ಹುಬ್ಬಳ್ಳಿ: ಡಾಲರ್ ಎದುರು ರುಉಪಾಯಿ ಮೌಲ್ಯ ಕುಸಿಯಲು ಕೇಂದ್ರ ಸರ್ಕಾರದ ತಪ್ಪು ನಿರ್ಧಾರಗಳೇ ಕಾರಣ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಜಿಡಿಪಿ ರೇಟ್ 8.2 ಇದೆ ಎಂದು ಹೇಳಿಕೊಳ್ಳುತ್ತಿದೆ. ಆದರೆ ಅವರೇ ಮಾಡಿರುವ ಸಮೀಕ್ಷೆಯಲ್ಲಿ 7.2 ಎಂದು ದಾಖಲಾಗಿದೆ. ಕಾಂಗ್ರೆಸ್ ಸರ್ಕಾರದ ಅಧಿಕಾರಾವಧಿಯಲ್ಲಿ ಕಚ್ಛಾ ತೈಲದ ಬೆಲೆ ಜಾಸ್ತಿ ಇದ್ದರೂ ಸಹ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಿಸಿರಲಿಲ್ಲ. ಈಗ ಡೀಸೆಲ್ ಬೆಲೆಯೇ 70ರೂ.ಗಳಿಗಿಂತಲೂ ಹೆಚ್ಚಾಗಿದೆ. ಇದರಿಂದ ಜನತೆಗೂ ತೊಂದರೆಯಾಗಿದೆ ಎಂದು ಖರ್ಗೆ ವಾಗ್ದಾಳಿ ನಡೆಸಿದರು.
ಮುಂದುವರೆದು ಮಾತನಾಡಿದ ಅವರು, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ 2 ಕೋಟಿ ನಿರುದ್ಯೋಗಿಗಳಿಗೆ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿತ್ತು. ಆದರೆ ಇದುವರೆಗೂ ಅದು ಭರವಸೆಯಾಗಿಯೇ ಉಳಿದಿದೆ. ಅಲ್ಲದೆ ತಪ್ಪು ಆರ್ಥಿಕ ನೀತಿಯಿಂದ ಮನಬಂದಂತೆ ಹಣ ವ್ಯಯಿಸುತ್ತಿರುವ ಕೇಂದ್ರ ಸರ್ಕಾರ ದೇಶವನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಹಾಳು ಮಾಡುತ್ತಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.