ನಾಟಕ ಭವನ-1 "ಕಾವೇರಿ" ಕಟ್ಟಡದ ಪುನನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಎರಡು ತಳ ಮಹಡಿಗಳು, ನೆಲ ಮಹಡಿ ಹಾಗೂ ಆರು ಮಹಡಿ ಒಳಗೊಂಡಂತೆ ಒಟ್ಟು ಒಂಭತ್ತು ಮಹಡಿಗಳ ಈ ಕಟ್ಟಡವನ್ನು ಬಾಲಾಜಿ ಕೃಪಾ ಪ್ರಾಜೆಕ್ಸ್ ಪ್ರೈವೇಟ್ ಲಿಮಿಟೆಡ್ ಅವರಿಗೆ ವಹಿಸಿದ್ದು ಮುಂದಿನ 24 ತಿಂಗಳಲ್ಲಿ ಕಟ್ಟಡದ ಕಾಮಗಾರಿಗಳು ಪೂರ್ಣಗೊಳ್ಳಲಿವೆ ಎಂದರು. 

ಪ್ರತಿಪಕ್ಷ ನಾಯಕರ ಆರೋಪ ತಳ್ಳಿಹಾಕಿದ ಮುಖ್ಯಮಂತ್ರಿ
ತಮ್ಮ ಪುತ್ರ ಬಿ ವೈ ವಿಜಯೇಂದ್ರ ಅವರನ್ನು ಸೂಪರ್ ಸಿಎಂ ಎಂದು ಬಣ್ಣಿಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರ ಆರೋಪವನ್ನು ತಳ್ಳಿ ಹಾಕಿದ ಮುಖ್ಯಮಂತ್ರಿ ಯಡಿಯೂರಪ್ಪ, ವಿಜಯೇಂದ್ರ ಭಾರತೀಯ ಜನತಾ ಪಕ್ಷದ ರಾಜ್ಯ ಘಟಕದಲ್ಲಿ ಉಪಾಧ್ಯಕ್ಷರಾಗಿ ರಾಜ್ಯದಲ್ಲಿ ಪಕ್ಷವನ್ನು ಸಂಘಟಿಸುವಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆಯೇ ಹೊರತು, ರಾಜ್ಯ ಸರ್ಕಾರದ ಯಾವುದೇ ಚಟುವಟಿಕೆಗಳಲ್ಲಿ ಹಸ್ತಕ್ಷೇಪ ಮಾಡುತಿಲ್ಲ ಎಂದು ಸ್ಪಷ್ಟಪಡಿಸಿದರು. 

ಊಹಾಪೋಹ ಬೇಡ !
ಜಾತ್ಯಾತೀತ ಜನತಾ ದಳದ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ಹಾಗೂ ತಮ್ಮ ನಡುವಿನ ಇತ್ತೀಚಿನ ಭೇಟಿ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ, ಕುಮಾರಸ್ವಾಮಿ ಅವರು ಪ್ರತಿಪಕ್ಷದ ನಾಯಕರಲ್ಲೊಬ್ಬರು. ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಚರ್ಚಿಸಲು ಆಗಮಿಸಿದ್ದರು. ಇಂತಹ ವಿಷಯಗಳಲ್ಲಿ ಅನಗತ್ಯ ಊಹಾಪೋಹ ಬೇಡ ಎಂದು ಉತ್ತರಿಸಿದರು. 

'ಕಾವೇರಿ'ಯ ಹಿನ್ನೆಲೆ !
ನವದೆಹಲಿಯ ಚಾಣಕ್ಯಪುರಿಯಲ್ಲಿರುವ ಕೌಟಿಲ್ಯ ಮಾರ್ಗದ ಸಂಖ್ಯೆ 10ರಲ್ಲಿ ಮಾಜಿ ಮುಖ್ಯಮಂತ್ರಿ ನಿಜಲಿಂಗಪ್ಪ ಅವರ ಪರಿಕಲ್ಪನೆಯಲ್ಲಿ ರಾಜ್ಯದ ಗಣ್ಯಾತಿಗಣ್ಯರ ವಾಸ್ತವ್ಯಕ್ಕೆ ಎಂದೇ ಕರ್ನಾಟಕ ಭವನ ಕಟ್ಟಡವು 1967ರಲ್ಲಿ ನಿರ್ಮಾಣಗೊಂಡಿತ್ತು. ಐವತ್ತು ವರ್ಷಗಳಿಗೂ ಹೆಚ್ಚು ಕಾಲದ ಈ ಕಟ್ಟಡದಲ್ಲಿ ಕಾಲಕಾಲಕ್ಕೆ  ಹಲವು ಮಾರ್ಪಾಡುಗಳನ್ನು ಮಾಡಲಾಗಿದೆ. ಹವಾಮಾನ ವೈಪರೀತ್ಯಗಳಿಂದ ಕಟ್ಟಡವು ಶಿಥಿಲಗೊಳ್ಳುತ್ತಿರುವುದನ್ನು ಪರಿವೀಕ್ಷಿಸಿದ ಹಳೆಯ ಕಟ್ಟಡವನ್ನು ಕೆಡವಿ, ಅದೇ ಸ್ಥಳದಲ್ಲಿ ಹೊಸ ಕಟ್ಟಡವನ್ನು ನಿರ್ಮಿಸುವುದು ಸೂಕ್ತ ಎಂದು 2018ರ ಫೆಬ್ರವರಿ 1ರಂದು ಮೆ: ಸಿವಿಲ್ ಏಡ್ ಟೆಕ್ನೋ ಕ್ಲಿನಿಕ್ ತಾಂತ್ರಿಕ ಸಂಸ್ಥೆ ನೀಡಿದ ತಾಂತ್ರಿಕ ಶಿಫಾರಸ್ಸನ್ನು ಅಂಗೀಕರಿಸಿದ ರಾಜ್ಯ ಸರ್ಕಾರ ಕಟ್ಟಡ ಪುನನಿರ್ಮಾಣ ಕಾಮಗಾರಿಗಳಿಗೆ 87 ಕೋಟಿ ರೂಪಾಯಿಗಳಿಗೆ ಆಡಳಿತಾತ್ಮಕ ಅನುಮೋದನೆ ಹಾಗೂ 81 ಕೋಟಿ ರೂಪಾಯಿ ತಾಂತ್ರಿಕ ಮಂಜೂರಾತಿ ನೀಡಿದೆ.

ಸಿಎಂ ಬಿಎಸ್ವೈ ಭೇಟಿಯಾದ ಮಾಜಿ ಸಿಎಂ ಎಚ್ಡಿಕೆ: ಕುತೂಹಲ ಮೂಡಿಸಿರುವ ಹಾಲಿ-ಮಾಜಿಗಳ ಭೇಟಿ

ಕರ್ನಾಟಕ ಭವನದಲ್ಲಿ ಕಚೇರಿಗಳ ಉಪಯೋಗಕ್ಕಾಗಿ ನಿಗದಿಪಡಿಸಿದ ಕಚೇರಿ ವಿಸ್ತೀರ್ಣವನ್ನು ಮಿತಗೊಳಿಸಿ, ಈ ಸ್ಥಳವನ್ನು ಬಳಸಿಕೊಂಡು ಗಣ್ಯರ ಐಷಾರಾಮಿ ಕೊಠಡಿಗಳ ಸಂಖ್ಯೆಯನ್ನು 14 ರಿಂದ 31ಕ್ಕೆ ಹಾಗೂ ಗಣ್ಯರ ಕೊಠಡಿಗಳ ಸಂಖ್ಯೆಯನ್ನು 12 ರಿಂದ 15ಕ್ಕೆ ಒಟ್ಟಾರೆ ಗಣ್ಯಾತಿಗಣ್ಯರ ಕೊಠಡಿಗಳನ್ನು 30 ರಿಂದ 48ಕ್ಕೆ ಹೆಚ್ಚಿಸಲಾಗಿದೆ.  

ಭೂ ಸುಧಾರಣಾ ಕಾಯಿದೆ ತಿದ್ದುಪಡಿ ವಿರೋಧಿಸಿ ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಪತ್ರ

'ಕಾವೇರಿ'ಯಲ್ಲಿ ಏನೇನಿದೆ ?
ಕರ್ನಾಟಕ ಭವನ-1 'ಕಾವೇರಿ' ಕಟ್ಟಡದ ಕೆಳತಳ ( ಲೋವರ್ ಬೇಸ್‍ಮೆಂಟ್ ) ಮಹಡಿ ಹಾಗೂ   ಮೇಲ್ತಳ ( ಅಪ್ಪರ್ ಬೇಸ್‍ಮೆಂಟ್ ) ಮಹಡಿಯಲ್ಲಿ ತಲಾ 2335  ಚದುರ ಮೀಟರ್ ಪ್ರದೇಶವಿದೆ.  ಕೆಳತಳ ಮಹಡಿಯಲ್ಲಿ ನಾಲ್ಕು ಚಕ್ರಗಳ 151 ವಾಹನಗಳು ಹಾಗೂ 107 ದ್ವಿ-ಚಕ್ರ ವಾಹನಗಳ ನಿಲುಗಡೆಗೆ ಅವಕಾಶವಿರುತ್ತದೆ. ಮೇಲ್ತಳ ಮಹಡಿಯಲ್ಲಿ ವಾಹನ ಚಾಲಕರ ಕೊಠಡಿ, ಭ್ರದ್ರತಾ ಸಿಬ್ಬಂದಿಯ ವಿಶ್ರಾಂತಿ ಕೊಠಡಿ, ಬಟ್ಟೆ ಶುಚಿಗೊಳಿಸಿ ಇಸ್ತ್ರಿ ಮಾಡುವ 'ಲಾಂಡ್ರಿ' ಕೂಡಾ ಇರುತ್ತದೆ.  
ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಖಾತೆಗಳ ಹೊತ್ತ ಉಪ ಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದಗೌಡ, ಕೇಂದ್ರ ಸಂಸದೀಯ ವ್ಯಹಾರಗಳು, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ, ಸಂಸದರಾದ ಅಣ್ಣಾ ಸಾಹೇಬ್ ಜೊಲ್ಲೆ, ಪಿ.ಸಿ. ಗದ್ದೀಗೌಡರ್, ಉಮೇಶ್ ಜಾಧವ್, ಭಗವಂತ ಖೂಬಾ, ಕರಡಿ ಸಂಗಣ್ಣ, ವೈ. ದೇವೇಂದ್ರಪ್ಪ, ಜಿ ಎಂ ಸಿದ್ದೇಶ್ವರ್, ಬಿ.ವೈ. ರಾಘವೇಂದ್ರ, ಎ.‌ ನಾರಾಯಣಸ್ವಾಮಿ, ಜಿ.ಎಸ್. ಬಸವರಾಜು,  ಪಿ.ಸಿ. ಮೊಹನ್, ನವದೆಹಲಿಯಲ್ಲಿನ ರಾಜ್ಯ ಸರ್ಕಾರದ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ್ ಮತ್ತಿತರರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

Trending News