ಬೆಂಗಳೂರು : ಇನ್ನೇನು ಕೆಲವೇ ತಿಂಗಳಲ್ಲಿ ಉದ್ಯಾನನಗರಿಗೆ ಎಲೆಕ್ರಿಕ್ ಬಸ್ ಗಳ ಭಾಗ್ಯ ದೊರೆಯಲಿದೆ. ಬೆಂಗಳೂರು ಮಹಾನಗರ ಸಾರಿಗೆ ನಿಗಮ(ಬಿಎಂಟಿಸಿ) ಗುತ್ತಿಗೆ ಆಧಾರದಲ್ಲಿ 150 ಎಲೆಕ್ಟ್ರಿಕ್ ಬಸ್ ಪಡೆಯಲು ಟೆಂಡರ್ ಆಹ್ವಾನಿಸಿದೆ.
ವರದಿಗಳ ಪ್ರಕಾರ, ಟೆಂಡರ್ ನ ಪ್ರಾಥಮಿಕ ಸಭೆಯನ್ನು ಬಿಎಂಟಿಸಿ ಜನವರಿ 10 ರಂದು ನಡೆಸಲಿದ್ದು, ಟೆಂಡರ್ ಸಲ್ಲಿಸಲು ಫೆಬ್ರವರಿ 9 ಕಡೆಯ ದಿನವಾಗಿದೆ. ಈ ಹಿಂದೆ ಬಿಎಂಟಿಸಿ `ಗ್ರೀನ್ ಬಸ್' ಗಳನ್ನೂ ಪರಿಚಯಿಸಲು ಹೊರಟಿದ್ದ ಬಿಎಂಟಿಸಿ ಅದಕ್ಕೆ ಅಧಿಕ ವೆಚ್ಚ ಭರಿಸಬೇಕಾದ ಹಿನ್ನೆಲೆಯಲ್ಲಿ ಖಾಸಗಿ ಕಂಪನಿಗಳಿಗೆ ಆ ಜವಾಬ್ದಾರಿಯನ್ನು ವಹಿಸಿತ್ತು.
ದೇಶ ಅಥವಾ ವಿದೇಶದಲ್ಲಿ ಕನಿಷ್ಠ 300 ಎಲೆಕ್ಟ್ರಿಕ್ ಬಸ್‌ಗಳನ್ನು ಎರಡು ವರ್ಷ ನಿರ್ವಹಣೆ ಮಾಡಿದ ಅನುಭವ ಹೊಂದಿರುವ ಕಂಪನಿಗಳಿಂದ 10 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದಡಿ ಎಲೆಕ್ಟ್ರಿಕ್ ಬಸ್ ಪಡೆಯಲು ನಿಗಮ ತೀರ್ಮಾನಿಸಿದೆ. 32 ಆಸನ ಸಾಮರ್ಥ್ಯದ 9 ಮೀಟರ್ ಉದ್ದ ಅಥವಾ 41 ಆಸನದ 11ರಿಂದ 12 ಮೀಟರ್ ಉದ್ದದ 150 ಹವಾನಿಯಂತ್ರಿತ ಎಲೆಕ್ಟ್ರಿಕ್ ಬಸ್ಗಳನ್ನು 10 ವರ್ಷಗಳ ಅವಧಿಗೆ ಬಿಎಂಟಿಸಿ ಗುತ್ತಿಗೆ ಪಡೆಯಲಿದೆ ಎಂದು ಸಾರಿಗೆ ಇಲಾಖೆ ಮೂಲಗಳು ತಿಳಿಸಿದೆ.
ಮೂರು ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲು ಸಿದ್ಧತೆ ನಡೆಸಿರುವ ಬಿಎಂಟಿಸಿ, ತ್ವರಿತಗತಿಯಲ್ಲಿ ಎಲೆಕ್ಟ್ರಿಕ್ ಬಸ್‌ಗಳನ್ನು ಕಾರ್ಯಾಚರಣೆಗೆ ಇಳಿಸುವ ಉತ್ಸಾಹದಲ್ಲಿದೆ. ಯೋಜನೆ ಪ್ರಕಾರ ಎಲ್ಲವೂ ಅಂದುಕೊಂಡಂತೆ ಸಾಗಿದರೆ 2018ರ ಏಪ್ರಿಲ್ ಅಥವಾ ಮೇ ತಿಂಗಳ ಅಂತ್ಯದ ವೇಳೆಗೆ ನಗರದಲ್ಲಿ ಸಾರ್ವಜನಿಕರಿಗೆ ಎಲೆಕ್ಟ್ರಿಕ್ ಬಸ್ ಸೇವೆ ಲಭ್ಯವಾಗಲಿದೆ.
ಈ ಮೂಲಕ ಇಡಿ ದೇಶದಲ್ಲೇ ಪ್ರಥಮ ಬಾರಿಗೆ ನಗರ ಸಾರಿಗೆ ವ್ಯವಸ್ಥೆಯಲ್ಲಿ ಎಲೆಕ್ರಿಕ್ ಬಸ್ ಸೌಲಭ್ಯ ಕಲ್ಪಿಸಿದ ಕೀರ್ತಿ ಬಿಎಂಟಿಸಿ ಗೆ ಸಲ್ಲುತ್ತದೆ.