ಉಪ‌ ಚುನಾವಣೆ ಗೆದ್ದರೂ ಕುರ್ಚಿ ಉಳಿಯುವ ಬಗ್ಗೆ ಸಿಎಂಗೆ ಅನುಮಾನ, ಬೆಂಬಲಿಗರ ಬ್ಯಾಟಿಂಗ್

ಬಿಜೆಪಿಯಲ್ಲಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಯುಗ ಆರಂಭವಾದ ಬಳಿಕ ದೆಹಲಿ ಹೊರತುಪಡಿಸಿ ಯಾವ ರಾಜ್ಯದಲ್ಲೂ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಯಾರನ್ನು ಘೋಷಿಸಿರಲಿಲ್ಲ ಅಥವಾ ಬಿಂಬಿಸಿರಲಿಲ್ಲ.

Last Updated : Nov 11, 2020, 06:43 PM IST
  • ದೀಪಾವಳಿ ಕಳೆದ ಮೇಲೆ ರಾಜ್ಯ ರಾಜಕಾರಣದಲ್ಲಿ, ಅದರಲ್ಲೂ ಮುಖ್ಯಮಂತ್ರಿ ಬದಲಾವಣೆ ವಿಚಾರದಲ್ಲಿ ಬಹಳಷ್ಟು ಬೆಳವಣಿಗೆಗಳಾಗಲಿವೆ.
  • ದೀಪಾವಳಿ ಯಾರಿಗೆ ಬೆಳಕು ತರತ್ತೋ‌ ಮತ್ಯಾರ ಪಾಲಿಗೆ ಕತ್ತಲಾಗುತ್ತೋ ಎಂಬುದೇ ಕುತೂಹಲಕಾರಿ ಸಂಗತಿ.
ಉಪ‌ ಚುನಾವಣೆ ಗೆದ್ದರೂ ಕುರ್ಚಿ ಉಳಿಯುವ ಬಗ್ಗೆ ಸಿಎಂಗೆ ಅನುಮಾನ, ಬೆಂಬಲಿಗರ ಬ್ಯಾಟಿಂಗ್ title=
File Image

ಬೆಂಗಳೂರು: ಬೆಂಗಳೂರಿನ ರಾಜರಾಜೇಶ್ವರಿ ನಗರ ಮತ್ತು ತುಮಕೂರು ಜಿಲ್ಲೆಯ ಶಿರಾ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ವಿಜಯ ಸಾಧಿಸಿದ್ದರೂ, ಅದರಲ್ಲೂ ಬಿಜೆಪಿ ಎಂದೂ ಗೆದ್ದಿರದ ಶಿರಾ ಕ್ಷೇತ್ರದಲ್ಲಿ ತಮ್ಮ ಪುತ್ರನೇ ಮುಂಚೂಣಿಯಲ್ಲಿ ‌ನಿಂತು ಪಕ್ಷವನ್ನು ಗೆಲ್ಲಿಸಿಕೊಂಡು ಬಂದಿದ್ದರೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yediyurappa) ಅವರಿಗೆ 'ಕುರ್ಚಿಯ ಅಭದ್ರತೆ' ಕಾಡುತ್ತಿದೆ ಎಂದು ಹೇಳಲಾಗುತ್ತಿದೆ.

ಬಿಜೆಪಿಯಲ್ಲಿ ನರೇಂದ್ರ ಮೋದಿ (Narendra Modi) ಮತ್ತು ಅಮಿತ್ ಶಾ (Amit Shah) ಯುಗ ಆರಂಭವಾದ ಬಳಿಕ ದೆಹಲಿ ಹೊರತುಪಡಿಸಿ ಯಾವ ರಾಜ್ಯದಲ್ಲೂ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಯಾರನ್ನು ಘೋಷಿಸಿರಲಿಲ್ಲ ಅಥವಾ ಬಿಂಬಿಸಿರಲಿಲ್ಲ. ಆದರೆ ಕರ್ನಾಟಕದಲ್ಲಿ 2018ರ ರಾಜ್ಯ ವಿಧಾನಸಭಾ ಚುನಾವಣೆ ಪ್ರಚಾರದ ವೇಳೆ ಅಂದಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಹಾಲಿ ಕೇಂದ್ರ ಗೃಹ‌ ಸಚಿವ ಅಮಿತ್ ಶಾ ಬಹಿರಂಗವಾಗಿ 'ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಎಂದು ಷರಾ ಬರೆದಿದ್ದರು. ಸರ್ಕಾರ ಬಂದಿದ್ದರೆ ಏನಾಗಿರುತ್ತಿತ್ತೋ ಯಡಿಯೂರಪ್ಪ ಅವರಿಗೆ ಆ ಅದೃಷ್ಟ ಇರಲಿಲ್ಲ.

ಆ ನಂತರದಲ್ಲಿ 'ಆಪರೇಷನ್ ಕಮಲ' (Operation Kamala) ನಡೆಸಿ ಸರ್ಕಾರ ತಂದ ಯಡಿಯೂರಪ್ಪ ಅವರ ಬಗ್ಗೆ ಬಿಜೆಪಿ ನಾಯಕರಿಗೆ ಹಿಂದಿದ್ದ 'ವಿಶ್ವಾಸ' ಉಳಿದಿಲ್ಲ. ಕೇಂದ್ರದ ನಾಯಕರು ಯಡಿಯೂರಪ್ಪ ಅವಧಿ  ಪೂರೈಸಲಿದ್ದಾರೆ ಎಂಬ ಅಭಯ ನೀಡಿಲ್ಲ. ರಾಜ್ಯದ ಕೆಲ ನಾಯಕರು ಆಗಾಗ ಮುಖ್ಯಮಂತ್ರಿ ಬದಲಾವಣೆ ವಿಚಾರವನ್ನು ಚರ್ಚೆಯ ಮುನ್ನಲೆಗೆ ತರುತ್ತಾರೆ. ಮುಖ್ಯಮಂತ್ರಿ ಬದಲಾವಣೆ ಪದೇ ಪದೇ ಚರ್ಚೆ ಆಗುತ್ತಿರುವುದರಿಂದ ಸಹಜವಾಗಿ ಯಡಿಯೂರಪ್ಪ ಕೂಡ ಅಧೀರರಾಗಿದ್ದಾರೆ ಎನ್ನಲಾಗುತ್ತಿದೆ.

ಸಚಿವ ಸಂಪುಟ ಮೇಜರ್ ಸರ್ಜರಿಗೆ ಸಿಎಂ ತಯಾರಿ: ನಾಲ್ವರು ಹಾಲಿ ಸಚಿವರಿಗೆ ಗೆಟ್ ಪಾಸ್..!?

ಇದೇ ಕಾರಣಕ್ಕೆ ರಾಜರಾಜೇಶ್ವರಿ ನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಿ ಕುರ್ಚಿ ಭದ್ರ ಮಾಡಿಕೊಳ್ಳಲು ಯತ್ನಿಸಿದರು. ರಾಜರಾಜೇಶ್ವರಿ ಕ್ಷೇತ್ರದ ಗೆಲುವು ಮುನಿರತ್ನ ಅವರ ಸ್ವಸಾಮರ್ಥ್ಯದ ಫಲ ಎಂಬುದರಲ್ಲಿ ನಿರ್ವಿವಾದ. ಇದು ಹೀಗೆ ಆಗುತ್ತೆ ಎಂದು ಶಿರಾ ಕ್ಷೇತ್ರದ ಉಸ್ತುವಾರಿಯನ್ನು ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರನಿಗೆ ನೀಡಿದರು. ಶಿರಾ ಕ್ಷೇತ್ರಕ್ಕೆ ಮಗನನ್ನು ಕಳಿಸುವ ಹಿಂದೆ ಇನ್ನೊಂದು ಲೆಕ್ಕಾಚಾರ ಇತ್ತು. ಕಳೆದ ಉಪ ಚುನಾವಣೆ ಸಂದರ್ಭದಲ್ಲಿ ಕೃಷ್ಣರಾಜ ಪೇಟೆಯಲ್ಲಿ ಬಿಜೆಪಿ ಗೆಲ್ಲಿಸಿದ ಬಳಿಕ ಖುದ್ದು ಅಮಿತ್ ಶಾ ಅವರೇ ವಿಜಯೇಂದ್ರನನ್ನು ಅಭಿನಂದಿಸಿದ್ದರು. ಈಗ ಶಿರಾ ಕ್ಷೇತ್ರದ ಶಿಕಾರಿಯಲ್ಲೂ ಯಶಸ್ವಿಯಾದರೆ ಮತ್ತೊಮ್ಮೆ ಹೈಕಮಾಂಡ್ ಮನ ಗೆಲ್ಲಬಹುದು ಎಂಬುದಾಗಿತ್ತು.

ಮಗನನ್ನು ಶಿರಾಕ್ಕೆ ಕಳಿಸುವ ಯಡಿಯೂರಪ್ಪ ಅವರ ಲೆಕ್ಕಾಚಾರ ಫಲಿಸಿದೆ. ಆದರೆ ಹೈಕಮಾಂಡಿನಿಂದ ನಿರೀಕ್ಷಿತ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಜೊತೆಗೆ ಇದೇ ವೇಳೆ ಲಿಂಗಾಯತ ಸಮುದಾಯದ ಹಿರಿಯ ಶಾಸಕರಾಗಿರುವ ಬಸವನಗೌಡ ಪಾಟೀಲ್ ಯತ್ನಾಳ್ ಮುಖ್ಯಮಂತ್ರಿ ಬದಲಾವಣೆ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಇದಲ್ಲದೆ ತೆರೆಯ ಹಿಂದೆ ಬಹಳಷ್ಟು ಮಂದಿ ಯಡಿಯೂರಪ್ಪ ಅವರನ್ನು ಕೆಳಗಿಳಿಸಲು ರಣತಂತ್ರ ರೂಪಿಸುತ್ತಿದ್ದಾರೆ. 

#ಉತ್ತರಕೊಡಿ_ಬಿಎಸ್‌ವೈ : ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸರಣಿ ಟ್ವೀಟ್

ಉಪ ಚುನಾವಣೆಯ ಗೆಲುವಿನ ಬಳಿಕವೂ ತಮ್ಮ ವಿರುದ್ಧ ಷಡ್ಯಂತ್ರ ಮುಂದುವರೆದಿದೆ ಎಂಬುದನ್ನು ಅರಿತ ಯಡಿಯೂರಪ್ಪ ಈಗ ಬೆಂಬಲಿಗರ ಮೂಲಕ ಬೇರೆಯದೇ ಆಟ ಆರಂಭಿಸಿದ್ದಾರೆ ಎನ್ನಲಾಗಿದೆ. ಯಡಿಯೂರಪ್ಪ ವಿರುದ್ಧ ಅಸಮಾಧಾನಗೊಂಡಿರುವ ಮುರುಗೇಶ್ ನಿರಾಣಿ, ರಾಜೂಗೌಡ, ಶಂಕರಗೌಡ ಪಾಟೀಲ್ ಮುನೇನಕೊಪ್ಪ ಅವರನ್ನು ಸಮಾಧಾನ ಪಡಿಸಲು ತಮ್ಮ ಬೆಂಬಲಿಗ ರೇಣುಕಾಚಾರ್ಯ ಅವರನ್ನು ಕಳಿಸಿದ್ದಾರೆ ಎನ್ನಲಾಗುತ್ತಿದೆ.

ಸಚಿವ ರಮೇಶ್ ಜಾರಕಿಹೊಳಿ ಅವರ ಮನೆಯಲ್ಲಿ ಜಾರಕಿಹೊಳಿಯೂ ಸೇರಿದಂತೆ ಮುರುಗೇಶ್ ನಿರಾಣಿ, ರಾಜೂಗೌಡ, ಶಂಕರಗೌಡ ಪಾಟೀಲ್ ಮುನೇನಕೊಪ್ಪ ಅವರನ್ನು ಭೇಟಿ ಮಾಡಿದ ರೇಣುಕಾಚಾರ್ಯ 'ಯಡಿಯೂರಪ್ಪ ಹಠಾವೋ' ಅಭಿಯಾನ ಕೈಬಿಡಿ ಎಂದು ಕೈಮುಗಿದು ಕೇಳಿಕೊಂಡಿದ್ದಾರೆ. ಅಲ್ಲದೆ ಸಿ.ಪಿ. ಯೋಗೇಶ್ವರ್ ಅವರನ್ನು ಮಂತ್ರಿ ಮಾಡಲು ಪ್ರಯತ್ನಿಸುತ್ತಿರುವ ರಮೇಶ್ ಜಾರಕಿಹೊಳಿಗೆ 'ಯಡಿಯೂರಪ್ಪ ಅವರನ್ನು ಕೆಳಗಿಳಿಸಲು ಷಡ್ಯಂತ್ರ ರೂಪಿಸುತ್ತಿರುವವರೊಂದಿಗೆ ಕೈ ಜೋಡಿಸಿರುವ ಸಿ.ಪಿ. ಯೋಗೇಶ್ವರ್ ಪರ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಬೇಡಿ' ಎಂದು ಬೇಡಿಕೊಂಡಿದ್ದಾರೆ. ಜೊತೆಗೆ ಬಹಿರಂಗವಾಗಿ ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕಿಡಿಕಾರಿದ್ದಾರೆ.

ಸಂಪುಟ ವಿಸ್ತರಣೆ ; ಮುಖ್ಯಮಂತ್ರಿ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ನಾವು ಬದ್ಧ - ಸಚಿವ ರಮೇಶ್ ಜಾರಕಿಹೊಳಿ

'ಮುಂದಿದೆ ಮಾರಿ ಹಬ್ಬ' ಎನ್ನುತ್ತಾರಲ್ಲಾ ಹಾಗೆ, ದೀಪಾವಳಿ ಕಳೆದ ಮೇಲೆ ರಾಜ್ಯ ರಾಜಕಾರಣದಲ್ಲಿ, ಅದರಲ್ಲೂ ಮುಖ್ಯಮಂತ್ರಿ ಬದಲಾವಣೆ ವಿಚಾರದಲ್ಲಿ ಬಹಳಷ್ಟು ಬೆಳವಣಿಗೆಗಳಾಗಲಿವೆ. ಇದೇ ಕಾರಣಕ್ಕೆ ಈಗ ಯಡಿಯೂರಪ್ಪ ಕೂಡ ಆದಷ್ಟು ಬೇಗ ಸಚಿವ ಸಂಪುಟ ಪುನ್ರರಚನೆ ಅಥವಾ ವಿಸ್ತರಣೆ ಮಾಡುತ್ತೇನೆ ಎಂದಿದ್ದಾರೆ. ಅವರು ಏನೇ ಹೇಳಿದರೂ ದೀಪಾವಳಿ ಬಳಿಕ ಬೇರೆ ಏನೇನೋ ಆಗುವುದು ಮಾತ್ರ ತಪ್ಪಲ್ಲ ಎನ್ನಲಾಗುತ್ತಿದೆ. ದೀಪಾವಳಿ ಯಾರಿಗೆ ಬೆಳಕು ತರತ್ತೋ‌ ಮತ್ಯಾರ ಪಾಲಿಗೆ ಕತ್ತಲಾಗುತ್ತೋ ಎಂಬುದೇ ಕುತೂಹಲಕಾರಿ ಸಂಗತಿ.

Trending News