ಬೆಂಗಳೂರು : ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಕೊಲೆಗೆ ಸುಪಾರಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಕರ್ತ ರವಿ ಬೆಳಗೆರೆ ವಿರುದ್ಧ ಸಿಸಿಬಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ಶಶಿಧರ್ ಮುಂಡೆವಾಡಿ ಹಾಗೂ ವಿಜು ಬಡಿಗೇರ್ ಜೊತೆ ರವಿ ಬೆಳಗೆರೆ ನಿರಂತರ ಫೋನ್ ಸಂಭಾಷಣೆ ನಡೆಸಿದ್ದು ತನಿಖೆಯಲ್ಲಿ ಧೃಡಪಟ್ಟಿರುವ ಹಿನ್ನೆಲೆಯಲ್ಲಿ 1 ನೇ ಎಸಿಎಂಎಂ ನ್ಯಾಯಾಲಯದಲ್ಲಿ ತನಿಖೆಯ ಪ್ರಮುಖ ಅಂಶಗೊಳನ್ನೊಳಗೊಂಡ ಚಾರ್ಜ್ಶೀಟ್ ಅನ್ನು ಸಿಸಿಬಿ ಪೊಲೀಸರು ಸೋಮವಾರ ಸಲ್ಲಿಸಿದ್ದಾರೆ.
ಸುಮಾರು 500 ಪುಟಗಳ ಚಾರ್ಜ್ ಶೀಟ್ನಲ್ಲಿ ಶಶಿಧರ್ ಮುಂಡೆವಾಡಿಯನ್ನ ಎ1 ಆರೋಪಿಯಾಗಿ ಮತ್ತು ಎ2 ಆರೋಪಿಯಾಗಿ ರವಿ ಬೆಳಗೆರೆ, ಎ3 ಆರೋಪಿಯಾಗಿ ವಿಜು ಬಡಿಗೇರ್ ಹೆಸರನ್ನ ಸಿಸಿಬಿ ಪೊಲೀಸರು ದಾಖಲಿಸಿದ್ದಾರೆ. ಅಷ್ಟೇ ಅಲ್ಲದೆ, ರವಿ ಬೆಳಗೆರೆ ಅವರು ಆರೋಪಿಗಳನ್ನು ಎಲ್ಲೆಲ್ಲಿ ಭೇಟಿ ಮಾಡಿದ್ದಾರೆ, ಅವರ ಕಾಲ್ ರೆಕಾರ್ಡ್ಸ್ ಎಲ್ಲವೂ ಲಭ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪತ್ರಕರ್ತ ರವಿ ಬೆಳಗೆರೆ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿ
ಇಷ್ಟೆ ಅಲ್ಲದೇ ಸುನೀಲ್ ಸುಪಾರಿಗೆ ರವಿ ಬೆಳೆಗೆರೆಗೆ ಸೇರಿದ ಪಿಸ್ತೂಲ್ ಬಳಸಿರುವ ವಿಚಾರವನ್ನೂ ಚಾರ್ಜ್ಶೀಟ್ನಲ್ಲಿ ಪ್ರಸ್ತಾಪಿಸಲಾಗಿದ್ದು, ಪಿಸ್ತೂಲ್ ನ ಪರಿಸ್ಥಿತಿ ಬಗ್ಗೆ ತಿಳಿಯಲು ಅದನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ರವಿ ಬೆಳಗೆರೆಗೆ ಎರಡು ಮುಖ
ಈ ಕುರಿತು ಪ್ರತಿಕ್ರಿಯಿಸಿರುವ ಸುನಿಲ್ ಹೆಗ್ಗರವಳ್ಳಿ, ರವಿಬೆಳಗೆರೆ ತಪ್ಪು ಮಾಡಿರುವುದು ಸಾಕ್ಷಿಗಳಿಂದ ಸಾಬೀತಾಗಿದೆ. ರವಿ ಬೆಳಗೆರೆಗೆ ಎರಡು ಮುಖವಿದ್ದು, ನಾಟಕೀಯ ಜೀವನ ಮಾಡುತ್ತಿದ್ದಾರೆ. ಜೊತೆಯಲ್ಲಿದ್ದುಕೊಂಡೇ ನನ್ನ ಸುಪಾರಿಗೆ ಹೊಂಚುಹಾಕಿದ್ದರು. ಇಲ್ಲದಿದ್ದರೆ ನನ್ನನ್ನು ಎರಡನೇ ಬಾರಿ ಕೆಲಸಕ್ಕೆ ಕರೆಯುತ್ತಿರಲಿಲ್ಲ. ನಾನು ಈ ಪ್ರಕರಣದಿಂದ ಖಂಡಿತ ಹಿಂದಕ್ಕೆ ಸರಿಯುವುದಿಲ್ಲ. ವಿಶೇಷ ಅಭಿಯೋಜಕರು ಬೇಕು ಎಂದು ಮನವಿ ಮಾಡಿರುವುದಾಗಿ ಸುನಿಲ್ ಹೇಳಿದ್ದಾರೆ.