ಮಂಗಳೂರು : ಭಾರೀ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 73 ರ ಚಾರ್ಮಾಡಿ ಘಾಟ್ ಭಾಗದಲ್ಲಿ ಸಂಭವಿಸಿದ ಗುಡ್ಡ ಕುಸಿತ ತೆರವು ಕಾರ್ಯಾಚರಣೆ ಭರದಿಂದ ಸಾಗಿದ್ದು, ವಾಹನ ಸಂಚಾರವನ್ನು ಒಂದು ದಿನ (ಆ.9 ರ ಮಧ್ಯರಾತ್ರಿ) ವರೆಗೆ ವಿಸ್ತರಣೆ ಮಾಡಲಾಗಿದೆ.
ಚಾರ್ಮಾಡಿ ಘಾಟ್ ಭಾಗದಲ್ಲಿ ಆಗಸ್ಟ್ 6 ರಂದು ಬಿರುಗಾಳಿ ಸಹಿತ ಸುರಿದ ಭಾರೀ ಮಳೆಗೆ ಗುಡ್ಡ ಕುಸಿದಿತ್ತು. ಈ ಹಿನ್ನೆಲೆಯಲ್ಲಿ ಆ. 7 ರಂದು ಬೆಳಗ್ಗೆ 6 ಗಂಟೆಯಿಂದ ಆ.8 ರಂದು ಮಧ್ಯರಾತ್ರಿ 12 ಗಂಟೆಯವರೆಗೆ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಎಲ್ಲ ರೀತಿಯ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿತ್ತು.
ಆದರೆ, ಇನ್ನೂ ತೆರವು ಕಾರ್ಯಾಚರಣೆ ಪೂರ್ಣಗೊಳ್ಳದ ಕಾರಣ ರಸ್ತೆ ಸಂಚಾರ ನಿಷೇಧವನ್ನು ಆ. 9 ರ ಮಧ್ಯರಾತ್ರಿ 12 ಗಂಟೆ ತನಕ ವಿಸ್ತರಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಚಾರ್ಮಾಡಿ ಘಾಟಿಯಲ್ಲಿ ಐದು ಜೆಸಿಬಿ ಹಾಗೂ ಹಿಟಾಚಿಗಳಿಂದ ಮಣ್ಣು ತೆರವುಗೊಳಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಗುರುವಾರ ಮಳೆ ಕಡಿಮೆಯಾಗಿದ್ದರಿಂದ ಕಾಮಗಾರಿ ವೇಗ ಪಡೆದಿದ್ದು, ಕೆಲ ಪ್ರದೇಶಗಳಲ್ಲಿ ಮಣ್ಣು ತೆಗೆಯುವ ಸಂದರ್ಭ ಮತ್ತೆ ಕುಸಿತವಾಗುತ್ತಿದೆ. ಚಾರ್ಮಾಡಿಯ ಮೇಲಿನ ಭಾಗದಲ್ಲಿರುವ ಸಕಲೇಶಪುರ ವ್ಯಾಪ್ತಿಯಲ್ಲಿ ಭಾರಿ ಗಾತ್ರದಲ್ಲಿ ಮಣ್ಣು ಕುಸಿಯುವ ಲಕ್ಷಣಗಳು ಕಂಡು ಬಂದಿದೆ.